ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ನಾಯಿ ಕಚ್ಚಿ ನಾಲ್ಕು ಮಕ್ಕಳಿಗೆ ಗಾಯ

ನಗರಸಭೆ ಮುಂದೆ ಪೋಷಕರು, ನಿವಾಸಿಗಳ ಪ್ರತಿಭಟನೆ
Last Updated 21 ಸೆಪ್ಟೆಂಬರ್ 2022, 5:21 IST
ಅಕ್ಷರ ಗಾತ್ರ

ಕೋಲಾರ: ಬೀದಿ ನಾಯಿಗಳ ದಾಳಿಯಲ್ಲಿ ನಾಲ್ಕು ಮಕ್ಕಳು ಗಾಯಗೊಂಡಿದ್ದು, ಮಕ್ಕಳ ಪೋಷಕರ ಸಮೇತ ಸ್ಥಳೀಯರು ಹಾಗೂ ನಗರಸಭಾ ಸದಸ್ಯರು ಇಲ್ಲಿನ ನಗರಸಭೆ ಮುಂದೆ ಮಂಗಳವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

ಬೀದಿ ನಾಯಿಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.

ನಗರದ ಪೂಲ್ ಷಾ ಮೊಹಲ್ಲಾ ಹಾಗೂ ಕಾಕಿಷಾ ಮೊಹಲ್ಲಾದ ಮಕ್ಕಳ ಮೇಲೆ ಸೋಮವಾರ ನಾಯಿಗಳು ಕಚ್ಚಿ ಗಾಯಗೊಳಿಸಿವೆ.

‘ತಕ್ಷಣವೇ ಬೀದಿ ನಾಯಿಗಳನ್ನು ಹಿಡಿದು ಬೇರೆ ಕಡೆ ರವಾನೆ ಮಾಡಬೇಕು. ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿ ಬೀದಿ ನಾಯಿಗಳ ಉಪಟಳ ಕಡಿಮೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ನಗರದ 35 ವಾರ್ಡ್‌ಗಳಲ್ಲೂ ಬೀದಿ ನಾಯಿಗಳ ಹಾಗೂ ಕೋತಿಗಳ ಆರ್ಭಟ ಹೆಚ್ಚಿದೆ. ಇದರಿಂದ ನಿರ್ಭೀತಿಯಿಂದ ಸಾರ್ವಜನಿಕರು ಹಾಗೂ ಮಕ್ಕಳು ರಸ್ತೆಗಳಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. ಮಕ್ಕಳು, ವಿದ್ಯಾರ್ಥಿಗಳು ಆಟವಾಡಲು ಶಾಲೆಗೆ, ಟ್ಯೂಷನ್ ಗೆ ಹೋಗಲು ಭಯಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನಗಳ ಮೇಲೆ ಎಗರುವ ಬೀದಿ ನಾಯಿಗಳಿಂದ ಸವಾರರು ಕೆಳಗೆ ಬಿದ್ದು ಗಾಯಗೊಂಡು ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದಾರೆ. ಎಲ್ಲಾ ಪರಿಸ್ಥಿತಿಗಳಿಗೆ ನೇರ ಕಾರಣ ನಗರಸಭೆ ಅಧಿಕಾರಿಗಳು’ ಎಂದು ದೂರಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತೆ ಮನವಿ ಸ್ವೀಕರಿಸಿ, ‘ಕಳೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು ಬೇಡಿಕೆ ಈಡೇರಿಸಲು ಕ್ರಮ ವಹಿಸಲಾಗುವುದು. ಜೊತೆಗೆ ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲು ಕ್ರಮ ವಹಿಸುತ್ತೇವೆ’ ಎಂದು ಭರವಸೆ ನೀಡಿದರು.

ಪ್ರತಿಭಟನೆಯ ನೇತೃತ್ವವನ್ನು ನಗರಸಭೆ ಸದಸ್ಯರಾದ ಸೈಯದ್ ಸಮಿಉಲ್ಲಾ, ಹಿದಾಯತ್ ಉಲ್ಲಾ ಖಾನ್, ನಜೀಯಾ ಬೇಗಂ, ಅಜ್ಮನ್ ಉದ್ದೀನ್, ನೂರಿತಮರ್, ಸಾರೀಕ, ಪ್ರಸಾದ್ ಬಾಬು, ಸೂರಿ ಹಾಗೂ ಪೋಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT