ಸೋಮವಾರ, ಜನವರಿ 20, 2020
20 °C

ಮಕ್ಕಳ ಪರೀಕ್ಷಾ ಭಯ ಹೋಗಲಾಡಿಸಿ: ಎ.ಎನ್.ನಾಗೇಂದ್ರಪ್ರಸಾದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಶಿಕ್ಷಕರು ಮಕ್ಕಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸಿ ಆತ್ಮವಿಶ್ವಾಸ ತುಂಬಬೇಕು. ‘ನನ್ನನ್ನೊಮ್ಮೆ ಗಮನಿಸಿ’ ಪ್ರಶ್ನೆಕೋಠಿ ಸಹಕಾರಿಯಾಗುವಂತೆ ಮಕ್ಕಳ ಮನಸ್ಥಿತಿ ಅರಿತು ಮಾದರಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಬೇಕು’ ಎಂದು ಜಿಲ್ಲಾ ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಮಾದರಿ ಪ್ರಶ್ನೆಪತ್ರಿಕೆ ಸಿದ್ಧತೆ ಕಾರ್ಯಾಗಾರದಲ್ಲಿ ಮಾತನಾಡಿ, ‘ಇಲಾಖೆಯು ಈಗಾಗಲೇ ನಿತ್ಯಸ್ಫೂರ್ತಿ ಮೂಲಕ ಫಲಿತಾಂಶ ಸುಧಾರಿಸಲು ಶಾಲೆಗಳಿಗೆ ಕ್ರಿಯಾಯೋಜನೆ ನೀಡಿದೆ. ಇದೀಗ ಮಾದರಿ ಪ್ರಶ್ನೆಪತ್ರಿಕೆ ಕರಡು ಪ್ರತಿ ಸಿದ್ಧವಾಗಿದೆ’ ಎಂದರು.

‘ಮಕ್ಕಳ ಮನಸ್ಥಿತಿ ಅರಿತು 32 ಅಂಕಗಳಿಗೆ ಸುಲಭವಾಗಿ, 30 ಅಂಕ ಸಾಮಾನ್ಯ ವಿದ್ಯಾರ್ಥಿಗಳಿಗೆ, 18 ಅಂಕ ಕಠಿಣ ಪ್ರಶ್ನೆಗಳಿರುವಂತೆ ಪ್ರಶ್ನೆಪತ್ರಿಕೆ ಸಿದ್ಧಪಡಿಸಬೇಕು. ಹಿಂದಿನ ವರ್ಷ ನನ್ನನ್ನೊಮ್ಮೆ ಗಮನಿಸಿ ಪ್ರಶ್ನೆಕೋಠಿಯು ಮಕ್ಕಳ ಫಲಿತಾಂಶ ವೃದ್ಧಿಗೆ ಸಹಕಾರಿಯಾಗಿದೆ. ಈ ಬಾರಿಯೂ ಜಿಲ್ಲೆಯ ಎಲ್ಲಾ 6 ಶೈಕ್ಷಣಿಕ ವಲಯಗಳಿಂದ ನುರಿತ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಫಲಿತಾಂಶ ಸಾಧನೆಯಲ್ಲಿ ಜಿಲ್ಲೆ ಪ್ರಥಮ ಸ್ಥಾನಕ್ಕೇರಲು ಶ್ರಮಿಸಿ’ ಎಂದು ಸೂಚಿಸಿದರು.

‘ಈ ಬಾರಿ ಪ್ರಶ್ನೆಪತ್ರಿಕೆ ಮಾದರಿ ಬದಲಾಗಿದ್ದು, ಪ್ರಥಮ ಭಾಷೆಗೆ ಮಾತ್ರ 45 ಪ್ರಶ್ನೆಗಳಿರುತ್ತವೆ. ಉಳಿದಂತೆ ಎಲ್ಲಾ ವಿಷಯಗಳಲ್ಲೂ 38 ಪ್ರಶ್ನೆಗಳಿರುತ್ತವೆ. ಉಪ ಪ್ರಶ್ನೆಗಳಿಗೆ ಅವಕಾಶವಿಲ್ಲ. ನೇರ ಪ್ರಶ್ನೆಗಳಿರುತ್ತವೆ. ವಿಜ್ಞಾನದಲ್ಲಿ 12 ಅಂಕಗಳಿಗೆ ಚಿತ್ರ ಬರೆಯಲು ಅವಕಾಶ ನೀಡಲಾಗುತ್ತದೆ. ಪ್ರಶ್ನೆಪತ್ರಿಕೆ ನೀಲನಕ್ಷೆ ಬದಲಾವಣೆಗೆ ಅನುಗುಣವಾಗಿ ಅದೇ ಮಾದರಿಯಲ್ಲಿ ತಯಾರಿಸಿ’ ಎಂದು ಹೇಳಿದರು.

‘ಪಠ್ಯಕ್ರಮದಿಂದ ಹೊರತಾದ ಯಾವುದೇ ಪ್ರಶ್ನೆ ಇರಬಾರದು. ಅನ್ವಯಿಕ ಪ್ರಶ್ನೆಗಳಿರಲಿ. ಆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿ. ಜಟಿಲ ಪಶ್ನೆಗಳ ಜತೆಗೆ ಪ್ರಚಲಿತ ಪ್ರಶ್ನೆಗಳಿಗೆ ಅವಕಾಶವಿರಲಿ’ ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕರಾದ ಟಿ.ಕೃಷ್ಣಪ್ಪ, ಕೆ.ಎಸ್.ಶಶಿವಧನ, ಗಾಯತ್ರಿ, ತಾಲ್ಲೂಕು ನೋಡಲ್ ಅಧಿಕಾರಿ ಮುನಿರತ್ನಯ್ಯಶೆಟ್ಟಿ, ಶಿಕ್ಷಣ ಸಂಯೋಜಕರಾದ ಸಿರಾಜುದ್ದೀನ್, ಅನ್ವರ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು