ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ತತ್ವಾದರ್ಶ ಸಮಾಜಕ್ಕೆ ದಾರಿದೀಪ: ಉಪ ವಿಭಾಗಾಧಿಕಾರಿ ಸೋಮಶೇಖರ್

ಗಾಂಧಿ ಜಯಂತಿಯಲ್ಲಿ ಉಪ ವಿಭಾಗಾಧಿಕಾರಿ ಸೋಮಶೇಖರ್‌ ಅಭಿಪ್ರಾಯ
Last Updated 2 ಅಕ್ಟೋಬರ್ 2020, 10:12 IST
ಅಕ್ಷರ ಗಾತ್ರ

ಕೋಲಾರ: ‘ರಕ್ತಪಾತವಿಲ್ಲದೆ ಅಹಿಂಸೆಯ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿಯ ತತ್ವಾದರ್ಶ ಸಮ ಸಮಾಜ ನಿರ್ಮಾಣಕ್ಕೆ ದಾರಿದೀಪ’ ಎಂದು ಉಪ ವಿಭಾಗಾಧಿಕಾರಿ ಸೋಮಶೇಖರ್‌ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಹಾಗೂ ನಗರಸಭೆ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗಾಂಧಿ ಜಯಂತಿಯಲ್ಲಿ ಮಾತನಾಡಿ, ‘ದೇಶದ ಅಸ್ತಿತ್ವ ಇರುವವರೆಗೂ ಗಾಂಧೀಜಿ ಹೆಸರು ಶಾಶ್ವತವಾಗಿರುತ್ತದೆ. ಅವರ ತತ್ವಾದರ್ಶದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು’ ಎಂದು ಕಿವಿಮಾತು ಹೇಳಿದರು.

‘200 ವರ್ಷಗಳ ಕಾಲ ಪರಕೀಯರ ಆಡಳಿತಕ್ಕೆ ಒಳಪಟ್ಟಿದ್ದ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಗಾಂಧೀಜಿ ಪ್ರಮುಖ ಪಾತ್ರ ವಹಿಸಿದರು. ಅವರ ತತ್ವಾದರ್ಶ ಇಂದಿಗೂ ಪ್ರಸ್ತುತ. ಸರಳ ವ್ಯಕ್ತಿತ್ವದ ಗಾಂಧೀಜಿಯ ನೆನಪು ಜನಮಾನಸದಲ್ಲಿ ಶಾಶ್ವತವಾಗಿದೆ. ಅವರ ನಡೆ, ನುಡಿ ಮತ್ತು ಜೀವನ ಶೈಲಿಯನ್ನು ಎಲ್ಲರೂ ಅನುಸರಿಸಬೇಕು’ ಎಂದು ಸಲಹೆ ನೀಡಿದರು.

‘ಗಾಂಧೀಜಿ ಇಡೀ ಜಗತ್ತೇ ಗುರುತಿಸಿರುವ ಮಹಾನ್ ನಾಯಕ. ಯಾವುದೇ ಕೆಲಸ ಮಾಡಬೇಕಾದರೂ ತಾಳ್ಮೆ, ಶ್ರಮ ಅಗತ್ಯ. ಬೇಗ ಪ್ರತಿಫಲ ಸಿಗಬೇಕೆಂದು ಹಿಂಸಾತ್ಮಕ ಮಾರ್ಗ ಅಥವಾ ಅಡ್ಡದಾರಿ ಹಿಡಿಯುವುದು ಸರಿಯಲ್ಲ. ತಾಳ್ಮೆಯಿಂದ ಗಾಂಧೀಜಿ ಸಿದ್ಧಾಂತದಂತೆ ಅಹಿಂಸೆ ಮಾರ್ಗದಲ್ಲಿ ಸಾಗಿದರೆ ಖಂಡಿತ ಯಶಸ್ಸು ಸಿಗುತ್ತದೆ’ ಎಂದು ತಿಳಿಸಿದರು.

ಸಹಬಾಳ್ವೆ ಸಂದೇಶ: ‘ಜಗತ್ತಿನ ಹಲವು ದೇಶಗಳು ಹಿಂಸಾ ಹೋರಾಟದ ಮೂಲಕ ಸ್ವಾತಂತ್ರ್ಯ ಪಡೆದಿವೆ. ಆದರೆ, ಭಾರತವು ಗಾಂಧೀಜಿಯವರ ಅಹಿಂಸೆ ಮಾರ್ಗದ ಮೂಲಕ ಸ್ವಾತಂತ್ರ್ಯ ಪಡೆದಿದೆ. ಗಾಂಧೀಜಿಯು ವಿವಿಧ ಧರ್ಮಗಳನ್ನು ಒಗ್ಗೂಡಿಸಿ ಸಹಬಾಳ್ವೆಯ ಸಂದೇಶ ಸಾರಿದರು. ಅಲ್ಲದೇ, ಹರಿಜನ ಪತ್ರಿಕೆ ಆರಂಭಿಸಿ ಸಾಮಾಜಿಕ ಪಿಡುಗುಗಳನ್ನು ತೊಡೆದುಹಾಕಲು ಶ್ರಮಿಸಿದರು’ ಎಂದರು.

‘ಅ.2 ಮಾಜಿ ಪ್ರಧಾನಮಂತ್ರಿ ಲಾಲ್‌ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನವಾಗಿದೆ. ದೇಶಕ್ಕೆ ವಿಶಿಷ್ಟ ಕೊಡುಗೆ ನೀಡಿದ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಸರಳತೆ ಮಾದರಿಯಾಗಿದೆ. ಅಧಿಕಾರ ದುರ್ಬಳಕೆ ಮಾಡಿಕೊಳ್ಳದೆ ಸಮಾಜದ ಏಳಿಗೆಗೆ ಶ್ರಮಿಸಬೇಕೆಂದು ತೋರಿಸಿಕೊಟ್ಟರು’ ಎಂದು ಸ್ಮರಿಸಿದರು.

ಗ್ರಾಮ ಸ್ವರಾಜ್ಯ: ‘ಗಾಂಧೀಜಿ ಗ್ರಾಮ ಸ್ವರಾಜ್ಯದ ಕನಸು ಕಂಡವರು. ದೇಶದ ಸಂಸ್ಕೃತಿ ಗ್ರಾಮಗಳಲ್ಲಿ ಅಡಗಿದೆ. ಗ್ರಾಮಗಳ ಉದ್ಧಾರವಾದರೆ ಮಾತ್ರ ದೇಶದ ಉದ್ಧಾರ ಸಾಧ್ಯ ಎಂಬುದು ಗಾಂಧೀಜಿಯ ನಂಬಿಕೆಯಾಗಿತ್ತು. ಅಸ್ಪೃಶ್ಯತೆ ನಿವಾರಣೆಯಲ್ಲಿ ಗಾಂಧೀಜಿ ಮಹತ್ತರ ಪಾತ್ರ ವಹಿಸಿದರು’ ಎಂದು ವಿವರಿಸಿದರು.

‘ಗಾಂಧೀಜಿ ಸ್ವದೇಶಿ ವಸ್ತುಗಳ ಬಳಕೆ ಮತ್ತು ಉತ್ಪಾದನೆಗೆ ಹೆಚ್ಚು ಒತ್ತು ಕೊಟ್ಟರು. ವಿದೇಶಿ ಬಟ್ಟೆ ತ್ಯಜಿಸಿ ದೇಸಿ ಬಟ್ಟೆಗಳ ಬಳಕೆಗೆ ಕರೆ ಕೊಟ್ಟರು. ಚರಕದ ಬಳಕೆಯನ್ನು ಪರಿಚಯಿಸಿ ಸ್ವತಃ ಚರಕದಿಂದ ಬಟ್ಟೆ ನೇಯ್ದು ಬಳಸುತ್ತಿದ್ದರು. ಗಾಂಧೀಜಿಯ ಸರಳತೆ ಹಾಗೂ ಚಿಂತನೆ ಅನುಕರಣೀಯ’ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮುದ್ರಿಸಿರುವ ಮಾರ್ಚ್ ಆಫ್ ಕರ್ನಾಟಕ ಹಾಗೂ ಜನಪದ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಸರ್ವ ಧರ್ಮ ಪ್ರಾರ್ಥನೆ ಮಾಡಲಾಯಿತು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ, ನಗರಸಭೆ ಸದಸ್ಯರಾದ ಕೆ.ಎಂ.ಮಂಜುನಾಥ, ಎಸ್‌.ಆರ್‌.ಮುರಳಿಗೌಡ, ಆಯುಕ್ತ ಶ್ರೀಕಾಂತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಪಲ್ಲವಿ ಹೊನ್ನಾಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌.ನಾಗರಾಜಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT