ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಕನಿಷ್ಠ ವೇತನ ನೀಡದೆ ಶೋಷಣೆ

ಅಧಿಕಾರಿಗಳ ಮುಂದೆ ಬಡ್ವೆ ಕಂಪನಿ ಕಾರ್ಮಿಕರ ಅಳಲು
Last Updated 21 ಅಕ್ಟೋಬರ್ 2020, 16:26 IST
ಅಕ್ಷರ ಗಾತ್ರ

ಕೋಲಾರ: ಕಾರ್ಮಿಕರ ಕಾನೂನು ಉಲ್ಲಂಘಿಸಿದ ಕಾರಣಕ್ಕೆ ಕಾರ್ಮಿಕ ಇಲಾಖೆಯು ಬಡ್ವೆ ಎಂಜಿನಿಯರಿಂಗ್‌ ಲಿಮಿಟೆಡ್ ಕಂಪನಿ ವಿರುದ್ಧ ದೂರು ದಾಖಲಿಸಿ ನೋಟಿಸ್‌ ಜಾರಿ ಮಾಡಿದ ಬೆನ್ನಲ್ಲೇ ಕಂಪನಿಯು ಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ ಶೋಷಿಸುತ್ತಿರುವ ಸಂಗತಿ ಬಯಲಾಗಿದೆ.

ಕಾರ್ಮಿಕ ನಿರೀಕ್ಷಕಿ ರಾಜೇಶ್ವರಿ ಹಾಗೂ ಇಲಾಖೆ ಸಿಬ್ಬಂದಿಯು ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಬಡ್ವೆ ಕಂಪನಿಗೆ ಖುದ್ದು ಭೇಟಿ ನೀಡಿ ತನಿಖೆ ಮಾಡಿದಾಗ ಕಂಪನಿ ಆಡಳಿತ ಮಂಡಳಿಯು ಕನಿಷ್ಠ ವೇತನ ನೀಡದೆ ಶೋಷಣೆ ಮಾಡುತ್ತಿದೆ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

ಕಂಪನಿಯು ಖಾಸಗಿ ಏಜೆನ್ಸಿಗಳಿಂದ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿರುವ ಕಾರ್ಮಿಕರನ್ನು ಗುತ್ತಿಗೆ ಕರಾರು ಉಲ್ಲಂಘಿಸಿ ಬೇರೆ ಕೆಲಸಗಳಿಗೆ ನಿಯೋಜಿಸಿರುವುದು ಅಧಿಕಾರಿಗಳ ತನಿಖೆ ವೇಳೆ ಸಾಬೀತಾಗಿದ್ದು, ಈ ಸಂಬಂಧ ಇಲಾಖೆಯು ಕಂಪನಿ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿತ್ತು.

ಅಲ್ಲದೇ, ಕಂಪನಿ ಆಡಳಿತ ಮಂಡಳಿಯ 5 ನಿರ್ದೇಶಕರು ಮತ್ತು ಕಂಪನಿಗೆ ಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ನಿಯೋಜಿಸಿರುವ 13 ಏಜೆನ್ಸಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಇದೀಗ ಕಂಪನಿಯು ಸರ್ಕಾರದ ನಿಯಮದ ಪ್ರಕಾರ ಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ ಶೋಷಿಸುತ್ತಿರುವುದು ಅಧಿಕಾರಿಗಳ ತನಿಖೆ ವೇಳೆ ಗೊತ್ತಾಗಿದೆ.

‘ಕಂಪನಿಯಲ್ಲಿ ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಮಾನವ ಸಂಪನ್ಮೂಲ ವಿಭಾಗಕ್ಕೆ ದೂರು ನೀಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅಧಿಕಾರಿಗಳು ಹಾಗೂ ಗುತ್ತಿಗೆ ಏಜೆನ್ಸಿ ಮಾಲೀಕರು ಒಟ್ಟಾಗಿ ವೇತನದ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಕೆಲಸಗಾರರು ಕಾರ್ಮಿಕ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ.

ಸ್ವಸ್ತಿಕ್‌ನಲ್ಲೂ ಉಲ್ಲಂಘನೆ: ಬಡ್ವೆ ಕಂಪನಿಯ ಅಂಗ ಸಂಸ್ಥೆಯಾದ ಸ್ವಸ್ತಿಕ್ ಕಂಪನಿಯಲ್ಲೂ ಕಾರ್ಮಿಕರ ಕಾನೂನು ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಸ್ವಸ್ತಿಕ್‌ ಕಂಪನಿಯಲ್ಲಿ ಸಾವಿರಾರ ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಕಾರ್ಮಿಕ ಇಲಾಖೆ ಅಧಿಕಾರಿಗಳು ಈ ಕಂಪನಿಗೂ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲು ನಿರ್ಧರಿಸಿದ್ದಾರೆ.

ವರದಿಗೆ ಸಿದ್ಧತೆ: ಬಡ್ವೆ ಕಂಪನಿಯು ನಿರಂತರವಾಗಿ ಕಾರ್ಮಿಕ ಕಾನೂನು ಉಲ್ಲಂಘಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳು ಕಂಪನಿಯ ಪರವಾನಗಿ ಹಾಗೂ ಕಾರ್ಮಿಕರನ್ನು ಪೂರೈಸುವ ಏಜೆನ್ಸಿಗಳ ನೋಂದಣಿ ರದ್ದುಪಡಿಸುವಂತೆ ಸಹಾಯಕ ಕಾರ್ಮಿಕ ಆಯುಕ್ತರಿಗೆ ವರದಿ ನೀಡಲು ಸಿದ್ಧತೆ ನಡೆಸಿದ್ದಾರೆ.

ಕಂಪನಿಯಲ್ಲಿ ಸರಕುಗಳ ಲೋಡಿಂಗ್‌ ಮತ್ತು ಅನ್‌ಲೋಡಿಂಗ್‌ ಉದ್ದೇಶಕ್ಕಾಗಿ ನೇಮಿಸಿಕೊಂಡಿರುವ ಕಾರ್ಮಿಕರನ್ನು ಕರಾರು ನಿಯಮ ಉಲ್ಲಂಘಿಸಿ ಬೃಹತ್‌ ಯಂತ್ರೋಪಕರಣಗಳ ನಿರ್ವಹಣೆಗೆ ನಿಯೋಜಿಸಿರುವ ಬಗ್ಗೆ ಕಾರ್ಮಿಕ ನಿರೀಕ್ಷಕಿ ರಾಜೇಶ್ವರಿ ಹಾಗೂ ಸಿಬ್ಬಂದಿ ತಂಡವು ಛಾಯಾಚಿತ್ರಗಳ ಸಮೇತ ಸಾಕ್ಷ್ಯಾಧಾರ ಸಂಗ್ರಹಿಸಿದೆ. ಅಧಿಕಾರಿಗಳು ಸಾಕ್ಷ್ಯಾಧಾರಗಳ ಸಮೇತ ಸಹಾಯಕ ಕಾರ್ಮಿಕ ಆಯುಕ್ತರಿಗೆ ಸಮಗ್ರ ವರದಿ ಸಲ್ಲಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT