ಭಾನುವಾರ, ಮೇ 29, 2022
22 °C
ಕೇಂದ್ರ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ರೈತರ ಆಗ್ರಹ

ಹೆದ್ದಾರಿ ಬಂದ್, ಸಂಚಾರ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ತಾಲ್ಲೂಕಿನ ವಡಗೂರು ಗೇಟ್‌ನಲ್ಲಿ ಶನಿವಾರ ವಿವಿಧ ರೈತ, ದಲಿತ, ಪ್ರಗತಿಪರ ಸಂಘಟನೆ ಮುಖಂಡರ ನೇತೃತ್ವದಲ್ಲಿ ಹೆದ್ದಾರಿ ಬಂದ್ ಮಾಡಲಾಯಿತು. ಆ ಸಂದರ್ಭ ಪೊಲೀಸರ ಮತ್ತು ರೈತ ಮುಖಂಡರ ನಡುವೆ ವಾಗ್ವಾದ
ನಡೆಯಿತು.

ಹೆದ್ದಾರಿ ಬಂದ್ ಮಾಡಲು ಕೇವಲ ಅರ್ಧ ಗಂಟೆ ಮಾತ್ರ ಅವಕಾಶ ನೀಡಿದ್ದು, ನಿಗದಿತ ಸಮಯಕ್ಕೆ ಪ್ರತಿಭಟನೆ ನಿಲ್ಲಿಸುವಂತೆ ಪೊಲೀಸರು ಸೂಚಿಸಿದರು. ಅದಕ್ಕೆ ರೈತ ಮುಖಂಡರು ಒಪ್ಪದೆ ಪ್ರತಿಭಟನೆ ಮುಂದುವರೆಸಿದ ಕಾರಣ ಪರಸ್ಪರ ಮಾತಿನ ಚಕಮಕಿ
ನಡೆಯಿತು.

ಹೆದ್ದಾರಿ ತಡೆಯಿಂದಾಗಿ ಎರಡು ಕಿ.ಮೀ.ದೂರದವರೆಗೆ ವಾಹನಗಳು ನಿಂತವು. ತಿರುಪತಿ, ಬೆಂಗಳೂರು, ಚಿತ್ತೂರು, ತಮಿಳುನಾಡು ಕಡೆಗೆ ಹೋಗುವ ನೂರಾರು ವಾಹನ ಮತ್ತು ಪ್ರಯಾಣಿಕರು ತೊಂದರೆಗೆ
ಸಿಲುಕಿದರು.

ಈ ವೇಳೆ ಮಾತನಾಡಿದ ರೈತ ಮುಖಂಡರು ಕೇಂದ್ರ ಸರ್ಕಾರ ದಬ್ಬಾಳಿಕೆ ನಡೆಸಿ ರೈತರ ಚಳವಳಿಯನ್ನು ಛಿದ್ರಗೊಳಿಸಲು ಹೊರಟಿದೆ. ಮಾರಕ ಆಯುಧ, ಪ್ಯಾರಾ ಮಿಲಿಟರಿ ಪಡೆ, ಮತ್ತು ಬಿಜೆಪಿ ಗುಂಡಾಗಳನ್ನು ಬಳಸಿ ಭಯೋತ್ಪಾದನೆ ಸೃಷ್ಟಿಸುವ ಮೂಲಕ ಭಯದ ವಾತಾವರಣ ಸೃಷ್ಟಿಸುತ್ತಿದೆ. ಅಲ್ಲದೆ ಚಳವಳಿಯ ವಿರುದ್ಧ ಸುಪ್ರೀಂ ಕೋರ್ಟನ್ನು ಬಳಸಿಕೊಳ್ಳಲು ಯತ್ನಿಸಿ ರೈತರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುರಿ ಸಾಧಿಸುವವರೆಗೂ ಹೋರಾಟ ನಿಲ್ಲದು. ಯಾವುದೇ ತೆರನಾದ ಬೆಲೆ ತೆರಲು ಸಿದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಧರಣಿ ನಿರತ ರೈತರ ಸುತ್ತ ತಡೆಗೋಡೆ, ತಂತಿ ಬೇಲಿ ನಿರ್ಮಿಸುವ ಮೂಲಕ ರೈತರಿಗೆ ಹೊರಗಿನ ಪ್ರಪಂಚದ ಸಂಪರ್ಕ ಕಡಿತಗೊಳಿಸುವ ಅಮಾನವೀಯ ಕ್ರಮವನ್ನು ಬಿಜೆಪಿ ಸರ್ಕಾರ ಕೈಗೊಂಡಿದೆ. ಇದಕ್ಕೆ ಕೇಂದ್ರ ಸರ್ಕಾರ ತಕ್ಕ ಬೆಲೆ ತೆರಬೇಕಿದೆ ಎಂದರು.

ನೀರು, ಆಹಾರ, ಇಂಧನ, ಔಷಧಿ, ಮತ್ತು ಇತರೆ ಅಗತ್ಯ ವಸ್ತುಗಳನ್ನು ತರಲು ಸಾಧ್ಯವಾಗುತ್ತಿಲ್ಲ. ಈ ಅನಾಗರಿಕ ಕ್ರಮಗಳನ್ನು ತೆಗೆದುಕೊಳ್ಳವ ಮೂಲಕ ಚಳವಳಿಯನ್ನು ಹತ್ತಿಕ್ಕುವ ಯತ್ನ ಸರ್ಕಾರದಿಂದ ನಡೆದಿದೆ ಎಂದು ಆರೋಪಿಸಿದರು.

ವಿವಿಧ ಸಂಘಟನೆ ಮುಖಂಡರಾದ ಗಾಂಧಿನಗರ ನಾರಾಯಣಸ್ವಾಮಿ, ವಿ.ಗೀತಾ, ಕೆ.ನಾರಾಯಣಗೌಡ, ಟಿ.ಎಂ.ವೆಂಕಟೇಶ್, ವಕ್ಕಲೇರಿ ರಾಜಪ್ಪ, ಅಬ್ಬಣಿ ಶಿವಪ್ಪ, ಕೂಟೇರಿ ನಾಗರಾಜ್, ಹರಿಕುಮಾರ್, ನಳಿನಿಗೌಡ, ವಿ.ಅಂಬರೀಷ್, ವಿಜಯಕುಮಾರಿ, ಹೂಹಳ್ಳಿ ನಾಗೇಶ್, ಶಿವಪ್ಪ, ಆಶಾ, ಎನ್.ಎನ್.ಶ್ರೀರಾಮ್, ನಾರಾಯಣರೆಡ್ಡಿ, ಹೂವಸನಹಳ್ಳಿ ರಾಜಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು