ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದೇಶ ರವಾನೆಗೆ ಚುನಾವಣೆ ಅಸ್ತ್ರ

ಸರ್ಕಾರಗಳ ವೈಫಲ್ಯ: ಕಾಂಗ್ರೆಸ್ ಮಾಧ್ಯಮ ವಿಭಾಗದ ಸಹ ಅಧ್ಯಕ್ಷ ಸುದರ್ಶನ್ ಟೀಕೆ
Last Updated 21 ಅಕ್ಟೋಬರ್ 2020, 15:58 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯ ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ದ ಎಚ್ಚರಿಕೆ ನೀಡಲು ವಿಧಾನ ಪರಿಷತ್ ಹಾಗೂ ವಿಧಾನಸಭೆ ಉಪ ಚುನಾವಣೆ ಪ್ರಮುಖ ಅಸ್ತ್ರವಾಗಿದ್ದು, ಮತದಾರರು ಕಾಂಗ್ರೆಸ್ ಪಕ್ಷ ಬೆಂಬಲಿಸುವ ಮೂಲಕ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಬೇಕು’ ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಸಹ ಅಧ್ಯಕ್ಷ ವಿ.ಆರ್.ಸುದರ್ಶನ್ ಮನವಿ ಮಾಡಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆಯುತ್ತಿದೆ. ಜತೆಗೆ ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ಎಲ್ಲಾ ಕಡೆ ಕಾಂಗ್ರೆಸ್ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ’ ಎಂದರು.

‘ಸಭ್ಯ ರಾಜಕಾರಣಿಯಾಗಿರುವ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವ್ಯಕ್ತಿಗತ ಟೀಕೆ ಮಾಡಿರುವುದು ಶೋಭೆಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅಶ್ವತ್ಥನಾರಾಯಣ ಅವರು ಇಂತಹ ದುರಾಹಂಕಾರದ ಹೇಳಿಕೆ ನೀಡಿದ್ದಾರೆ. ಅವರು ಈ ಹೇಳಿಕೆ ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು.

‘ವಿಷಯಾಧಾರಿತವಾಗಿ ಟೀಕೆ ಮಾಡಲಿ. ಅದು ಬಿಟ್ಟು ವೈಯಕ್ತಿಕ ಟೀಕೆ ಸರಿಯಲ್ಲ. ಮಧ್ಯಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರು ಮಾಡಿದ ಟೀಕೆಯನ್ನು ಪಕ್ಷ ಬೆಂಬಲಿಸಲಿಲ್ಲ’ ಎಂದು ತಿಳಿಸಿದರು.

‘ದಪ್ಪ ಚರ್ಮದ ಕೇಂದ್ರ ಸರ್ಕಾರವೂ ಯಾವುದೇ ಚರ್ಚೆಯಿಲ್ಲದೆ ಪ್ರಮುಖ ಮಸೂದೆಗಳನ್ನು ಜಾರಿ ಮಾಡುತ್ತಿದೆ. ಆಡಳಿತರೂಢ ಬಿಜೆಪಿ ಸರ್ಕಾರ ಸಂಸತ್ತಿನ ಘನತೆಗೆ ಕುತ್ತು ತಂದಿದೆ. ಬಿಜೆಪಿಯು ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ವಿರೋಧಿಗಳನ್ನು ಸದೆಬಡಿಯುವ ಕೆಲಸ ಮಾಡುತ್ತಿದೆ’ ಎಂದು ಕಿಡಿಕಾರಿದರು.

ಆತಂಕಕಾರಿ ಬೆಳವಣಿಗೆ: ‘ದೇಶದ ಅರ್ಥ ವ್ಯವಸ್ಥೆ ಶೂನ್ಯದತ್ತ ಸಾಗಿದ್ದು, ಇದು ಆತಂಕಕಾರಿ ಬೆಳವಣಿಗೆ. ಕೇಂದ್ರವು ರೈತ ಮತ್ತು ಕಾರ್ಮಿಕ ವಿರೋಧಿ ಕಾನೂನು ಜಾರಿಗೊಳಿಸಿದೆ. ಇದನ್ನು ಆರ್‍ಎಸ್‍ಎಸ್‌ನ ಅಂಗ ಕಾರ್ಮಿಕ ಸಂಸ್ಥೆಗಳೇ ಖಂಡಿಸಿವೆ’ ಎಂದು ಹೇಳಿದರು.

‘ನಿರುದ್ಯೋಗ ಸಮಸ್ಯೆ ನಿವಾರಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಬಿಜೆಪಿ ಜನರ ದಿಕ್ಕು ತಪ್ಪಿಸಿ ಆಡಳಿತ ನಡೆಸುತ್ತಿದೆ. ಈ ಸರ್ಕಾರಗಳಿಗೆ ಎಚ್ಚರಿಕೆ ನೀಡಲು ಪ್ರಜ್ಞಾವಂತ ಮತದಾರರಿಗೆ ಇದು ಸಕಾಲ. ಪರಿಷತ್‌ ಚುನಾವಣೆ ಮತ್ತು ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು’ ಎಂದು ಕೋರಿದರು.

ಪತ್ರಿಕಾಗೋಷ್ಠಿ ಬಳಿಕ ಸುದರ್ಶನ್ ಅವರು ಸರ್ಕಾರಿ ಮಹಿಳಾ ಕಾಲೇಜು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಆಗ್ನೇಯ ಪದವೀಧರರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಮೇಶ್‌ಬಾಬು ಪರ ಮತ ಯಾಚಿಸಿದರು. ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಉಪಾಧ್ಯಕ್ಷ ನಾಗಭೂಷಣ್‌, ಪ್ರಧಾನ ಕಾರ್ಯದರ್ಶಿ ಜಗದೀಶ್, ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮೀನಾರಾಯಣ, ಪದಾಧಿಕಾರಿಗಳಾದ ಸೋಮಶೇಖರ್, ವೆಂಕಟಾಚಲಪತಿ, ಜಮೀರ್ ಅಹಮ್ಮದ್‌, ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT