ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಬಾಗಿಲು: ಗ್ರಾಹಕರಿಗೆ ಹೋಟೆಲ್ ದರದ ಬರೆ

ಹೆದ್ದಾರಿಯಲ್ಲಿ ಸರ್ಕಾರವೇ ಹೋಟೆಲ್, ಕ್ಯಾಂಟೀನ್ ತೆರೆಯಲಿ: ಪ್ರಯಾಣಿಕರು
ಕೆ.ತ್ಯಾಗರಾಜಪ್ಪ ಕೊತ್ತೂರು
Published : 9 ಸೆಪ್ಟೆಂಬರ್ 2024, 5:48 IST
Last Updated : 9 ಸೆಪ್ಟೆಂಬರ್ 2024, 5:48 IST
ಫಾಲೋ ಮಾಡಿ
Comments

ಮುಳಬಾಗಿಲು: ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯವೂ ನೂರಾರು ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಹೆದ್ದಾರಿಯಲ್ಲಿ ಸರ್ಕಾರಿ ಅಥವಾ ರಿಯಾಯಿತಿ ದರದ ಹೋಟೆಲ್ ಇಲ್ಲದ ಕಾರಣ ಪ್ರಯಾಣಿಕರು ಖಾಸಗಿ ಹೋಟೆಲ್‌ಗಳಲ್ಲಿ ದುಬಾರಿ ಬೆಲೆ ತೆತ್ತು ಆಹಾರ ಸೇವಿಸಬೇಕಿದೆ. ಆದರೆ, ಈ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿನ ಆಹಾರದ ದರವು ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರ ಕೈಗೆಟುಕುವುದಿಲ್ಲ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರಿಯಾಯಿತಿ ದರದಲ್ಲಿ ಆಹಾರ ಪೂರೈಸುವ ಸರ್ಕಾರಿ ಸ್ವಾಮ್ಯದ ಹೋಟೆಲ್ ಅಥವಾ ಇಂದಿರಾ ಕ್ಯಾಂಟೀನ್ ರೀತಿಯ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಪ್ರಯಾಣಿಕರ ವಾದ. 

ಇಂದಿರಾ ಕ್ಯಾಂಟೀನ್ ಅಥವಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಹೋಟೆಲ್ ಆರಂಭಿಸಿದರೆ, ಸರ್ಕಾರದ ಬೊಕ್ಕಸಕ್ಕೆ ಹಣ ಹರಿದುಬರುವುದಲ್ಲದೆ, ಪ್ರಯಾಣಿಕರಿಗೂ ಅನುಕೂಲವಾಗಲಿದೆ ಎಂಬುದು ಪ್ರಯಾಣಿಕರ ಅಂಬೋಣ. 

ಮುಳಬಾಗಿಲು ತಾಲ್ಲೂಕಿನ ಮೂಲಕ ನಂಗಲಿಯಿಂದ ಬೆಂಗಳೂರಿನ ಕೆ.ಆರ್.ಪುರದವರೆಗಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ಪ್ರವಾಸಿಗರು, ನೌಕರರು, ಸಾರ್ವಜನಿಕರು ಹಾಗೂ ನಾನಾ ಕೆಲಸ ಕಾರ್ಯಗಳ ನಿಮಿತ್ತ ಸಂಚರಿಸುತ್ತಲೇ ಇರುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಹೋಟೆಲ್ ವ್ಯಾಪಾರಿಗಳು ಹೆದ್ದಾರಿಯುದ್ದಕ್ಕೂ ದೊಡ್ಡ ದೊಡ್ಡ ಹೋಟೆಲ್ ಆರಂಭಿಸಿದ್ದು, ಈ ಹೋಟೆಲ್‌ಗಳು ಉಳ್ಳವರಿಗೆ ಮಾತ್ರ ಎಂಬಂತಾಗಿದೆ. ಇನ್ನು ಬಡವರು ಮತ್ತು ಮಧ್ಯಮ ವರ್ಗದವರು ಹೋಟೆಲ್‌ಗಳಲ್ಲಿ ಊಟದ ಮಾಡದೆ ಇರುವ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು. 

ಈ ಮಾರ್ಗದಲ್ಲಿ ನೂರಕ್ಕೂ ಹೆಚ್ಚು ಹೋಟೆಲ್‌ಗಳಿದ್ದು, ಒಂದಕ್ಕಿಂತ ಒಂದು ಹೋಟೆಲ್ ಅತ್ಯಾಕರ್ಷಕವಾಗಿವೆ. ಈ ಹೋಟೆಲ್‌ಗಳಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಲಭ್ಯವಿದೆ. ಆದರೆ, ಸಾಮಾನ್ಯ ಗ್ರಾಹಕರಿಗೆ ಈ ಹೋಟೆಲ್ ದರಗಳು ಕೈಗೆಟುಕುವುದಿಲ್ಲ. 

ಸಾಮಾನ್ಯವಾಗಿ ಹೆದ್ದಾರಿಯ ಉದ್ದಕ್ಕೂ ಇರುವ ಬಹುತೇಕ ಹೋಟೆಲ್‌ಗಳಲ್ಲಿ ಒಂದು ಊಟ ₹150–₹250ರವರೆಗೆ ಇದ್ದರೆ, ನಾನಾ ತಿನಿಸುಗಳ ಬೆಲೆ ಪ್ರಾರಂಭವಾಗುವುದೇ ಸುಮಾರು ₹50–₹60ಗಳಿಂದ. ಇನ್ನು ಒಂದು ಕಪ್ ಚಹಾ ಮತ್ತು ಕಾಫಿ, ತಂಪು ಪಾನೀಯಕ್ಕೂ ಹೆಚ್ಚು ಹಣ ಸಂದಾಯ ಮಾಡಬೇಕಾಗುತ್ತದೆ.

ಹೆದ್ದಾರಿಯ ಅಲ್ಲಲ್ಲಿ ಇರುವ ಸಣ್ಣಪುಟ್ಟ ಡಾಬಾಗಳಲ್ಲಿ ಸಾಮಾನ್ಯ ಜನ ಊಟ ಅಥವಾ ಇನ್ನಿತರೆ ಆಹಾರ ಸೇವನೆ ಮಾಡಬಹುದು. ಆದರೆ, ಅಲ್ಲಿ ಮದ್ಯಪಾನ ನಿಷೇಧವಿದ್ದರೂ, ಬಹುತೇಕ ಡಾಬಾಗಳಲ್ಲಿ ಮದ್ಯಪಾನ ಮಾಡುವವರ ಸಂಖ್ಯೆಯೇ ಹೆಚ್ಚಿರುತ್ತದೆ. ಹೀಗಾಗಿ ಕೆಲವರು ಹೆದ್ದಾರಿ ಪಕ್ಕ ಇರುವ ಫಾಸ್ಟ್‌ಫುಡ್‌ಗಳ ಮೊರೆ ಹೋಗುತ್ತಾರೆ. ಆದರೆ, ರಾತ್ರಿ ಹೊತ್ತು ಫಾಸ್ಟ್‌ಫುಡ್ ಕೇಂದ್ರಗಳೂ ಮುಚ್ಚಿರುತ್ತವೆ ಎಂದು ವಾಹನ ಸವಾರರು, ಲಾರಿ ಮತ್ತಿತ್ತರ ಸರಕು ಸಾಗಣೆ ವಾಹನಗಳ ಚಾಲಕರು, ಬಡವರು ಮತ್ತು ಮಧ್ಯಮ ವರ್ಗದ ಪ್ರಯಾಣಿಕರು ಅಳಲು ತೋಡಿಕೊಳ್ಳುತ್ತಾರೆ.

ಬೇಕಿದೆ ಸರ್ಕಾರಿ ಹೋಟೆಲ್: ಹೆದ್ದಾರಿಯುದ್ದಕ್ಕೂ 24×7 ಮಾದರಿ ದಿನದ 24 ಗಂಟೆ ಬಡ ಹಾಗೂ ಮಧ್ಯಮ ವರ್ಗದ ಜನರ ಹಿತಕ್ಕಾಗಿ ಸರ್ಕಾರವು ಪ್ರವಾಸೋದ್ಯಮ ಅಥವಾ ಇಂದಿರಾ ಕ್ಯಾಂಟೀನ್ ಮಾದರಿ ಹೋಟೆಲ್‌ಗಳನ್ನು ತೆರೆಯಬೇಕು ಎಂಬುದು ಪ್ರಯಾಣಿಕರ ವಾದ. 

ತಾಲ್ಲೂಕಿನ ದೇವರಾಯ ಸಮುದ್ರ ಸುಂಕ ವಸೂಲಾತಿ ಕೇಂದ್ರ, ಮುಳಬಾಗಿಲು ಬೈಪಾಸ್, ನರಸಿಂಹ ತೀರ್ಥ, ಎನ್.ವಡ್ಡಹಳ್ಳಿ, ಕೆಜಿಎಫ್ ಅಥವಾ ತಾಯಲೂರು ಬೈಪಾಸ್, ನಂಗಲಿ, ನಂಗಲಿ ಸುಂಕ ವಸೂಲಿ ಕೇಂದ್ರ ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಸರ್ಕಾರವೇ ಹೋಟೆಲ್‌ಗಳನ್ನು ತೆರೆದರೆ ಕನಿಷ್ಠ ತಾಲ್ಲೂಕಿನ ಮೂಲಕ ಹಾದು ಹೋಗುವವರಿಗೆ ಅನುಕೂಲವಾಗಲಿದೆ ಎಂಬುದು ಜನರ ಆಶಯವಾಗಿದೆ. 

ಹೆದ್ದಾರಿ ಅಗಲೀಕರಣ ಸಂಧರ್ಭದಲ್ಲಿ ಹೊಡೆದು ಹಾಕಲಾಗಿದ್ದ ಪ್ರವಾಸೋದ್ಯಮ ಹೋಟೆಲ್ಲಿನ ಅರ್ಧ ಭಾಗ ವರ್ಷಗಳು ಕಳೆದರೂ ದುರಸ್ತಿ ಆಗದೆ ಇರುವುದು.
ಹೆದ್ದಾರಿ ಅಗಲೀಕರಣ ಸಂಧರ್ಭದಲ್ಲಿ ಹೊಡೆದು ಹಾಕಲಾಗಿದ್ದ ಪ್ರವಾಸೋದ್ಯಮ ಹೋಟೆಲ್ಲಿನ ಅರ್ಧ ಭಾಗ ವರ್ಷಗಳು ಕಳೆದರೂ ದುರಸ್ತಿ ಆಗದೆ ಇರುವುದು.
ಬೆಂಗಳೂರು, ಹೈದರಾಬಾದ್, ತಿರುಪತಿ, ಮೈಸೂರು ಮತ್ತಿತರ ಕಡೆಗಳಲ್ಲಿ ಇರುವ ಫೈವ್ ಸ್ಟಾರ್, ಸೆವೆನ್ ಸ್ಟಾರ್ ಮಾದರಿಯ ಹೋಟೆಲ್ಲುಗಳಿಂದ ಹಿಡಿದು ಇತ್ತೀಚಿನ ಅತ್ಯಾಧುನಿಕ ಮಾದರಿಯ ಹವಾ ನಿಯಂತ್ರಿತ ಹಾಗೂ ಬೇಕಾದ ಸೌಲಭ್ಯ ಸಿಗುವ ಹೋಟೆಲ್ಲುಗಳು ಹೆದ್ದಾರಿಯ ಉದ್ದಕ್ಕೂ ನಾಯಿಕೊಡೆಗಳಂಗೆ ಇವೆ.ಆದರೆ ಎಲ್ಲಾ ಹೋಟೆಲ್ಲುಗಳಲ್ಲಿ ಎಲ್ಲರೂ ಸಾಮಾನ್ಯವಾಗಿ ಹೊಟ್ಟೆಯ ತುಂಬಾ ತಿನ್ನಲಾರದ ಸ್ಥಿತಿ ಇದೆ.ಹೀಗಿದ್ದರೂ ಕೆಲವರು ವಿಧಿ ಇಲ್ಲದೆ ತಿನ್ನಲು ಹೋದರೆ, ಮತ್ತೆ ಕೆಲವರು ತಿನ್ನಲಾರದೆ ಸಣ್ಣ ಹೋಟೆಲ್ ಎಲ್ಲಿಯಾದರೂ ಸಿಗುತ್ತದೆಯೇ ಎಂದು ಪರದಾಡುವಂತಾಗಿದೆ.
ಅನೈತಿಕ ಚಟುವಟಿಕೆ ತಾಣವಾದ ಹೋಟೆಲ್
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಹೋಗಿ ಬರುವವರಿಗಾಗಿ ತಾಲ್ಲೂಕಿನ ನರಸಿಂಹ ತೀರ್ಥದ ಬಳಿ ರಿಯಾಯಿತಿ ಹಾಗೂ ಕಡಿಮೆ ದರದಲ್ಲಿ ಆಹಾರ ಪೂರೈಸಲು ಪ್ರವಾಸೋದ್ಯಮ ಇಲಾಖೆ ವತಿಯಿಂದ ಮಯೂರ ಅಪೂರ್ವ ಹೆಸರಿನಲ್ಲಿ ಹೋಟೆಲ್ ಮತ್ತು ವಸತಿ ಗೃಹಗಳನ್ನು ಸ್ಥಾಪಿಸಿದೆ.  ಮಯೂರ ಮತ್ತು ಅಪೂರ್ವ ಹೋಟೆಲ್ ಮತ್ತು ವಸತಿ ಗೃಹದಲ್ಲಿ ವ್ಯಾಪಾರ ವಹಿವಾಟು ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ 13 ವರ್ಷಗಳ ಹಿಂದೆ ಹೆದ್ದಾರಿ ಅಗಲೀಕರಣದ ಕಾಮಗಾರಿ ವೇಳೆ ಹೋಟೆಲ್‌ನ ಅರ್ಧಭಾಗವನ್ನು ಒಡೆಯಲಾಯಿತು. ಅಂದು ಮುಚ್ಚಿದ ಹೋಟೆಲ್ ಮತ್ತು ವಸತಿ ಗೃಹವು ಈವರೆಗೆ ತೆರೆಯಲಾಗಿಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಕಟ್ಟಡವು ಇಂದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಈ ಭಾಗದಲ್ಲಿ ಪ್ರತಿನಿತ್ಯ ಓಡಾಡುವ ಜನರು. 
ಕೈಗೆಟುಕದ ದರ
ತಾಲ್ಲೂಕಿನ ಮೂಲಕ ಹಾದುಹೋಗಿರುವ ಹೆದ್ದಾರಿಯಲ್ಲಿ ಪ್ರವಾಸಿಗರು ಹಾಗೂ ನಾನಾ ಕೆಲಸ ಕಾರ್ಯಗಳಿಗಾಗಿ ಹೋಗಿ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದ ಈ ಭಾಗದಲ್ಲಿರುವ ಖಾಸಗಿ ಹೋಟೆಲ್‌ನವರಿಗೆ ಹೆಚ್ಚಿನ ಲಾಭವಾಗುತ್ತಿದೆ. ಆದರೆ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಈ ಹೋಟೆಲ್‌ನ ದರ ಕೈಗೆಟುಕುವುದಿಲ್ಲ.  ಪ್ರಭಾಕರ್ ಪ್ರಯಾಣಿಕ ಇನ್ನೂ ಆರಂಭವಾಗದ ಹೋಟೆಲ್ ಸರ್ಕಾರ ಪ್ರವಾಸೋದ್ಯಮ ಇಲಾಖೆಯು ಮುಳಬಾಗಿಲು ನಗರದ ಹೊರವಲಯದಲ್ಲಿ ಹೋಟೆಲ್ ಪ್ರಾರಂಭಿಸಿ ರಿಯಾಯಿತಿ ದರದಲ್ಲಿ ಆಹಾರ ಪೂರೈಸುತ್ತಿತ್ತು. ರಸ್ತೆ ಅಗಲೀಕರಣದಿಂದ ಸ್ಥಗಿತಗೊಂಡಿರುವ ಈ ಹೋಟೆಲ್ ಇಂದಿಗೂ ಆರಂಭವಾಗಿಲ್ಲ. ಇದೇ ಮಾದರಿಯಲ್ಲಿ ಮತ್ತಷ್ಟು ಹೋಟೆಲ್ ಅಥವಾ ಜನಸಂದಣಿ ಇರುವ ಕಡೆ ಇಂದಿರ ಕ್ಯಾಂಟೀನ್ ಮಾದರಿ ಹೋಟೆಲ್ ಸ್ಥಾಪಿಸಿದರೆ ಜನರಿಗೆ ಅನುಕೂಲವಾಗಲಿದೆ.  ಜಯಪ್ಪ ಮುಳಬಾಗಿಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT