ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನಾರ್ಜನೆಗೆ ಶಿಕ್ಷಣ ಅಗತ್ಯ: ಸಿಇಒ ದರ್ಶನ್‌

ಎಸ್ಸೆಸ್ಸೆಲ್ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
Last Updated 5 ಡಿಸೆಂಬರ್ 2019, 14:22 IST
ಅಕ್ಷರ ಗಾತ್ರ

ಕೋಲಾರ: ‘ವಿದ್ಯಾರ್ಥಿಗಳು ಬೇರೆಯವರು ಹೇಳಿದಂತೆ ಕೇಳುವುದನ್ನು ಬಿಟ್ಟು ತಮ್ಮ ಆಸೆ, ಆಸಕ್ತಿಯಂತೆ ಮುನ್ನಡೆದರೆ ಯಶಸ್ಸು ಶತಸಿದ್ಧ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್ ಕಿವಿಮಾತು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಸಾಧನೆ ಮಾಡಿದ ಕನ್ನಡ ಹಾಗೂ ಇಂಗ್ಲಿಷ್‌ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮ ದಾರಿ ತಾವೇ ಕಂಡುಕೊಳ್ಳಬೇಕು. ಆದರೆ, ಆ ದಾರಿ ಕೆಟ್ಟದಾಗಿರಬಾರದು’ ಎಂದರು.

‘ಅಂಕ ಗಳಿಕೆ ಮಾತ್ರ ಮುಖ್ಯವಲ್ಲ. ಜ್ಞಾನ ಪಡೆಯಲು ಶಿಕ್ಷಣ ಅತ್ಯಗತ್ಯ. ಸಾಮಾಜಿಕ ಸೇವೆ ಇಂದು ಜೀವನೋಪಾಯದ ಕ್ಷೇತ್ರವಾಗಿದೆ. ತಂದೆ, ತಾಯಿ ಹಾಗೂ ಗುರುಗಳಲ್ಲಿ ದೇವರನ್ನು ಕಾಣಬೇಕು. ಈ ಹಿಂದೆ ಎಂಜಿನಿಯರಿಂಗ್, ವೈದ್ಯಕೀಯ ಕೋರ್ಸ್‌ ಬಿಟ್ಟರೆ ಬೇರೆ ಆಯ್ಕೆ ಇರಲಿಲ್ಲ. ಈಗ ಕಾಲ ಬದಲಾಗಿದೆ. ಇಂದಿನ ಇಂಟರ್‌ನೆಟ್‌ ಯುಗದಲ್ಲಿ ಮೊಬೈಲ್‌ನಲ್ಲೇ ಮಾಹಿತಿ ಸಿಗುತ್ತದೆ ಮತ್ತು ಬದುಕಲು ದಾರಿ ಕಾಣುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಾಧಕ ವಿದ್ಯಾರ್ಥಿಗಳು ಸ್ಫೂರ್ತಿಯಾಗಬೇಕು. ಶೇ 73ರಷ್ಟಿರುವ ಜಿಲ್ಲೆಯ ಸಾಕ್ಷರತೆ ಪ್ರಮಾಣ ಶೇ 100 ಆಗಬೇಕು. ಸಮಾಜಕ್ಕೆ ನೆರವಾಗಿ, ಗುರಿ ಸಾಧನೆಯನ್ನು ಕೊನೆವರೆಗೂ ಬಿಡಬೇಡಿ. ಯಶಸ್ಸು ಗಳಿಸುವುದೇ ಮುಖ್ಯವಾಗಲಿ’ ಎಂದು ಸಲಹೆ ನೀಡಿದರು.

‘ಹಿಂದಿನ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆಯಲ್ಲಿ 360 ಮಂದಿ, ದ್ವಿತೀಯ ಭಾಷೆಯಲ್ಲಿ 191, ತೃತೀಯ ಭಾಷೆಯಲ್ಲಿ 141, ಗಣಿತದಲ್ಲಿ 48, ವಿಜ್ಞಾನದಲ್ಲಿ 11 ಹಾಗೂ ಸಮಾಜ ವಿಷಯದಲ್ಲಿ 155 ಮಂದಿ ಶೇ 100ರ ಸಾಧನೆ ಮಾಡಿದ್ದಾರೆ. ಇದು ಸುಲಭವಲ್ಲ’ ಎಂದು ತಿಳಿಸಿದರು.

ಪ್ರಥಮ ಸ್ಥಾನಕ್ಕೇರಲಿ: ‘ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅನಾನುಕೂಲತೆ ನಡುವೆಯೂ ಹೆಚ್ಚಿನ ಅಂಕ ಪಡೆದಿರುವುದು ಹೆಮ್ಮೆಯ ವಿಷಯ. ಶಿಕ್ಷಕರು, ಪೋಷಕರು ಈ ಸಾಧಕ ಮಕ್ಕಳ ಬೆನ್ನು ತಟ್ಟಬೇಕು. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಕ್ಕೇರಬೇಕು’ ಎಂದು ಜಿ.ಪಂ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್ ಆಶಿಸಿದರು.

‘ಉತ್ತಮ ಫಲಿತಾಂಶ ಸಾಧನೆಗೆ ಶಿಕ್ಷಕರ ಹಾಗೂ ಪೋಷಕರ ಪ್ರೋತ್ಸಾಹ ಮುಖ್ಯ. ಮಕ್ಕಳಿಗೆ ಹಣ ಕೂಡಿಡುವ ಬದಲು ವಿದ್ಯೆಯೆಂಬ ಆಸ್ತಿ ನೀಡಬೇಕು. ಮುಂದಿನ ಬಾರಿ 100 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಬೇಕು. ಫಲಿತಾಂಶ ಸುಧಾರಣೆಗೆ ಜಿ.ಪಂನಿಂದ ಎಲ್ಲಾ ಸಹಕಾರ ನೀಡುತ್ತೇವೆ. ಚಿನ್ನದ ಉತ್ಪಾದನೆ ಹಾಗೂ ರೇಷ್ಮೆ ಬೆಳೆಯಲ್ಲಿ ಜಿಲ್ಲೆ ಹೆಸರುವಾಸಿಯಾಗಿರುವಂತೆ ಶಿಕ್ಷಣದಲ್ಲೂ ಮುಂಚೂಣಿಗೆ ಬರಬೇಕು’ ಎಂದರು.

ಪ್ರತಿಭೆ ಗುರುತಿಸಿ: ‘ಪ್ರತಿ ವಿದ್ಯಾರ್ಥಿಯಲ್ಲೂ ಪ್ರತಿಭೆ ಸುಪ್ತವಾಗಿರುತ್ತದೆ. ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಪ್ರತಿಭೆ ಗುರುತಿಸಬೇಕು. ಉತ್ತಮ ಫಲಿತಾಂಶಕ್ಕೆ ಶಿಕ್ಷಕರಲ್ಲೂ ಬದಲಾವಣೆ ಅಗತ್ಯ. ಪರಿಣಾಮಕಾರಿ ಬೋಧನೆಯಿಂದ ಆಧುನಿಕತೆಗೆ ತಕ್ಕಂತೆ ಬದಲಾವಣೆ ಆಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದೇವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ವಿವರಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕನ್ನಡ ಹಾಗೂ ಆಂಗ್ಲ ಮಾಧ್ಯಮದ ತಲಾ 13 ವಿದ್ಯಾರ್ಥಿಗಳಿಗೆ ₹ 5 ಸಾವಿರ ಪ್ರತಿಭಾ ಪುರಸ್ಕಾರದ ಚೆಕ್ ವಿತರಿಸಿ ಸನ್ಮಾನಿಸಲಾಯಿತು. ಈ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು. ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ವಿಷಯ ಪರಿವೀಕ್ಷಕಿ ಗಾಯಿತ್ರಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT