ವೃದ್ಧರು–ಅನಾಥರಿಗೆ ಆತ್ಮಸ್ಥೈರ್ಯ ತುಂಬಿ: ಧನರಾಜ್ ಹೇಳಿಕೆ

ಕೋಲಾರ: ‘ಮುಸ್ಸಂಜೆ ಮನೆಯಲ್ಲಿನ ವಯೋವೃದ್ಧರು, ಅನಾಥ ಮಕ್ಕಳೊಂದಿಗೆ ದೀಪಾವಳಿ ಹಬ್ಬ ಆಚರಿಸುವ ಮೂಲಕ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ’ ಎಂದು ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಆರ್.ಧನರಾಜ್ ಹೇಳಿದರು.
ಜಾಗೃತಿ ಸೇವಾ ಸಂಸ್ಥೆ ವತಿಯಿಂದ ನಗರದ ಮುಸ್ಸಂಜೆ ಮನೆ ವೃದ್ಧಾಶ್ರಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ನಾವು ನಿಮ್ಮೊಂದಿಗೆ ದೀಪಾವಳಿ ಸಂಭ್ರಮ’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ನೋಮುದಾರ ಕಟ್ಟಿ, ಸಿಹಿ ಹಂಚಿ ಮಾತನಾಡಿದರು.
‘ಸಮಾಜದಲ್ಲಿ ಎಷ್ಟೋ ಮಂದಿ ದೀಪಾವಳಿಯಂತಹ ಸಂಭ್ರಮ, ಹಬ್ಬ ಆಚರಣೆ ಹಾಗೂ ಮಕ್ಕಳ ವಾತ್ಸಲ್ಯದಿಂದ ದೂರ ಉಳಿಯುತ್ತಾರೆ. ಕೆಲ ಮಕ್ಕಳು ಸಹ ಇಂತಹ ಸಂಭ್ರಮ ಸಿಗದೆ ವಂಚಿತರಾಗಿದ್ದಾರೆ. ಹಿರಿಯ ನಾಗರೀಕರಿಗೆ ಜೀವನದ ಸಂಧ್ಯಾ ಕಾಲದಲ್ಲಿ ಸಿಗಬೇಕಾದ ಪ್ರೀತಿ ಮತ್ತು ಆರೈಕೆ ಇಲ್ಲದೆ ಹೋಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಅನಾಥ ಮಕ್ಕಳಿಗೆ ತಂದೆ, ತಾಯಿಯ ಪ್ರೀತಿ ಸಿಗುವುದಿಲ್ಲ. ಅವರಿಗೆ ಹಬ್ಬವಿಲ್ಲವೆಂಬ ಕೊರತೆ ನೀಗಲು ದಾನಿಗಳ ನೆರವಿನಿಂದ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಿ, ಸಿಹಿ ಊಟದೊಂದಿಗೆ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಬದುಕು ಯಾರಿಗೂ ಶಾಶ್ವತವಲ್ಲ. ಆದರೆ, ಬದುಕಿನಲ್ಲಿ ನಮ್ಮ ನಡೆ ಪ್ರಮುಖವಾದದ್ದು. ಸಾಕಿ ಬೆಳೆಸಿದ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
‘ಪೋಷಕರಿಗೆ ವಯಸ್ಸಾದಾಗ ಅವರ ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಸರಿಯಿರುವುದಿಲ್ಲ. ಅವರಿಗೆ ಆಶ್ರಯವಾಗಿ ಯಾರಾದರೂ ಪಕ್ಕದಲ್ಲಿ ಇರಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆತ್ತ ಮಕ್ಕಳು ತಂದೆ ತಾಯಿಯನ್ನು ಮನೆಯಿಂದ ಹೊರ ಹಾಕುವ ಪ್ರವೃತ್ತಿ ಹೆಚ್ಚುತ್ತಿದೆ. ವಯಸ್ಸಾದಾಗ ಅವರನ್ನು ನೋಡಿಕೊಳ್ಳುವವರು ಇಲ್ಲದೆ ಬೀದಿ ಪಾಲಾಗುವಂತೆ ಮಾಡುವ ಮನಸ್ಥಿತಿ ಬೆಳೆಯುತ್ತಿದೆ’ ಎಂದು ವಿಷಾದಿಸಿದರು.
‘ಮಕ್ಕಳಲ್ಲಿ ಹಿರಿಯರನ್ನು ಗೌರವಿಸುವ ಮತ್ತು ಪ್ರೀತಿಸುವ ಸಂಸ್ಕಾರ ಬೆಳೆಸಬೇಕು. ಮುಸ್ಸಂಜೆ ಮನೆಯು ವಯೋವೃದ್ಧರಿಗೆ ಆಶ್ರಯ ನೀಡಿ ಅವರಿಗೆ ಉತ್ತಮ ಆಹಾರ, ಬಟ್ಟೆ, ವಸತಿ ಸೌಕರ್ಯ ಕಲ್ಪಿಸಿದೆ. ಇದು ನಿಜಕ್ಕೂ ಒಳ್ಳೆಯ ಕಾರ್ಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನೆರಳಾಗಿ ನಿಲ್ಲಬೇಕು: ‘ವಯೋವೃದ್ಧರಿಗೆ ಮಕ್ಕಳಿಂದ ದೂರವಾಗಿದ್ದೇವೆ ಎಂಬ ನೋವು ಕಾಡದಂತೆ ನಡೆಸಿಕೊಳ್ಳುತ್ತಿದ್ದೇವೆ. ಉಳ್ಳವರು ಸಂಸ್ಥೆಗೆ ನೆರವು ನೀಡಿ ನೆರಳಾಗಿ ನಿಲ್ಲಬೇಕು. ವಯೋವೃದ್ಧರು ಮತ್ತು ಅನಾಥ ಮಕ್ಕಳನ್ನು ಗುರುತಿಸಿ ಅವರಿಗೆ ಇಂತಹ ಹಬ್ಬ ಆಚರಿಸುವಂತೆ ಮಾಡಲು ಮತ್ತು ಅವರು ಸಮಾಜಮುಖಿಯಾಗಿ ಬೆಳೆಯಲು ಸಂಸ್ಥೆ ಅವಕಾಶ ಒದಗಿಸುತ್ತಾ ಬಂದಿದೆ’ ಎಂದು ಮುಸ್ಸಂಜೆ ಮನೆ ಕಾರ್ಯದರ್ಶಿ ಎ.ಎಸ್.ಶಾಂತಕುಮಾರಿ ವಿವರಿಸಿದರು.
ಕಾರ್ಮಿಕ ಇಲಾಖೆ ನಿವೃತ್ತ ಅಧಿಕಾರಿಗಳಾದ ರಾಜಗೋಪಾಲ್, ರಾಮಕೃಷ್ಣಪ್ಪ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.