ಮುಳಬಾಗಿಲು: ಮಳೆಗೆ ಸೋರದೆ, ಗಾಳಿಗೆ ಚಾವಣಿ ಹಾರಿ ಹೋಗಬಾರದೆಂದು ಪ್ಲಾಸ್ಟಿಕ್ ಪೇಪರನ್ನು ಚಾವಣಿಗೆ ಗಟ್ಟಿಯಾಗಿ ಕಟ್ಟಿದ್ದು, ತಲೆ ಬಗ್ಗಿಸಿ ಒಳಗೆ ಹೋಗಿದರೆ ಹೊಗೆಯಿಂದ ಕಪ್ಪಾಗಿರುವ ಹುಲ್ಲಿನ ಚಾವಣಿ ಇದು ಪುಣ್ಯಹಳ್ಳಿ ಗ್ರಾಮದ ಮುನೆಪ್ಪ ಮತ್ತು ಗಂಗುಲಮ್ಮ ದಂಪತಿಯ ಮನೆಯ ಚಿತ್ರಣ.
ತಾಲ್ಲೂಕಿನ ಪುಣ್ಯಹಳ್ಳಿಯ ವಯೋವೃದ್ಧ ದಂಪತಿಗಳಾದ ಮುನೆಪ್ಪ, ಗಂಗುಲಮ್ಮ ದಂಪತಿ ಸುಮಾರು ಅರ್ಧ ಶತಮಾನದಿಂದಲೂ ಗುಡಿಸಿಲು ಮನೆಯಲ್ಲಿ ವಾಸಿಸುತ್ತಿದ್ದಾರೆ. ಮುನೆಪ್ಪ ಹುಟ್ಟಿದಾಗಿನಿಂದಲೂ ಹುಲ್ಲು ಮತ್ತು ಕಬ್ಬಿನ ಸೋಗೆಯಿಂದ ನಿರ್ಮಿಸಿರಿರುವ ಗುಡಿಸಿಲಿನಲ್ಲೇ ಜೀವನ ಸಾಗಿಸುತ್ತಿದ್ದಾರೆ.
ಗ್ರಾಮದ ಮಧ್ಯಭಾಗದಲ್ಲಿರುವ ಗುಡಿಸಿಲು ಸಂಪೂರ್ಣವಾಗಿ ಬೀಳುವ ಸ್ಥಿತಿಯಲ್ಲಿದ್ದು, ಮಣ್ಣಿನಿಂದ ನಿರ್ಮಿಸಿರುವ ಗೋಡೆಗಳು ಆಗಲೋ ಈಗಲೋ ಬೀಳುವ ಹಂತದಲ್ಲಿವೆ. ಚಾವಣಿಗೆ ಹಾಕಿರುವ ಮರದ ಕೊಂಬೆಗಳು, ಬಿದಿರು ಕಡ್ಡಿಗಳು ಮುರಿದು ಬೀಳುವ ಸ್ಥಿತಿಯಲ್ಲಿವೆ. ಜತೆಗೆ ಚಾವಣಿಗೆ ಹಾಕಿರುವ ಹುಲ್ಲು ಮತ್ತು ಸೋಗೆ ಹುಲ್ಲು ಪುಡಿಯಾಗಿ ಉದುರಿತ್ತಿದೆ. ಇಂತಹ ಗುಡಿಸನ್ನು ಮಳೆ ಬಂದರೆ ಸೋರದಿರಲಿ ಹಾಗೂ ಗಾಳಿ ಚಾವಣಿ ಹಾರಬಾರದು ಎಂದು ಪ್ಲಾಸ್ಟಿಕ್ ಕವರ್ ಹಾಕಿ ಹಗ್ಗದಿಂದ ಗಟ್ಟಿಯಾಗಿ ಗುಡಿಸಿಲನ್ನು ಕಟ್ಟಿಕೊಂಡು ದಂಪತಿ ಜೀವನ ಸಾಗಿಸುತ್ತಿದ್ದಾರೆ.
ಸುಮಾರು ವರ್ಷಗಳಿಂದಲೂ ಇದೇ ಗುಡಿಸಿಲಿನಲ್ಲಿ ದಂಪತಿ ವಾಸಿಸುತ್ತಿದ್ದರೂ ಗ್ರಾಮ ಪಂಚಾಯಿತಿಯಾಗಲಿ, ಜನ ಪ್ರತಿನಿಧಿಗಳಾಗಲಿ ಈ ದಂಪತಿಗೆ ಮನೆ ಮಂಜೂರು ಮಾಡಿಕೊಡದೆ ಇರುವುದು ವಿಪರ್ಯಾಸ. ಚುನಾವಣಾ ಸಮಯದಲ್ಲಿ ಸರ್ಕಾರದಿಂದ ಮನೆ ಮಂಜೂರು ಮಾಡಿಸುತ್ತೇವೆ ಎಂದು ಹೇಳುವ ಜನಪ್ರತಿನಿಧಿಗಳು, ಗ್ರಾಮ ಸಭೆ ಹಾಗೂ ವಾರ್ಡ್ ಸಭೆಗಳಲ್ಲಿ ಮನೆ ಮಂಜೂರು ಮಾಡುತ್ತೇವೆ ಎಂದು ಹೇಳುವ ಪಂಚಾಯಿತಿ ಅಧಿಕಾರಿಗಳು ಇದುವರೆಗೂ ಮನೆ ಮಂಜೂರು ಮಾಡದೆ ಇರುವುದು ಅಚ್ಚರಿಯ ಸಂಗತಿ.
ಇನ್ನು ದಂಪತಿಗೆ ಮೂರು ಮಕ್ಕಳಿದ್ದು, ಎಲ್ಲರಿಗೂ ಮದುವೆ ಮಾಡಿದ್ದು. ಅವರು ಅವರ ಪಾಡಿಗೆ ಅಲ್ಲಲ್ಲಿ ವಾಸಿಸುತ್ತಿದ್ದಾರೆ. ಆದರೆ ಮುನೆಪ್ಪ ದಂಪತಿ ಗುಡಿಸಿಲಿನಲ್ಲಿ ವಾಸಿಸುತ್ತಿದ್ದಾರೆ. ಗುಡಿಸಿಲನ ಒಳಗೆ ಹೋಗಬೇಕಾದರೆ ತಲೆ ಬಗ್ಗಿಸಿಕೊಂಡು ಹೋಗುವಂತಹ ಚಿಕ್ಕ ಬಾಗಿಲು. ತಲೆಗೆ ತಾಗುವ ಚಾವಣಿ, ಹೊಗೆಯಿಂದ ಗುಡಿಸಲು ಪೂರ್ತಿ ಕಪ್ಪಾಗಿದೆ. ನೆಲವನ್ನು ಸಗಣಿಯಿಂದ ಸಾರಿಸಿದ್ದು, ಮಳೆಗಾಲದಲ್ಲಿ ಮನೆಯ ಒಳಗೆ ಕೂರಲಾಗದಷ್ಟು ಜೌಗು ಹಿಡಿಯುತ್ತದೆ. ಅನೇಕ ಬಾರಿ ಪಂಚಾಯಿತಿ ವತಿಯಿಂದ ಮನೆಗಾಗಿ ಅಲೆದಾಡಿ ಸುಮ್ಮನಾಗಿದ್ದೇವೆ ಎಂದು ಮುನೆಪ್ಪ ಅಳಲು ತೋಡಿಕೊಂಡರು.
ಗುಡಿಸಿಲು ಯಾವಾಗ ಬೀಳುತ್ತದೆಯೋ ಯಾರಿಗೂ ತಿಳಿಯದು. ಆದರೆ, ದಂಪತಿಗಳು ಮಾತ್ರ ಗುಡಿಸಿಲನ್ನೇ ಸರ್ವಸ್ವ ಎಂದು ತಿಳಿದು ಇಳಿ ವಯಸ್ಸಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕನಿಷ್ಠ ಈ ವಯಸ್ಸಿನಲ್ಲಾದರೂ ಸರ್ಕಾರದಿಂದ ದಂಪತಿಗಳಿಗೆ ಮನೆ ಮಂಜೂರು ಮಾಡಿದರೆ ಅನುಕೂಲವಾಗುತ್ತದೆ ಎಂಬುದು ಸ್ಥಳೀಯರ ಮಾತಾಗಿದೆ.
ಒಂದು ಸುಸಜ್ಜಿತ ಮನೆ ಬೇಕು ಎಂದು ಆಸೆ ಪಡುವ ದಂಪತಿಗಳು, ಸರ್ಕಾರದಿಂದ ಬರುವ ಹಣದಲ್ಲಿ ಮನೆ ಕಟ್ಟಲಾಗುವುದಿಲ್ಲ ಎಂಬ ಮನಸ್ಥಿತಿ ಹೊಂದಿದ್ದು. ಈ ಕಾರಣಕ್ಕಾಗಿಯೇ ಪಂಚಾಯಿತಿಯಲ್ಲಿ ಮನೆ ಹಾಕಿಸಿಕೊಳ್ಳುವ ಒತ್ತಡ ಮಾಡುತ್ತಿಲ್ಲ ಎಂಬುದು ಕೆಲವರ ಮಾತಾಗಿದೆ. ಹಾಗಾಗಿ ಸರ್ಕಾರದಿಂದ ಸಿಗುವ ಹಣದಲ್ಲೇ ಮನೆ ಕಟ್ಟಿಸಿಕೊಳ್ಳಬಹುದು ಎಂಬ ಅರಿವನ್ನು ಅಧಿಕಾರಿಗಳು ಮೂಡಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.