ಬುಧವಾರ, ಏಪ್ರಿಲ್ 1, 2020
19 °C
ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಭರವಸೆ

ಶೀಘ್ರವೇ ವೈದ್ಯರ ಹುದ್ದೆ ಭರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರು ಹಾಗೂ ಸಿಬ್ಬಂದಿಯ ಖಾಲಿ ಹುದ್ದೆಗಳನ್ನು 2 ತಿಂಗಳಲ್ಲಿ ಭರ್ತಿ ಮಾಡುತ್ತೇವೆ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದರು.

ಇಲ್ಲಿ ಶನಿವಾರ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿ, ‘ರಾಜ್ಯ ಲೋಕಸೇವಾ ಆಯೋಗದ ಮೂಲಕ ವೈದ್ಯರ ನೇಮಕಾತಿ ಮಾಡುವುದು ಕಷ್ಟ. ಹೀಗಾಗಿ ಇನ್ನು ಮುಂದೆ ವೈದ್ಯರನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಕೋಲಾರದ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್) ಜಿಲ್ಲಾ ಆಸ್ಪತ್ರೆಯಲ್ಲಿನ ವಿಶೇಷ ತಜ್ಞ ವೈದ್ಯರ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು. ಡಿ ಗ್ರೂಪ್‌ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಬಾರದು. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆ, ರಾಜ್ಯ ವಲಯ ಹಾಗೂ ಜಿಲ್ಲಾಧಿಕಾರಿಯಿಂದ ನೇಮಕವಾದ ವೈದ್ಯರ ವೇತನ ತಾರತಮ್ಯ ನಿವಾರಣೆಗೆ ಸಮಾನ ವೇತನ ವ್ಯವಸ್ಥೆ ಜಾರಿಗೊಳಿಸುತ್ತೇವೆ’ ಎಂದರು.

‘ಇಡೀ ದೇಶಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ತಾಯಿ ಮತ್ತು ಮಕ್ಕಳ ಸಾವಿನ ಪ್ರಮಾಣ ತಗ್ಗಿದೆ. ತಾಯಿ ಮತ್ತು ಮಕ್ಕಳ ಸಾವಿನ ಪ್ರಮಾಣವನ್ನು ಮತ್ತಷ್ಟು ತಗ್ಗಿಸಲು ರಾಜ್ಯದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳನ್ನು ನಿರ್ಮಿಸಲಾಯಿತು. ರಾಜ್ಯದಲ್ಲಿ ಸದ್ಯ ೫೬ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಿವೆ. ಏಳೆಂಟು ಆಸ್ಪತ್ರೆಗಳ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, 2 ತಿಂಗಳೊಳಗೆ ಲೋಕಾರ್ಪಣೆ ಮಾಡುತ್ತೇವೆ’ ಎಂದು ವಿವರಿಸಿದರು.

‘ಜಿಲ್ಲೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಿಂದೆಯೇ ಉದ್ಘಾಟನೆ ಆಗಬೇಕಿತ್ತು. ಆದರೆ, ಕಾರಣಾಂತರದಿಂದ ಆಸ್ಪತ್ರೆ ಸಕಾಲಕ್ಕೆ ಸೇವೆ ಮುಕ್ತವಾಗಲಿಲ್ಲ. 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಇದೀಗ ಲೋಕಾರ್ಪಣೆ ಆಗಿದೆ. ಜಿಲ್ಲೆಯಲ್ಲಿ ಶೇ ೬೦ರಷ್ಟು ಬಡವರಿದ್ದು, ಈ ಜನರ ಅನುಕೂಲಕ್ಕಾಗಿ ಸರ್ಕಾರ ಆಸ್ಪತ್ರೆ ನಿರ್ಮಿಸಿದೆ’ ಎಂದು ಹೇಳಿದರು.

ವೇತನ ಹೆಚ್ಚಳ: ‘ಆಶಾ ಕಾರ್ಯಕರ್ತೆಯರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರೋಗ್ಯ ಕಾರ್ಯಕ್ರಮಗಳನ್ನು ಜನರ ಬಳಿಗೆ ಕೊಂಡೊಯ್ಯುತ್ತಾರೆ. ಗುಡ್ಡಗಾಡು ಪ್ರದೇಶದಲ್ಲೂ ಜನರಿಗೆ ಆರೋಗ್ಯ ಸೇವೆ ನೀಡುತ್ತಾರೆ. ಆದರೆ, ಆಶಾ ಕಾರ್ಯಕರ್ತೆಯರ ಸಂಬಳ ಕಡಿಮೆಯಿದೆ. ಅಂಗನವಾಡಿ ಕಾರ್ಯಕರ್ತರ ಸಂಬಳ ಹೆಚ್ಚಳ ಮಾಡಿದಂತೆಯೇ ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಿಸುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗಿದೆ’ ಎಂದರು.

‘ಆಸ್ಪತ್ರೆಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಗುತ್ತಿಗೆ ಆಧಾರದ ನೌಕರರ ಮೂಲಕ ನಿರ್ವಹಿಸಲಾಗುತ್ತಿತ್ತು. ಸ್ವಚ್ಛತಾ ಕೆಲಸದ ಟೆಂಡರ್‌ ಪಡೆದಿರುವ ಗುತ್ತಿಗೆದಾರರು ನೌಕರರ ₹ 20 ಸಾವಿರ ಸಂಬಳದಲ್ಲಿ ಕಡಿತಗೊಳಿಸಿ ಕೇವಲ ₹ 7 ಸಾವಿರ ಕೊಟ್ಟು ವಂಚಿಸುತ್ತಿದ್ದಾರೆ. ಈ ಬಗ್ಗೆ ದೂರು ಬಂದಿವೆ. ಹೀಗಾಗಿ ಗುತ್ತಿಗೆ ವ್ಯವಸ್ಥೆ ರದ್ದುಪಡಿಸಿ ಬೆಂಗಳೂರಿನಲ್ಲೇ ಕಾರ್ಪೊರೇಟ್‌ ವ್ಯವಸ್ಥೆಯಲ್ಲಿ ಟೆಂಡರ್‌ ಕರೆದು ಆಸ್ಪತ್ರೆಗಳ ಸ್ವಚ್ಛತಾ ಕಾರ್ಯ ನಿರ್ವಹಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು