ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು ಎಪಿಎಂಸಿ: ಕೊನೆಗೂ ಸಿಕ್ಕಿತು ಅಧ್ಯಕ್ಷ ಪಟ್ಟ

ಮುಳಬಾಗಿಲು ಎಪಿಎಂಸಿ ಅಧ್ಯಕ್ಷರಾಗಿ ವೆಂಕಟೇಶ್, ಉಪಾಧ್ಯಕ್ಷರಾಗಿ ರೆಡ್ಡಪ್ಪರೆಡ್ಡಿ ಆಯ್ಕೆ
Last Updated 11 ಜೂನ್ 2020, 3:42 IST
ಅಕ್ಷರ ಗಾತ್ರ

ಮುಳಬಾಗಿಲು: ಮುಳಬಾಗಿಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಗೊಲ್ಲಹಳ್ಳಿ ವೆಂಕಟೇಶ್ ಮತ್ತು ಉಪಾಧ್ಯಕ್ಷರಾಗಿ ರೆಡ್ಡಪ್ಪರೆಡ್ಡಿ ಬುಧವಾರ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವರಿಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಚುನಾವಣಾಧಿಕಾರಿ ಕೆ.ಎನ್.ರಾಜಶೇಖರ್ ಅರವ ಆಯ್ಕೆಯನ್ನು ಘೋಷಿಸಿದರು.

ಒಟ್ಟು 13 ಚುನಾಯಿತ ಪ್ರತಿನಿಧಿಗಳಿದ್ದು, ಮೂರು ಮಂದಿ ನಾಮಕರಣ ಗೊಂಡಿದ್ದಾರೆ. ಅವರಲ್ಲಿ ಜೆಡಿಎಸ್ 4, ಕೊತ್ತೂರು ಮಂಜುನಾಥ್ ಬೆಂಬಲಿತ 9 ನಿರ್ದೇಶಕರಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾದ ವೆಂಕಟೇಶ್‌ ಅವರು ಮುಂಚೆ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡು ನಂತರ ಕೊತ್ತೂರು ಮಂಜುನಾಥ್ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ.

ಎಪಿಎಂಸಿ ಪ್ರಾರಂಭವಾಗಿ ಐವತ್ತು ವರ್ಷಗಳಾದರೂ ಇದುವರೆವಿಗೂ ಪರಿಶಿಷ್ಟ ಜಾತಿಗೆ ಸೇರಿದವರು ಅಧ್ಯಕ್ಷರಾಗಿರಲಿಲ್ಲ. ಆದ್ದರಿಂದ ತಮ್ಮನ್ನು ಅಧ್ಯಕ್ಷರನ್ನಾಗಿಸಿ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು ಎಂದು ವೆಂಕಟೇಶ್ ಕಳೆದ 20 ತಿಂಗಳ ಹಿಂದೆಯೇ ಅವಕಾಶಕ್ಕೆ ಪ್ರಯತ್ನಿಸಿದ್ದರು. ಕೊನೆ ಗಳಿಗೆಯಲ್ಲಿ ಸ್ಥಾನ ತಪ್ಪಿಹೋಗಿತ್ತು.

ಶತಾಯ ಗತಾಯ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲೇಬೇಕೆಂದು ಪ್ರಯತ್ನಿಸಿದ ವೆಂಕಟೇಶ್‌ ಅವರಿಗೆ ಹಿಂದೆ ತಮ್ಮ ಜತೆಗಿದ್ದ ಜೆಡಿಎಸ್ ಸದಸ್ಯರ ಬೆಂಬಲ ಪಡೆದುಕೊಂಡರು. ಇದರೊಂದಿಗೆ ಕೊತ್ತೂರು ಮಂಜುನಾಥ್ ಹಾಗೂ ಸಚಿವ ಎಚ್.ನಾಗೇಶ್‌ ಅವರನ್ನು ಮನವೊಲಿಸಿ ಕೊನೆಗೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬದ್ಧ ವೈರಿಗಳಾಗಿದ್ದ ಕೊತ್ತೂರು ಮಂಜುನಾಥ್‌ ಹಾಗೂ ನಾಗೇಶ್‌ ಎಪಿಎಂಸಿ ಚುನಾವಣೆಯಲ್ಲಿ ವೆಂಕಟೇಶ್‌ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಒಂದಾಗಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ.

ಆಯ್ಕೆಯಾದ ನಂತರ ಮಾತನಾಡಿದ ಗೊಲ್ಲಹಳ್ಳಿ ವೆಂಕಟೇಶ್, ಪ್ರಥಮ ಬಾರಿಗೆ ಪರಿಶಿಷ್ಟ ಜಾತಿಗೆ ಸೇರಿದವರು ಅಧ್ಯಕ್ಷರಾಗಿರುವುದು ಸಾಮಾಜಿಕ ನ್ಯಾಯಕ್ಕೆ ಸಿಕ್ಕ ವಿಜಯವಾಗಿದೆ ಎಂದು ಹೇಳಿದರು.

ಮಾಜಿ ಅಧ್ಯಕ್ಷ ಸಿ.ರಘುಪತಿ, ಸದಸ್ಯರಾದ ಆವಣಿಬಾಬು, ನಂಗಲಿ ವಿಶ್ವನಾಥರೆಡ್ಡಿ, ಜಯರಾಮರೆಡ್ಡಿ, ಎಪಿಎಂಸಿ ಕಾರ್ಯದರ್ಶಿ ಎನ್.ಕಿರಣ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT