ಸೋಮವಾರ, ಜನವರಿ 20, 2020
29 °C

ಕೋಲಾರ| ವಿಜ್ಞಾನ ಪದವಿಗೆ ಮಾನ್ಯತೆ ನೀಡಿ: ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ವಿದ್ಯಾರ್ಥಿಗಳು ವೈದ್ಯ, ಎಂಜನಿಯರ್ ಆಗುವ ಇಚ್ಚೆ ಬದಲಿಸಿಕೊಂಡು ವಿಜ್ಞಾನ ಪದವಿ ಮಾಡಿ ದೇಶಕ್ಕೆ ಕೊಡುಗೆ ನೀಡುವ ವಿಜ್ಞಾನಿಗಳಾಗುವತ್ತ ಚಿಂತಿಸಬೇಕು’ ಎಂದು ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಸಲಹೆ ನೀಡಿದರು.

ತಾಲ್ಲೂಕಿನ ನರಸಾಪುರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬುಧವಾರ ನಡೆದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ‘ವೃತ್ತಿ ಶಿಕ್ಷಣಕ್ಕೆ ಆದ್ಯತೆ ನೀಡಿದರೆ ತಪ್ಪಲ್ಲ, ಆದರ ಜತೆಗೆ ವಿಜ್ಞಾನ ಪದವಿಗೆ ಹೆಚ್ಚಿನ ಮಾನ್ಯತೆ ನೀಡಬೇಕು’ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ ಮಾತನಾಡಿ, ‘ನರಸಾಪುರದಲ್ಲಿ ಕೈಗಾರಿಕಾ ವಲಯ ನಿರ್ಮಾಣವಾಗಿರುವುದರಿಂದ ಕೌಶಲ ತರಬೇತಿ ಪಡೆದುಕೊಂಡು ಕನಿಷ್ಟ ವಿದ್ಯಾಭ್ಯಾಸ ಮಾಡಿದರೂ ಜೀವನೋಪಾಯಕ್ಕಾಗಿ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆಯಬಹುದು’ ಎಂದು ಹೇಳಿದರು.

‘ಜೀವನದ ಪ್ರತಿ ಹಂತದಲ್ಲೂ ವಿಜ್ಞಾನವನ್ನು ಕಾಣಬಹುದಾಗಿದೆ. ವಿಜ್ಞಾನಕ್ಕೆ ಒತ್ತು ನೀಡಿದರೆ ಸಮಾಜದ ಅಭಿವೃದ್ಧಿ ಸಾಧ್ಯ. ನೀವು ಸಮಾಜದಲ್ಲಿ ಸಾಧಕರಾಗಿ ದೇಶಕ್ಕೆ ಕೊಡುಗೆ ನೀಡುವ ಶಕ್ತಿ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್ ಮಾತನಾಡಿ, ‘ವಿಜ್ಞಾನ ವಸ್ತು ಪ್ರದರ್ಶನಗಳಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚುತ್ತದೆ. ಓದಿ ಕಲಿಯುವುದಕ್ಕಿಂತ ಮಕ್ಕಳು ಪ್ರಯೋಗಗಳ ಮೂಲಕ ನೋಡಿ ಕಲಿಯಲು ಉತ್ಸುಕರಾಗಿರುತ್ತಾರೆ’ ಎಂದರು.

ಶಿಕ್ಷಣ ಸಂಯೋಜಕ ರಾಘವೇಂದ್ರ ಮಾತನಾಡಿ, ‘ವಿಜ್ಞಾನ ಮತ್ತು ಅದರ ಶಕ್ತಿ ಹಿಂದೆ ಪುರಾತನ ಭಗವದ್ಗೀತೆಯಲ್ಲೇ ಉಲ್ಲೇಖವಾಗಿದೆ. ವಿಜ್ಞಾನಕ್ಕೆ ಭಾರತೀಯರು ನೀಡಿದಷ್ಟು ಕೊಡುಗೆ ಬೇರೆಯವರು ನೀಡಿಲ್ಲ’ ಎಂದು ತಿಳಿಸಿದರು. ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ ಗೋವಿಂದ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು