ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮನೆ ಚುನಾವಣೆ: ಉಮೇದುವಾರಿಕೆ ಪರಿಶೀಲನೆ ಅಂತ್ಯ

Last Updated 25 ನವೆಂಬರ್ 2021, 4:09 IST
ಅಕ್ಷರ ಗಾತ್ರ

ಕೋಲಾರ: ವಿಧಾನ ಪರಿಷತ್‌ಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಎಲ್ಲಾ 4 ಅಭ್ಯರ್ಥಿಗಳ ಉಮೇದುವಾರಿಕೆ ಊರ್ಜಿತವಾಗಿದ್ದು, ಅಂತಿಮವಾಗಿ ಕಣದಲ್ಲಿ ಉಳಿಯುವ ಕದನ ಕಲಿಗಳ ಸ್ಪಷ್ಟ ಚಿತ್ರಣ ನ.26ರ ನಂತರ ಲಭ್ಯವಾಗಲಿದೆ.

ಅವಿಭಜಿತ ಕೋಲಾರ ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡಿರುವ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಮಂಗಳವಾರ (ನ.23) ಕಡೆಯ ದಿನವಾಗಿತ್ತು. ಒಟ್ಟು 4 ಮಂದಿ ನಾಮಪತ್ರ ಸಲ್ಲಿಸಿದ್ದರು.

ಕಾಂಗ್ರೆಸ್‌ನಿಂದ ಎಂ.ಎಲ್.ಅನಿಲ್‌ಕುಮಾರ್, ಬಿಜೆಪಿಯಿಂದ ಡಾ.ಕೆ.ಎನ್‌. ವೇಣುಗೋಪಾಲ್‌, ಜೆಡಿಎಸ್‌ ಪಕ್ಷದಿಂದ ವಿ.ಇ.ರಾಮಚಂದ್ರ (ವಕ್ಕಲೇರಿ ರಾಮು) ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಎಂ.ಪಿ.ಅನಿಲ್‌ಕುಮಾರ್‌ ಉಮೇದುವಾರಿಕೆ ಸಲ್ಲಿಸಿದ್ದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಅಭ್ಯರ್ಥಿಗಳ ಸಮ್ಮುಖದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಆರ್‌.ಸೆಲ್ವಮಣಿ ಬುಧವಾರ ನಾಮಪತ್ರಗಳನ್ನು ಪರಿಶೀಲಿಸಿದರು. ಸಲ್ಲಿಕೆಯಾಗಿದ್ದ 4 ನಾಮಪತ್ರ ಕ್ರಮಬದ್ಧವಾಗಿವೆ
ಎಂದು ಸೆಲ್ವಮಣಿ ಘೋಷಿಸಿದರು.

4 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿರುವುದರಿಂದ ಈ ಕ್ಷಣದ ಲೆಕ್ಕಾಚಾರದಂತೆ ಚುನಾವಣೆಯಲ್ಲಿ ತೀವ್ರ ಹಣಾಹಣಿ ಏರ್ಪಟ್ಟಿದೆ. ಉಮೇದುವಾರಿಕೆ ವಾಪಸ್ ಪಡೆಯಲು 48 ಗಂಟೆಯಷ್ಟೇ ಬಾಕಿ ಉಳಿದಿದೆ. ನಾಮಪತ್ರ ಹಿಂದಕ್ಕೆ ಪಡೆಯುವವರು ಯಾರು ಅಥವಾ ಎಲ್ಲರೂ ಕಣದಲ್ಲಿ ಉಳಿಯುತ್ತಾರಾ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಒಂದೇ ಹೆಸರಿನವರು: ಎಂ.ಎಲ್‌,ಅನಿಲ್‌ಕುಮಾರ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಮುಳಬಾಗಿಲು ತಾಲ್ಲೂಕಿನ ಎಂ.ಪಿ.ಅನಿಲ್‌ಕುಮಾರ್‌ ಉಮೇದುವಾರಿಕೆ ಸಲ್ಲಿಸಿದ್ದಾರೆ. ಈ ಇಬ್ಬರ ಹೆಸರು ಒಂದೇ. ಆದರೆ, ಇನಿಷಿಯಲ್‌ನಲ್ಲಿ ಮಾತ್ರ ವ್ಯತ್ಯಾಸವಿದೆ.

ಚುನಾವಣೆಯಲ್ಲಿ ಒಂದೇ ಹೆಸರಿನವರನ್ನು ಕಣಕ್ಕೆ ಇಳಿಸುವುದರ ಹಿಂದೆ ಮತಗಳನ್ನು ವಿಭಜಿಸುವ ತಂತ್ರಗಾರಿಕೆ ಇದ್ದೇ ಇದೆ. ಇಲ್ಲೂ ಅದೇ ಮಸಲತ್ತು ನಡೆದರೆ ಪಕ್ಷೇತರ ಅಭ್ಯರ್ಥಿ ಎಂ.ಪಿ.ಅನಿಲ್‌ಕುಮಾರ್‌ ನಾಮಪತ್ರ ವಾಪಸ್ ಪಡೆಯುವ ಸಾಧ್ಯತೆಯಿಲ್ಲ. ಒಟ್ಟಾರೆ ನಾಮಪತ್ರ ಸಲ್ಲಿಸಿರುವ 4 ಅಭ್ಯರ್ಥಿಗಳಲ್ಲಿ ಅಂತಿಮ ಕಣದಲ್ಲಿ ಇರುವ ಅಭ್ಯರ್ಥಿಗಳು ಯಾರೆಂಬ ಬಗ್ಗೆ ಶುಕ್ರವಾರ (ನ.26) ಸ್ಪಷ್ಟ ಚಿತ್ರಣ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT