ಹಿರಿಯರ ಗೌರವಿಸದೆ ಉನ್ನತಿ ಸಾಧ್ಯವಿಲ್ಲ:

6

ಹಿರಿಯರ ಗೌರವಿಸದೆ ಉನ್ನತಿ ಸಾಧ್ಯವಿಲ್ಲ:

Published:
Updated:
Deccan Herald

ಕೋಲಾರ: ‘ಹಿರಿಯರನ್ನು ಗುರುತಿಸಿ ಗೌರವಿಸದೆ ಸಮಾಜದ ಉನ್ನತಿ ಸಾಧ್ಯವಿಲ್ಲ’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅಶೋಕ್ ಬಿ.ಹಿಂಚಿಗೇರಿ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಹಿರಿಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ‘ತಂದೆ-ತಾಯಿ ನಡೆದಾಡುವ ಮತ್ತು ಕಣ್ಣಿಗೆ ಕಾಣುವ ದೇವರು. ಆದರೆ, ಮಕ್ಕಳು ತಂದೆ ತಾಯಿಯನ್ನು ನಿರ್ಲಕ್ಷಿಸುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಮಾತೃ ದೇವೋಭವ ಇಂದು ಅಶಿಸ್ತು ದೇವೊಭವವಾಗಿ ಮಾರ್ಪಟ್ಟಿದೆ. ಮಾರ್ಗದರ್ಶಕರ ಸ್ಥಾನದಲ್ಲಿರುವ ಹಿರಿಯನ್ನು ಕಡೆಗಣಿಸಲಾಗಿದೆ. ನಮ್ಮನ್ನು ಬೆಳೆಸಿ ಶಿಕ್ಷಣ ನೀಡಿ ಉತ್ತಮ ಜೀವನ ರೂಪಿಸಿದ ಪೋಷಕರನ್ನು ನಾವು ಹೇಗೆ ನಡೆಸಿಕೊಳ್ಳುತ್ತಿದ್ದೇವೆ ಎಂಬ ಬಗ್ಗೆ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಹಿರಿಯ ಜೀವಗಳನ್ನು ಎಂದಿಗೂ ನಿರ್ಲಕ್ಷಿಸಬಾರದು. ಅವರೊಂದಿಗೆ ನಾವಿದ್ದೇವೆ, ನೀವು ಏಕಾಂಗಿಯಲ್ಲ, ನಿಮ್ಮ ಹಿತರಕ್ಷಣೆ ನಮ್ಮ ಜವಾಬ್ದಾರಿ ಎಂಬ ಸಂದೇಶ ರವಾನೆಯಾಗಬೇಕು. ಆಗ ಪೋಷಕರಲ್ಲಿ ಬದುಕಿನ ಬಗ್ಗೆ ಆಶಾವಾದ ಮೂಡುತ್ತದೆ’ ಎಂದು ತಿಳಿಸಿದರು.

ಆಲೋಚನೆ ಬದಲಾಗಬೇಕು: ‘2011ರ ಜನಗಣತಿ ಪ್ರಕಾರ ದೇಶದಲ್ಲಿ 10.44 ಕೋಟಿ ಹಿರಿಯ ನಾಗರಿಕರಿದ್ದಾರೆ. ಆದರೆ, ಅವರನ್ನು ನಾವು ಸರಿಯಾಗಿ ಕಾಣುತ್ತಿಲ್ಲ. ಮನೆಯಲ್ಲಿ ದೇವರಂತೆ ಇರುವ ಅವರನ್ನು ಕಾಪಾಡದೆ ಗುಡಿ ಸುತ್ತಿದರೆ ಪ್ರಯೋಜನವಿಲ್ಲ. ಹೀಗಾಗಿ ಜನರ ಆಲೋಚನೆ ಬದಲಾಗಿ ಹಿರಿಯರನ್ನು ರಕ್ಷಿಸುವ ಮನೋಭಾವ ಬಲಗೊಳ್ಳಬೇಕು’ ಎಂದು ಆಶಿಸಿದರು.

ಜಿಲ್ಲೆ ಆಯ್ಕೆ: ‘ಹಿರಿಯರ ಸ್ನೇಹಿ ಸಮಾಜ ನಿರ್ಮಾಣ ಕಾರ್ಯಕ್ರಮಕ್ಕೆ ಕೋಲಾರ ಜಿಲ್ಲೆಯನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮ ಇಲ್ಲಿ ಯಶಸ್ವಿಯಾದರೆ ರಾಜ್ಯದ ಬೇರೆ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಕಾರ್ಯಕ್ರಮದ ಯಶಸ್ಸಿಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಜಿ.ಉಮಾ ಮನವಿ ಮಾಡಿದರು.

‘2026ರ ವೇಳೆಗೆ ದೇಶದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಸುಮಾರು 17.30 ಕೋಟಿ ಆಗಲಿದೆ.  ಹಿರಿಯ ನಾಗರಿಕರ ಪೈಕಿ ಶೇ 14.8ರಷ್ಟು ಮಂದಿ ಜೀವನೋಪಾಯಕ್ಕೆ ಬೇರೆಯವರ ಮೇಲೆ ಅವಲಂಬಿತರಾಗಿದ್ದಾರೆ. ಹಿರಿಯರ ಮೇಲಿನ ಶೋಷಣೆ ಪ್ರಕರಣಗಳು ಹೆಚ್ಚುತ್ತಿವೆ’ ಎಂದು ವಿಷಾದಿಸಿದರು.

ದಯನೀಯ ಬದುಕು: ‘ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ಯೋಜನೆ ಜಾರಿಗೊಳಿಸಿವೆ. ಆದರೆ, ಕೆಲವರಿಗೆ ಮಾತ್ರ ಯೋಜನೆಗಳ ಪ್ರಯೋಜನ ಸಿಗುತ್ತಿದೆ. ಸಾಕಷ್ಟು ಮಂದಿಗೆ ಯೋಜನೆಗಳ ಅರಿವಿಲ್ಲದ ಕಾರಣ ಅವರು ಸೌಕರ್ಯದಿಂದ ವಂಚಿತರಾಗಿ ದಯನೀಯವಾಗಿ ಬದುಕುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಜನಸಂಖ್ಯೆ ಹೆಚ್ಚಿದಂತೆ ಹಿರಿಯ ನಾಗರಿಕರು ಸಂಖ್ಯೆ ವೃದ್ಧಿಸುತ್ತಿದೆ. ಮಾನವೀಯ ಮೌಲ್ಯಗಳ ಕುಸಿತದಿಂದ ಹಿರಿಯ ನಾಗರಿಕರು ಮಾನಸಿಕ ಹಾಗೂ ದೈಹಿಕ ಸಮಸ್ಯೆ ಎದುರಿಸುವಂತಾಗಿದೆ. ಹಿರಿಯರ ರಕ್ಷಣೆ ನಮ್ಮ ಜವಾಬ್ದಾರಿ. ಅವರಿಗೆ ಗೌರವಯುತ ಹಾಗೂ ಸುರಕ್ಷಿತ ಬದುಕು ನೀಡಲು ದೃಢ ಸಂಕಲ್ಪ ಮಾಡಬೇಕು’ ಎಂದು ಸಲಹೆ ನೀಡಿದರು.

ನೆಮ್ಮದಿ ನೀಡಬೇಕು: ‘ಜಿಲ್ಲೆಯಲ್ಲಿ ಸುಮಾರು 1.50 ಲಕ್ಷ ಹಿರಿಯ ನಾಗರಿಕರಿದ್ದಾರೆ. ಅವರಿಗೆ ಸರ್ಕಾರದ ಯೋಜನೆಗಳ ಅರಿವು ಮೂಡಿಸಬೇಕು. ಜತೆಗೆ ಹಿರಿಯರ ರಕ್ಷಣೆಗಾಗಿ ಇರುವ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ ಅವರ ವಯಸ್ಸಿನ ಸಂಜೆಗೆ ನೆಮ್ಮದಿ ನೀಡಬೇಕು’ ಎಂದು ನಿಮ್ಹಾನ್ಸ್‌ ವೈದ್ಯ ಡಾ.ಪಿ.ಟಿ.ಶಿವಕುಮಾರ್ ಕೋರಿದರು.

ಹಿರಿಯರ ಸ್ನೇಹಿ ಸಮಾಜದ ಕೈಪಿಡಿ ಬಿಡುಗಡೆ ಮಾಡಲಾಯಿತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ಎಸ್.ಮಮದಾಪುರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುರಾಜ್ ಜಿ.ಶಿರೋಳ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌, ನಿಮ್ಹಾನ್ಸ್‌ ವೈದ್ಯ ಡಾ.ಗಿರೀಶ್‌ರಾವ್ ಪಾಲ್ಗೊಂಡಿದ್ದರು.

ಅಂಕಿ ಅಂಶಗಳು.....
* 10.44 ಕೋಟಿ ಹಿರಿಯ ನಾಗರಿಕರು ದೇಶದಲ್ಲಿದ್ದಾರೆ
* ಶೇ 14.8ರಷ್ಟು ಮಂದಿ ಅವಲಂಬಿತರು
* 1.50 ಲಕ್ಷ ಮಂದಿ ಹಿರಿಯರು ಜಿಲ್ಲೆಯಲ್ಲಿದ್ದಾರೆ
* 17.30 ಕೋಟಿ ಹಿರಿಯರು 2026ರ ವೇಳೆಗೆ ದೇಶದಲ್ಲಿರುತ್ತಾರೆ

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !