ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲವಂತದ ಸಾಲ ವಸೂಲಾತಿ ಬೇಡ- ಜಿಲ್ಲಾಡಳಿತಕ್ಕೆ ರೈತ ಸಂಘದ ಮನವಿ

Last Updated 15 ಜನವರಿ 2022, 7:42 IST
ಅಕ್ಷರ ಗಾತ್ರ

ಬಂಗಾರಪೇಟೆ: ಕೊರೊನಾ ಮೂರನೇ ಅಲೆ ನಿಯಂತ್ರಣಕ್ಕೆ ಬರುವವರೆಗೂ ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡುವುದು ಹಾಗೂ ಹಾಲಿನ ಬಟವಾಡೆ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳುವುದನ್ನು ನಿಲ್ಲಿಸುವಂತೆ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳಿಗೆ ಆದೇಶ ನೀಡಬೇಕು ಎಂದು ಆಗ್ರಹಿಸಿ ರೈತ ಸಂಘದ ಸದಸ್ಯರು ತಹಶೀಲ್ದಾರ್ ಎಂ. ದಯಾನಂದ ಅವರಿಗೆ ಮನವಿ ಸಲ್ಲಿಸಿದರು.

ಸಾಲ ಮಾಡಿ ಬೆಳೆದಿದ್ದ ಬೆಳೆ ಅಕಾಲಿಕ ಮಳೆಗೆ ನಾಶವಾಗಿದೆ. ಸಾಲದ ಸುಳಿಗೆ ಸಿಲುಕಿ ಮತ್ತೆ ಜೀವನ ಕಟ್ಟಿಕೊಳ್ಳುತ್ತಿರುವ ಸಮಯದಲ್ಲಿ ಕೊರೊನಾ ಅಬ್ಬರಕ್ಕೆ ಜನರು ತತ್ತರಿಸಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಸರ್ಕಾರಿ ಬ್ಯಾಂಕ್ ಅಧಿಕಾರಿಗಳು, ಖಾಸಗಿ ಬ್ಯಾಂಕ್, ಫೈನಾನ್ಸ್ ಮಾಲೀಕರು, ರೈತ, ಕೂಲಿಕಾರ್ಮಿಕರಿಗೆ ನೋಟಿಸ್ ನೀಡಿ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.

ಸರ್ಕಾರಿ ಬ್ಯಾಂಕುಗಳು ಸರ್ಕಾರದಿಂದ ಬರುವ ಅನುದಾನ ಮತ್ತು ಹಾಲಿನ ಬಟವಾಡೆ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿವೆ. ನೋಟಿಸ್ ನೀಡಿ ರೈತರ ಮೇಲೆ ಕೇಸು ಹಾಕುವ ಬೆದರಿಕೆ ಹಾಕಲಾಗುತ್ತಿದೆ. ಖಾಸಗಿ ಫೈನಾನ್ಸ್ ಮಾಲೀಕರು ಗೂಂಡಾಗಳನ್ನು ಇಟ್ಟುಕೊಂಡು ಸಾಲ ವಸೂಲಾತಿಗೆ ಮುಂದಾಗಿದ್ದಾರೆ. ಆದರೆ ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾ ಅಧ್ಯಕ್ಷ ಐತಂಡಹಳ್ಳಿ ಮಂಜುನಾಥ ಅಸಮಾಧಾನ ವ್ಯಕ್ತಪಡಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಕೊರೊನಾದಿಂದ ದೇಶದ ಆರ್ಥಿಕ ವ್ಯವಸ್ಥೆಯೇ ಏರುಪೇರಾಗಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲ. ಬೆಳೆದ ಬೆಳೆಗೆ ಬೆಲೆ ಇಲ್ಲದೆ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ರೈತರು, ಕೃಷಿ ಕೂಲಿ ಕಾರ್ಮಿಕರು, ಬಡವರು ಪಡೆದಿರುವ ಸಾಲವನ್ನು ಸಕಾಲಕ್ಕೆ ಮರುಪಾವತಿಸಲು ಆಗುತ್ತಿಲ್ಲಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಎಂ. ದಯಾನಂದ ಅವರು, ಜಿಲ್ಲಾಧಿಕಾರಿ ಗಮನಕ್ಕೆ ತಂದು ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಐತಂಡಹಳ್ಳಿ ಮುನ್ನಾ, ಜಿಲ್ಲಾ ಗೌರವಾಧ್ಯಕ್ಷ ಮರಗಲ್ ಮುನಿಯಪ್ಪ, ಜಿಲ್ಲಾ ಉಪಾಧ್ಯಕ್ಷ ಚಾಂದ್‌ ಪಾಷಾ, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಚಲಪತಿ, ಶ್ರೀನಿವಾಸ್, ನಾಗಯ್ಯ, ಮುನಿರಾಜು, ಪಾರಂಡಹಳ್ಳಿ ಮಂಜುನಾಥ್, ರಾಮಸಾಗರ ವೇಣುಗೋಪಾಲ್, ಕಾಮಸಮುದ್ರ ಮುನಿಕೃಷ್ಣಯ್ಯ, ಆರೀಫ್, ಜಾವೀದ್, ನವಾಜ್, ಬಾಬಾಜಾನ್, ಸುರೇಶ್ ಬಾಬು, ಆಂಜಿನಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT