ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ

ಸರ್ಕಾರಕ್ಕೆ ₹ 750 ಕೋಟಿಗೆ ಪ್ರಸ್ತಾವ: ಉಸ್ತುವಾರಿ ಸಚಿವ ನಾಗೇಶ್‌ ಹೇಳಿಕೆ
Last Updated 4 ಜನವರಿ 2021, 15:38 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರಕ್ಕೆ ₹ 750 ಕೋಟಿ ಪ್ರಸ್ತಾವ ಸಲ್ಲಿಸುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.

2021-22ನೇ ಸಾಲಿನ ಆಯವ್ಯಯ ಸಂಬಂಧ ಇಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಮುಳಬಾಗಿಲು ನಗರಕ್ಕೆ ಒಳಚರಂಡಿ ಯೋಜನೆಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಹೇಳಿದರು.

‘ಕೋಲಾರದ ಸೋಮೇಶ್ವರ ದೇವಸ್ಥಾನ, ಅಂತರಗಂಗೆ, ಮುಳಬಾಗಿಲು ತಾಲ್ಲೂಕಿನ ಆವಣಿ ಮತ್ತು ಕುರುಡುಮಲೆ ದೇವಸ್ಥಾನ ಅಭಿವೃದ್ಧಿ, ಬಂಗಾರಪೇಟೆಯ ಕೋಟಿಲಿಂಗೇಶ್ವರ, ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿಯನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಪ್ರಸ್ತಾವ ಸಲ್ಲಿಸುತ್ತೇವೆ’ ಎಂದು ವಿವರಿಸಿದರು.

‘ಜಿಲ್ಲೆಯು ಅಂತರ ರಾಜ್ಯ ಗಡಿಯಲ್ಲಿರುವುದರಿಂದ ಕೋಲಾರದಲ್ಲಿ ಹೈಟೆಕ್ ಬಸ್‌ ನಿಲ್ದಾಣ ಹಾಗೂ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸುಸಜ್ಜಿತ ಹೋಟೆಲ್ ಸ್ಥಾಪನೆಗೂ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಜಿಲ್ಲಾ ಕೇಂದ್ರದ ಹೊಸ ಪರಿವೀಕ್ಷಣಾ ಮಂದಿರದ ಅಗತ್ಯವಿದ್ದು, ಮಂಜೂರು ಮಾಡುವಂತೆ ಸರ್ಕಾರವನ್ನು ಕೋರುತ್ತೇವೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.

ಅಧ್ಯಯನ ಕೇಂದ್ರ: ‘22 ಎಕರೆ ಜಾಗದಲ್ಲಿ 1,200 ಬಡವರಿಗೆ ಉಚಿತವಾಗಿ ನಿವೇಶನ ನೀಡಲು ಲೇಔಟ್ ಅಭಿವೃದ್ಧಿಪಡಿಸಲು ₹ 20 ಕೋಟಿ ಬಿಡುಗಡೆ ಮಾಡಬೇಕು. ಮಾಲೂರು ಕೆರೆ ಅಭಿವೃದ್ಧಿಗೆ ₹ 23.85 ಕೋಟಿ ಅಗತ್ಯವಿದೆ’ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮನವಿ ಮಾಡಿದರು.

‘ಮಾಲೂರಿನ ಸಮಗ್ರ ಅಭಿವೃದ್ಧಿಗೆ ₹ 30 ಕೋಟಿ ಅಂದಾಜು ವೆಚ್ಚದ ವಿವಿಧ ಯೋಜನೆ ರೂಪಿಸಬೇಕು. ಮಾಸ್ತಿ ವೆಂಕಟೇಶ್ ಅಯ್ಯಂಗಾರ್‌ ನೆನಪಿನಲ್ಲಿ ಅವರ ಹುಟ್ಟೂರು ಮಾಸ್ತಿಯಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಬೇಕು’ ಎಂದು ಸಲಹೆ ನೀಡಿದರು.

ಶಾಸಕಿ ಗರಂ: ‘ಕೆಜಿಎಫ್‌ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ 6 ತಿಂಗಳಿನಿಂದ ಸಂಬಳ ಕೊಟ್ಟಿಲ್ಲ. ಕೋವಿಡ್ ಸಂಕಷ್ಟದ ಸಮಯದಲ್ಲಿ ನೌಕರರಿಗೆ ಸಂಬಳ ಕೊಡದಿದ್ದರೆ ಅವರು ಜೀವನ ನಡೆಸುವುದು ಹೇಗೆ?’ ಎಂದು ಕೆಜಿಎಫ್ ಶಾಸಕಿ ಎಂ.ರೂಪಕಲಾ ಅಸಮಾಧಾನ ವ್ಯಕ್ತಪಡಿಸಿದರು.

‘ಸಂಬಳ ಬಾಕಿ ಉಳಿಸಿಕೊಂಡಿರುವ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಕಡತವನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿದ್ದೇವೆ ಎಂದು ಹೇಳುತ್ತಾರೆ. ಡಿ.ಸಿ ಕಚೇರಿಗೆ ಬಂದು ಕೇಳಿದರೆ ಕಡತ ಕಳೆದು ಹೋಗಿದೆ ಎನ್ನುತ್ತಾರೆ. ಹೀಗಾದರೆ ಗುತ್ತಿಗೆ ನೌಕರರ ಸ್ಥಿತಿ ಹೇಗೆ?’ ಎಂದು ಪ್ರಶ್ನಿಸಿದರು.

ಇದರಿಂದ ಸಿಡಿಮಿಡಿಗೊಂಡ ಜಿಲ್ಲಾಧಿಕಾರಿಯು ಸಚಿವರ ಸಮ್ಮುಖದಲ್ಲೇ ಏರು ದನಿಯಲ್ಲಿ ಮಾತನಾಡಿದರು. ಆಗ ಶಾಸಕಿ ರೂಪಕಲಾ, ‘ನಾನು ಸಾಕಷ್ಟು ಜಿಲ್ಲಾಧಿಕಾರಿಗಳನ್ನು ನೋಡಿದ್ದೇನೆ. ಅವರು ಈ ರೀತಿ ನಡೆದುಕೊಂಡಿಲ್ಲ. ಅಧಿಕಾರಿಗಳು ಸಚಿವರ ಮುಂದೆಯೇ ಜನಪ್ರತಿನಿಧಿಗಳೊಂದಿಗೆ ಈ ರೀತಿ ಮಾತನಾಡಿದರೆ ಹೇಗೆ? ಜನಪ್ರತಿನಿಧಿಗಳಿಗೆ ಬೆಲೆ ಇಲ್ಲವೇ?’ ಎಂದು ಗರಂ ಆದರು.

ಪಕ್ಷಪಾತ ಧೋರಣೆ: ‘ಪ್ರಭಾವಿ ರಾಜಕಾರಣಿಯೊಬ್ಬರ ಕೈಗೊಂಬೆಯಾಗಿರುವ ಜಿಲ್ಲಾಧಿಕಾರಿಯು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ. ಗುತ್ತಿಗೆ ನೌಕರರಿಗೆ ಸಂಬಳ ಕೊಡುವವರು ಯಾರು? ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಂಡರೆ ಹೇಗೆ?’ ಎಂದು ರೂಪಕಲಾ ಕೆಂಡಾಮಂಡಲರಾದರು.

‘ಜಿಲ್ಲಾಧಿಕಾರಿಗೆ ಬೆಂಬಲವಾಗಿ ನಿಂತಿರುವ ಆ ಜನಪ್ರತಿನಿಧಿ ಪದೇಪದೇ ಕೆಜಿಎಫ್‌ಗೆ ಬರುತ್ತಾರೆ. ನಾನು ಕೆಜಿಎಫ್‌ನಲ್ಲಿ ಏನೂ ಕೆಲಸ ಮಾಡಿಲ್ಲವೆಂದು ಮಾಧ್ಯಮದಲ್ಲಿ ಹೇಳುತ್ತಾರೆ. ಈ ಮಣ್ಣಿನಲ್ಲಿ ಹುಟ್ಟಿರುವ ನನಗೂ ರಾಜಕೀಯ ತಂತ್ರಗಾರಿಕೆ ಗೊತ್ತು. ಅವರು ಅವಮಾನಿಸಿದರೆ ಜಗ್ಗುವವಳು ನಾನಲ್ಲ. ಈ ಹಿಂದಿನ ಶಾಸಕರಿಗಿಂತ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಯಾರೂ ಬೆರಳು ತೋರಿಸುವಂತೆ ನಡೆದುಕೊಂಡಿಲ್ಲ’ ಎಂದು ಪರೋಕ್ಷವಾಗಿ ಸಂಸದ ಮುನಿಸ್ವಾಮಿ ವಿರುದ್ಧ ಹರಿಹಾಯ್ದರು.

ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್, ಉಪ ವಿಭಾಗಾಧಿಕಾರಿ ಸೋಮಶೇಖರ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT