ಬುಧವಾರ, ನವೆಂಬರ್ 13, 2019
28 °C
ಸಾಲ ವಿತರಣೆ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಹೇಳಿಕೆ

ಜಿಲ್ಲೆಯಲ್ಲಿ ರಾಸುಗಳಿಗೆ ಮೇವಿನ ಕೊರತೆ

Published:
Updated:
Prajavani

ಕೋಲಾರ: ‘ರೈತರು ಸಾಲದ ಹಣವನ್ನು ಸದುದ್ದೇಶಕ್ಕೆ ಬಳಸಿ ಸಕಾಲದಲ್ಲಿ ಪ್ರಾಮಾಣಿಕವಾಗಿ ಮರುಪಾವತಿ ಮಾಡಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಸಲಹೆ ನೀಡಿದರು.

ತಾಲ್ಲೂಕಿನ ವೇಮಗಲ್ ರೇಷ್ಮೆ ಬೆಳೆಗಾರರ ಸಹಕಾರ ಸಂಘವು ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ಸಾಲದ ಚೆಕ್‌ ವಿತರಿಸಿ ಮಾತನಾಡಿ, ‘ರೈತರಿಗೆ ಬೆಳೆ ಸಾಲ ನೀಡುವುದಿಲ್ಲ ಎಂದು ಕೆಲ ವ್ಯಕ್ತಿಗಳು ವದಂತಿ ಹಬ್ಬಿಸಿದ್ದರು. ಸಾಲ ನೀಡುವ ಪ್ರಕ್ರಿಯೆ ಮುಗಿದ ಕೂಡಲೇ ಸಂಘವಾರು ಸಾಲ ಮಂಜೂರು ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ದಕ್ಷಿಣ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಅನಾವೃಷ್ಟಿ ಎದುರಾಗಿದೆ. ಒಂದೆಡೆ ಜನ ಅತಿಯಾದ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿದ್ದರೆ ಮತ್ತೊಂದೆಡೆ ಮಳೆಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಹೈನೋದ್ಯಮ ನಂಬಿರುವ ರೈತರ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪಶು ಸಂಗೋಪನಾ ಇಲಾಖೆ ಹಾಗೂ ಕೋಚಿಮುಲ್ ಹಸಿರು ಮೇವು ಬೆಳೆಸಿ ರೈತರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಬೇಕು. ನೀರು ಲಭ್ಯವಿರುವ ರೈತರಿಗೆ ಮೇವಿನ ಕಿಟ್‌ ವಿತರಿಸಿದರೆ ಮೇವು ಬೆಳೆದು ಬೇರೆಯವರಿಗೆ ಮಾರಾಟ ಮಾಡುತ್ತಾರೆ. ಇದಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದ ಯಾವ ಬ್ಯಾಂಕ್‌ನವರೂ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುತ್ತಿಲ್ಲ. ವಾಣಿಜ್ಯ ಬ್ಯಾಂಕ್‌ಗಳಿಗೆ ರೈತರ ಜಮೀನು ಅಡಮಾನ ಇಟ್ಟರೆ ಮಾತ್ರ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುತ್ತಾರೆ. ಬಡ್ಡಿ ಪಾವತಿಸುವುದು ತಡವಾದರೆ ಜಮೀನು ಹರಾಜು ಹಾಕುತ್ತಾರೆ. ರೈತರು ಖಾಸಗಿ ಲೇವಾದೇವಿದಾರರು ಹಾಗೂ ವಾಣಿಜ್ಯ ಬ್ಯಾಂಕ್‌ಗಳ ಸಹವಾಸದಿಂದ ದೂರು ಇರಬೇಕು’ ಎಂದು ಕಿವಿಮಾತು ಹೇಳಿದರು.

‘ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ಮತ್ತು ಮಹಿಳೆಯರಿಗೆ ಸಾಲ ನೀಡಲು ಡಿಸಿಸಿ ಬ್ಯಾಂಕ್ ಸಿದ್ಧವಿದೆ. ಸಾಲ ಪಡೆದವರು ಅಷ್ಟೇ ಪ್ರಮಾಣಿಕವಾಗಿ ಸಾಲ ಮರುಪಾವತಿ ಮಾಡಿ ನಂಬಿಕೆ ಉಳಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ದಲ್ಲಾಳಿಗಳಿಗೆ ಕಡಿವಾಣ: ‘ರೈತರ ಸಂಕಷ್ಟಕ್ಕೆ ಬ್ಯಾಂಕ್‌ ನೆರವಾಗಿದೆ. ಬ್ಯಾಂಕ್‌ ವಿರುದ್ಧ ಅಪಪ್ರಚಾರ ಮಾಡುವವರಿಗೆ ರೈತರೇ ಉತ್ತರ ಕೊಡಬೇಕು. ಯಾರ ಶಿಫಾರಸ್ಸಿನ ಮೇರೆಗೆ ಸಾಲ ವಿತರಿಸುತ್ತಿಲ್ಲ. ದಲ್ಲಾಳಿಗಳಿಗೆ ಕಡಿವಾಣ ಹಾಕಿರುವುದರಿಂದ ಬೀದಿಯಲ್ಲಿ ನಿಂತು ಅಪ್ರಚಾರ ನಡೆಸುತ್ತಿದ್ದಾರೆ’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ವಿ.ದಯಾನಂದ್‌ ಕಿಡಿಕಾರಿದರು.

ರೈತರಿಗೆ ₹ 1.45 ಕೋಟಿ ಸಾಲ ವಿತರಿಸಲಾಯಿತು. ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಸೋಮಣ್ಣ, ಸೊಣ್ಣೇಗೌಡ, ವ್ಯವಸ್ಥಾಪಕ ರಮೇಶ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)