ಗ್ರಾ.ಪಂಗೊಂದು ಘನತ್ಯಾಜ್ಯ ಘಟಕ ಸ್ಥಾಪನೆ

ಮಂಗಳವಾರ, ಜೂನ್ 25, 2019
26 °C
ಸ್ವಚ್ಛಮೇವಜಯತೆ ಅಭಿಯಾನಕ್ಕೆ ಚಾಲನೆ

ಗ್ರಾ.ಪಂಗೊಂದು ಘನತ್ಯಾಜ್ಯ ಘಟಕ ಸ್ಥಾಪನೆ

Published:
Updated:
Prajavani

ಕೋಲಾರ: ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗೊಂದು ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಬಜೆಟ್‌ನಲ್ಲಿ ಅನುಮೋದನೆ ಸಿಕ್ಕಿದ್ದು, ಈಗಾಗಲೇ 7 ಘಟಕಗಳು ಮಂಜೂರಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ತಾಲ್ಲೂಕಿನ ಕುರಗಲ್ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸ್ವಚ್ಛ ಭಾರತ ಮಿಷನ್ ಆಶ್ರಯದಲ್ಲಿ ಮಂಗಳವಾರ ಆರಂಭಗೊಂಡ ಸ್ವಚ್ಛಮೇವ ಜಯತೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ‘ಪ್ರತಿ ಘನತ್ಯಾಜ್ಯ ಸಂಗ್ರಹ ಘಟಕಕ್ಕೆ ಸರ್ಕಾರದಿಂದ ₨ 20 ಲಕ್ಷ ಬಿಡುಗಡೆಯಾಗಲಿದ್ದು, ನರೇಗಾ ಯೋಜನೆ ಬಳಸಿಕೊಂಡು ಘಟಕ ನಿರ್ಮಾಣ ಮಾಡಲಾಗುವುದು’ ಎಂದರು.

‘ಈಗಾಗಲೇ 7 ಘಟಕಗಳಿಗೆ ಮಂಜೂರಾತಿ ಸಿಕ್ಕಿದ್ದು, ಉಳಿದ 43 ಘಟಕಗಳಿಗೆ ಅಗತ್ಯ ಜಮೀನಿಗಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ಉತ್ತನೂರಿನಲ್ಲಿ ಒಂದು ಘಟಕ ಆರಂಭವಾಗಿದೆ. ಕಸ ಸಂಗ್ರಹಿಸಲು ವಾಹನ ಖರೀದಿಗೆ ಒತ್ತು ನೀಡಲಾಗುವುದು’ ಎಂದು ಹೇಳಿದರು.

‘ಸಂಗ್ರಹಿಸಿದ ಹಸಿ ಕಸವನ್ನು ಕಾಂಪೋಸ್ಟ್ ಗೊಬ್ಬರವಾಗಿ ತಯಾರಿಸಲಾಗುವುದು. ಒಣಕಸವನ್ನು ಮರು ಬಳಕೆ ಮಾಡಲು ಕ್ರಮವಹಿಸಲಾಗುತ್ತದೆ. ಮೊದಲಿಗೆ ಹೋಬಳಿ ಹಾಗೂ ದೊಡ್ಡ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಘನತ್ಯಾಜ್ಯ ಘಟಕ ಸ್ಥಾಪನೆಯಾಗಲಿದ್ದು, ಮುಂದಿನ ದಿನಗಳಲ್ಲಿಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಆರಂಬಗೊಳ್ಳಲಿದೆ’ ಎಂದರು.

‘ಸ್ವಚ್ಛಮೇವ ಜಯತೆ ಅಡಿ ಒಂದು ತಿಂಗಳ ಕಾಲ ಅಭಿಯಾನ ನಡೆಯಲಿದ್ದು, ಇದಕ್ಕಾಗಿ 3 ರಥಗಳನ್ನು ನೀಡಲಾಗಿದೆ, ಎರಡು ತಾಲ್ಲೂಕಿಗೆ ಒಂದರಥ ಸಾಗಿ ಬರಲಿದ್ದು, ಗ್ರಾಮ ಪಂಚಾಯಿತಿ ಹಾಗೂ ಗ್ರಾಮಗಳಲ್ಲಿ ಸ್ವಚ್ಛತೆ, ಶೌಚಾಲಯ ಬಳಕೆ ಕುರಿತು ಅರಿವು ಮೂಡಿಸಲಾಗುವುದು’ ಎಂದು ಹೇಳಿದರು.

‘ಜಲಾಮೃತ ಯೋಜನೆಯಡಿ ಜಿಲ್ಲೆಯ ಜಲಮೂಲಗಳ ರಕ್ಷಣೆ, ಜಲಮೂಲಗಳ ತಯಾರಿ ಜತೆಗೆ ಪ್ರತಿ ಗ್ರಾಮ ಪಂಚಾಯಿತಿಗೆ ತಲಾ 1 ಸಾವಿರ ಗಿಡಗಳಂತೆ 156 ಗ್ರಾಮ ಪಂಚಾಯಿತಿಗಳಿಗೆ ಒಟ್ಟು 1.56 ಲಕ್ಷ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದ್ದು, ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಕೋರಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಯಶೋಧಾ ಮಾತನಾಡಿ, ‘ಆರೋಗ್ಯವೇ ಮಹಾಭಾಗ್ಯವಾಗಿರುವುದರಿಂದ ಜನತೆ ಸ್ವಚ್ಛತೆಗೆ ಒತ್ತು ನೀಡಬೇಕು. ಶಾಲಾ ಮೈದಾನದಲ್ಲಿ ಗಿಡನೆಟ್ಟು ಮಕ್ಕಳೇ ಒಂದೊಂದು ಗಿಡ ಪೋಷಿಸಬೇಕು’ ಎಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ರೂಪಶ್ರೀ, ಉಷಾ, ಸಿ.ಎಸ್.ವೆಂಕಟೇಶ್, ಅರುಣ್ ಪ್ರಸಾದ್, ಉಪಕಾರ್ಯದರ್ಶಿ ಲಕ್ಷ್ಮೀನಾರಾಯಣ, ಕುರಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷ ಕೃಷ್ಣಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ, ಪಿಯು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ವೆಂಕಟಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿರಾಜು ಹಾಜರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !