ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವದಂತಿಗೆ ಕಿವಿಗೋಡದೆ ಲಸಿಕೆ ಹಾಕಿಸಿ

Last Updated 25 ಅಕ್ಟೋಬರ್ 2019, 12:19 IST
ಅಕ್ಷರ ಗಾತ್ರ

ಕೋಲಾರ: ‘ರಾಸುಗಳಿಗೆ ಕಾಲುಬಾಯಿ ನಿಯಂತ್ರಣ ಲಸಿಕೆ ಹಾಕಿಸುವುದರಿಂದ ಯಾವುದೇ ರೀತಿ ಅಡ್ಡ ಪರಿಣಾಮ ಬೀರುವುದಿಲ್ಲ’ ಎಂದು ಕ್ಯಾಲನೂರು ಪಶುವೈದ್ಯಾಧಿಕಾರಿ ಡಾ.ವಿನಯ್ ತಿಳಿಸಿದರು.

ತಾಲ್ಲೂಕಿನ ಕ್ಯಾಲನೂರು ಗ್ರಾಮದಲ್ಲಿ 16ನೇ ಸುತ್ತಿನ ಕಾಲು ಬಾಯಿ ಜ್ವರ ಲಸಿಕೆ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿ, ‘ಲಸಿಕೆ ಹಾಕಿಸಿದರೆ ರಾಸುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಕುರಿತು ಕೆಲ ವ್ಯಕ್ತಿಗಳು ವದಂತಿಗಳನ್ನು ಹಬ್ಬಿಸುತ್ತಿದ್ದು, ಇದು ಯಾವುದಕ್ಕೂ ಕಿವಿಗೋಡಬಾರದು’ ಎಂದು ಸಲಹೆ ನೀಡಿದರು.

‘ಕಾಲು ಬಾಯಿ ಜ್ವರ ರಾಸುಗಳಿಗೆ ಅತ್ಯಂತ ಮಾರಕವಾಗಿದೆ. ಲಸಿಕೆ ಹಾಕಿಸಿದರೆ ಎರಡು ದಿನ ಹಾಲಿನ ಇಳುವರಿ ಕಡಿಮೆಯಾಗಬಹುದು. ಆದರೆ ಆರೋಗ್ಯದ ಮೇಲೆ ರೀತಿ ಪರಿಣಾಮ ಬೀರುವುದಿಲ್ಲ. ಇದರ ನಿಯಂತ್ರಣ ಅಗತ್ಯವಾಗಿದ್ದು, ರೈತರು ಪ್ರತಿ ರಾಸಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು, ಯಾವುದೇ ಮೂಢನಂಬಿಕೆಗೆ ಒಳಗಾಗಬಾರದು’ ಎಂದು ಸಲಹೆ ನೀಡಿದರು.

ಪಶು ವೈದ್ಯಾಧಿಕಾರಿ ಡಾ.ಎಸ್.ವಿ.ಶ್ರೀನಿವಾಸಗೌಡ ಮಾತನಾಡಿ, ‘ಬಯಲು ಸೀಮೆ ರೈತರು ಆರ್ಥಿಕವಾಗಿ ಸಬಲರಾಗಲು ಹೈನೋದ್ಯಮ ಪೂರಕವಾಗಿದೆ. ಈ ಉದ್ಯಮಕ್ಕೆ ಯಾವುದೇ ತೊಂದರೆಯಾದರೆ ಜಿಲ್ಲೆಯ ಜನತೆ ಸಂಕಷ್ಟಕ್ಕೀಡಾಗುತ್ತಾರೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 10 ಲಕ್ಷ ಲೀಟರಿಗೂ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ, ರಾಜ್ಯದಲ್ಲೇ ಹಾಲು ಸಂಗ್ರಹಣೆಯಲ್ಲಿ ಕೋಲಾರ ದ್ವಿತೀಯ ಸ್ಥಾನದಲ್ಲಿದೆ. ಈ ಉದ್ಯಮವೇ ಇಲ್ಲಿನ ಬಡಕುಟುಂಬಗಳ ಜೀವಾಳವಾಗಿದೆ’ ಎಂದರು.‘ಪಶುವೈದ್ಯಕೀಯ ಇಲಾಖೆಯಿಂದ ಜಿಲ್ಲಾದ್ಯಂತ ಕಾಲುಬಾಯಿ ಜ್ವರದ 16ನೇ ಸುತ್ತಿನ ಲಸಿಕಾ ಕಾರ್ಯ ನಡೆಸುತ್ತಿದೆ, ಲಸಿಕಾ ಅಭಿಯಾನವನ್ನು ಆಂದೋಲನದ ಮಾದರಿಯಲ್ಲಿ ಆರಂಭಿಸಿದ್ದು, ಶೀಘ್ರ ಎಲ್ಲಾ ರಾಸುಗಳಿಗೂ ಲಸಿಕೆ ಹಾಕಲಾಗುವುದು’ ಎಂದು ಹೇಳಿದರು.

ಪಶು ವೈದ್ಯರಾದ ಡಾ.ಕೆ.ಎನ್.ಮಂಜುನಾಥರೆಡ್ಡಿ, ಡಾ.ಪ್ರಭಾಕರ್, ಡಾ.ನಿತಿನ್, ಡಾ.ಚಂದ್ರಶೇಖರರೆಡ್ಡಿ, ಡಾ.ಕೆ.ಎಂ.ದೀಪ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT