ಸೋಮವಾರ, ಸೆಪ್ಟೆಂಬರ್ 16, 2019
22 °C

ಖಾಸಗಿ ಶಾಲಾ ವ್ಯಾಮೋಹ ಹೋಗಲಾಡಿಸಿ: ಉಪನಿರ್ದೇಶಕ ರತ್ನಯ್ಯ ಕಿವಿಮಾತು

Published:
Updated:
Prajavani

ಕೋಲಾರ: ‘ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬುದಕ್ಕೆ ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶವೇ ಸಾಕ್ಷಿ. ಶಿಕ್ಷಕರು ಬದ್ಧತೆ, ಶ್ರದ್ಧೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಪೋಷಕರಲ್ಲಿನ ಖಾಸಗಿ ಶಾಲಾ ವ್ಯಾಮೋಹ ಹೋಗಲಾಡಿಸಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರತ್ನಯ್ಯ ಕಿವಿಮಾತು ಹೇಳಿದರು.

ತಾಲ್ಲೂಕಿನ ನರಸಾಪುರದಲ್ಲಿ ಶುಕ್ರವಾರ ನಡೆದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಡಿ.ವಿ.ವಿಜಯಕುಮಾರ್‌ರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ‘ಈ ಬಾರಿ ಜಿಲ್ಲೆಯ 26 ಸರ್ಕಾರಿ ಪ್ರೌಢ ಶಾಲೆಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಬಂದಿದೆ. ಸರ್ಕಾರಿ ಶಾಲೆಗಳು ಗುಣಮಟ್ಟದಲ್ಲೂ ಮುಂದಿವೆ. ಇದಕ್ಕೆ ಶಿಕ್ಷಕರ ಪರಿಶ್ರಮವೇ ಕಾರಣ’ ಎಂದರು.

‘ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುವುದು ಅದೃಷ್ಟ. ಇಲ್ಲಿ ನಿರ್ವಹಿಸುವ ಕರ್ತವ್ಯವು ನಿವೃತ್ತಿ ನಂತರವೂ ನೆಮ್ಮದಿಯ ಜೀವನದ ಜತೆಗೆ ಇಡೀ ಸಮಾಜವೇ ಗುರುತಿಸುವಂತೆ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಂದ ಪೋಷಕರು ದೂರವಾಗುತ್ತಿದ್ದಾರೆ. ಖಾಸಗಿ ಶಾಲಾ ವ್ಯಾಮೋಹ ಹೆಚ್ಚು ಅಪಾಯಕಾರಿ. ಇದು ಸಮಾನ ಶಿಕ್ಷಣಕ್ಕೆ ಹೊಡೆತ ನೀಡುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಶಿಕ್ಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ ಎಂಬ ಆರೋಪವಿದೆ. ಬಡವರ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಎನ್ನುತ್ತಾರೆ. ಇದನ್ನೇ ಸವಾಲಾಗಿ ಸ್ವೀಕರಿಸಿ ಗುಣಮಟ್ಟದ ಶಿಕ್ಷಣ ನೀಡಿ, ಪ್ರತಿ ಸರ್ಕಾರಿ ಶಾಲೆಯಲ್ಲೂ ಸಾಧಕರನ್ನು ಬೆಳಕಿಗೆ ತನ್ನಿ’ ಎಂದು ಸಲಹೆ ನೀಡಿದರು.

‘ಸರ್ಕಾರಿ ಶಾಲೆಗಳನ್ನು ಉಳಿಸಲು ಶಿಕ್ಷಕರು ಹೆಚ್ಚಿನ ಬದ್ಧತೆಯಿಂದ ಕೆಲಸ ಮಾಡಬೇಕು. ಪೋಷಕರಿಗೆ ಮತ್ತು ಮಕ್ಕಳಿಗೆ ಶಾಲೆ ಆಕರ್ಷಣೀಯವಾಗುವಂತೆ ಮಾಡಬೇಕು. ದಾನಿಗಳ ನೆರವು ಪಡೆದು ಮೂಲಸೌಕರ್ಯ ವೃದ್ಧಿಗೆ ಶ್ರಮಿಸಬೇಕು’ ಎಂದು ಸೂಚಿಸಿದರು.

ಹೆಚ್ಚಿನ ಮನ್ನಣೆ: ‘ಸಮಾಜದ ಎಲ್ಲಾ ಇಲಾಖೆ, ವರ್ಗದ ಸೇವೆಗಿಂತ ಶಿಕ್ಷಕರ ಸೇವೆಗೆ ಹೆಚ್ಚಿನ ಮನ್ನಣೆ ಹಾಗೂ ಮಹತ್ವವಿದೆ, ಶಿಕ್ಷಕರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ದಾರಿ ತೋರಿ ನಿವೃತ್ತಿಯಾದರೆ ಜೀವನವಿಡೀ ಶಿಷ್ಯರು ಗುರುತಿಸಿ ಗೌರವಿಸುತ್ತಾರೆ. ಈ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ನನ್ನ ಸುದೀರ್ಘ ಸೇವೆಯಲ್ಲಿ ಅನೇಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ದಾರಿ ತೋರಿದ ಆತ್ಮತೃಪ್ತಿ ಇದೆ’ ಎಂದು ನಿವೃತ್ತ ಮುಖ್ಯಶಿಕ್ಷಕ ವಿಜಯಕುಮಾರ್ ಹೇಳಿದರು.

ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್, ಶಿಕ್ಷಣ ಸಂಯೋಜಕರಾದ ಆರ್.ಶ್ರೀನಿವಾಸನ್, ರಾಘವೇಂದ್ರ, ಬೈರೆಡ್ಡಿ, ವೆಂಕಟಾಚಲಪತಿ, ಸಿಆರ್‌ಪಿಗಳಾದ ಗೋವಿಂದು, ಮಂಜುನಾಥರೆಡ್ಡಿ ಪಾಲ್ಗೊಂಡಿದ್ದರು.

Post Comments (+)