ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಅಕ್ರಮ ಕಸಾಯಿಖಾನೆ, ದಂಡದ ಅಸ್ತ್ರ ಪ್ರಯೋಗ

ಜಿಲ್ಲಾ ಕೇಂದ್ರದಲ್ಲಿ ನಗರಸಭೆ ಅಧಿಕಾರಿಗಳ ದಿಢೀರ್‌ ಕಾರ್ಯಾಚರಣೆ
Last Updated 19 ಏಪ್ರಿಲ್ 2020, 19:33 IST
ಅಕ್ಷರ ಗಾತ್ರ

ಕೋಲಾರ: ನಗರಸಭೆ ಆಯುಕ್ತ ಶ್ರೀಕಾಂತ್ ನೇತೃತ್ವದಲ್ಲಿ ಜಿಲ್ಲಾ ಕೇಂದ್ರದ ವಿವಿಧೆಡೆ ಭಾನುವಾರ ದಿಢೀರ್‌ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಕದ್ದುಮುಚ್ಚಿ ಕಸಾಯಿಖಾನೆ ನಡೆಸುತ್ತಿದ್ದ ವ್ಯಕ್ತಿಗಳ ವಿರುದ್ಧ ದಂಡದ ಅಸ್ತ್ರ ಪ್ರಯೋಗಿಸಿದರು.

ಕೊರೊನಾ ಸೋಂಕಿನ ಕಾರಣಕ್ಕೆ ಕೇಂದ್ರ ಸರ್ಕಾರ ಲಾಕ್‌ಡೌನ್‌ ಜಾರಿ ಮಾಡಿರುವುದರಿಂದ ನಗರ ಸೇರಿದಂತೆ ಎಲ್ಲೆಡೆ ಮೀನು, ಕೋಳಿ, ಕುರಿ, ಮೇಕೆ ಮಾಂಸದ ಬೆಲೆ ದಿಢೀರ್‌ ಏರಿಕೆಯಾಗಿದೆ. ಗ್ರಾಹಕರು ಹೆಚ್ಚಿನ ದರ ಕೊಟ್ಟರೂ ಕೋಳಿ, ಕುರಿ ಮತ್ತು ಮೇಕೆ ಮಾಂಸ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾಂಸ ಮಾರಾಟ ಮಳಿಗೆ ಮಾಲೀಕರು ಲಾಕ್‌ಡೌನ್‌ ಪರಿಸ್ಥಿತಿಯ ಲಾಭ ಪಡೆದು ಮನಬಂದಂತೆ ಮಾಂಸದ ಬೆಲೆ ಹೆಚ್ಚಿಸಿ ಗ್ರಾಹಕರನ್ನು ಶೋಷಿಸುತ್ತಿದ್ದಾರೆ. ಕೋಳಿ ಮೊಟ್ಟೆ ಬೆಲೆ ಸಹ ಹೆಚ್ಚಿಸಲಾಗಿದೆ.

ಜಿಲ್ಲಾ ಕೇಂದ್ರದಲ್ಲಿ ಕಸಾಯಿಖಾನೆಗಳಿಲ್ಲದ ಕಾರಣ ಜಿಲ್ಲಾಡಳಿತವು ನಗರದಲ್ಲಿ ದನಗಳನ್ನು ಕಡಿದು ಮಾರಾಟ
ಮಾಡುವುದನ್ನು ನಿರ್ಬಂಧಿಸಿದೆ. ಆದರೆ, ಕೆಲ ವ್ಯಕ್ತಿಗಳು ಅಧಿಕಾರಿಗಳ ಕಣ್ತಪ್ಪಿಸಿ ಕ್ಲಾಕ್‌ಟವರ್‌ ಹಾಗೂ ಕಾರಂಜಿಕಟ್ಟೆ ಮುಖ್ಯರಸ್ತೆ ಸೇರಿದಂತೆ ಹಲವೆಡೆ ದನದ ಮಾಂಸ ಮಾರಾಟ ಮಾಡುತ್ತಿದ್ದಾರೆ.

ಮಾಂಸದ ಬೆಲೆ ಏರಿಕೆ ಹಾಗೂ ದನದ ಮಾಂಸ ಮಾರಾಟ ಸಂಬಂಧ ಸಾರ್ವಜನಿಕರು ನಗರಸಭೆಗೆ ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ಕಾರ್ಯಾಚರಣೆಗಿಳಿದ ನಗರಸಭೆ ಅಧಿಕಾರಿಗಳು ಅಮ್ಮವಾರಿಪೇಟೆ, ಕುಂಬಾರಪೇಟೆ ರಸ್ತೆ ಹಾಗೂ ಕ್ಲಾಕ್‌ಟವರ್‌ ಸುತ್ತಮುತ್ತಲಿನ ಮಾಂಸದ ಅಂಗಡಿಗಳ ಮೇಲೆ ಮುಂಜಾನೆಯೇ ದಾಳಿ ನಡೆಸಿ ದರ ಪರಿಶೀಲನೆ ಮಾಡಿದರು.

ಈ ವೇಳೆ ಅಮ್ಮವಾರಿಪೇಟೆಯ ಕೆಲ ಅಂಗಡಿಗಳಲ್ಲಿ ಕುರಿ ಮತ್ತು ಮೇಕೆ ಮಾಂಸದ ಬೆಲೆಯನ್ನು ಕೆ.ಜಿಗೆ ₹ 750ಕ್ಕೆ ಹಾಗೂ ಕೋಳಿ ಮಾಂಸದ ಬೆಲೆಯನ್ನು ₹ 200ಕ್ಕೆ ಹೆಚ್ಚಿಸಿರುವುದು ಗೊತ್ತಾಯಿತು. ಬಳಿಕ ಅಧಿಕಾರಿಗಳು ಕುರಿ ಮತ್ತು ಮೇಕೆ ಮಾಂಸವನ್ನು ಕೆ.ಜಿಗೆ ₹ 600ರಂತೆ ಮತ್ತು ಕೋಳಿ ಮಾಂಸವನ್ನು ಕೆ.ಜಿಗೆ ₹ 70ರ ದರದಲ್ಲಿ ಮಾರಾಟ ಮಾಡುವಂತೆ ಅಂಗಡಿ ಮಾಲೀಕರಿಗೆ ಆದೇಶಿಸಿದರು.

ಮಾಂಸ ಖರೀದಿಗಾಗಿ ಅಂಗಡಿ ಬಳಿ ಜಮಾಯಿಸಿದ್ದ ಗ್ರಾಹಕರಿಗೆ ಅಂತರ ಕಾಯ್ದುಕೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದರು. ಜತೆಗೆ ಅಂಗಡಿಯೊಳಗೆ ಮತ್ತು ಹೊರಗೆ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಮಾಲೀಕರಿಗೆ ಸೂಚಿಸಿದರು.

ದನದ ಮಾಂಸ: ಕ್ಲಾಕ್‌ಟವರ್‌ ಬಳಿಯ ಹಳೇ ಕಟ್ಟಡವೊಂದರಲ್ಲಿ ರಹಸ್ಯವಾಗಿ ದನಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಮಾಂಸದ ವ್ಯಾಪಾರಿಯು ತಡೆಯೊಡ್ಡಿದರು. ಅಧಿಕಾರಿಗಳು ಗಂಟೆಗಟ್ಟಲೇ ಕಾದರೂ ಕಟ್ಟಡದೊಳಗಿದ್ದ ಅಂಗಡಿ ಕೆಲಸಗಾರರು ಬಾಗಿಲು ತೆರೆಯಲಿಲ್ಲ. ನಂತರ ಅಧಿಕಾರಿಗಳು ಪೌರ ಕಾರ್ಮಿಕರ ಮೂಲಕ ಬಲಪ್ರಯೋಗ ಮಾಡಿಸಿ ಬಾಗಿಲು ತೆರೆಸಿದರು.

ಇದರಿಂದ ಆಕ್ರೋಶಗೊಂಡ ಅಂಗಡಿ ಮಾಲೀಕರು ಹಾಗೂ ಕೆಲಸಗಾರರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿದ ಪರಿಸ್ಥಿತಿ ತಿಳಿಗೊಳಿಸಿದರು.

ದನದ ಮಾಂಸ ಮಾರುತ್ತಿದ್ದ ಅಂಗಡಿ ಮಾಲೀಕನಿಗೆ ಅಧಿಕಾರಿಗಳು ₹ 10 ಸಾವಿರ ದಂಡ ವಿಧಿಸಿದರು. ಸರ್ಕಾರದ ನಿಯಮ ಉಲ್ಲಂಘಿಸಿ ದನದ ಮಾಂಸ ಮಾರಾಟ ಮಾಡಿದರೆ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಾಗಿ ಅಧಿಕಾರಿಗಳು ಮಾಲೀಕರಿಗೆ ಎಚ್ಚರಿಕೆ ನೀಡಿದರು.

ನಗರಸಭೆ ಸದಸ್ಯ ಅಂಬರೀಷ್‌, ಆರೋಗ್ಯ ನಿರೀಕ್ಷಕರಾದ ಮರಿಯಾ, ಪುನೀತ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT