ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂನಲ್ಲಿ ಆಡಳಿತ ಹಾದಿ ತಪ್ಪುತ್ತಿದೆ

ತಾ.ಪಂ ಅಧ್ಯಕ್ಷ ಎಂ.ಆಂಜಿನಪ್ಪ ವಿಷಾದ
Last Updated 8 ಆಗಸ್ಟ್ 2019, 13:51 IST
ಅಕ್ಷರ ಗಾತ್ರ

ಕೋಲಾರ: ‘ಗ್ರಾಮ ಪಂಚಾಯಿತಿಗಳಲ್ಲಿ ಆಡಳಿತ ಹಾದಿ ತಪ್ಪುತ್ತಿದ್ದು, ತಾಲ್ಲುಕು ಮಟ್ಟದ ಅಧಿಕಾರಿಗಳು ಅದನ್ನು ಸರಿದಾರಿಗೆ ತರುವ ಪ್ರಯತ್ನಕ್ಕೆ ಮುಂದಾಗಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಸೂಚಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಜನಪ್ರತಿನಿಧಿಗಳು, ಅಧಿಕಾರಿಗಳು ಜೋಡೆತ್ತುಗಳ ಮಾದರಿಯಲ್ಲಿ ಕೆಲಸ ಮಾಡಬೇಕು. ಜವಾಬ್ದಾರಿ ಮರೆತರೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ’ ಎಂದರು.

‘ಮಳೆಯ ಕೊರತೆಯಿಂದಾಗಿ ಬಿತ್ತನೆ ಕಾರ್ಯ ಸ್ಥಗಿತಗೊಂಡಿದೆ. ಮಳೆಯ ಅಭಾವದಿಂದಾಗಿ ಕೃಷಿ ಇಲಾಖೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಾಧನೆ ಆಗಿರುವುದಿಲ್ಲ ಇಷ್ಟು ಹೊತ್ತಿಗೆ ರಾಗಿ, ಕಡಲೆ, ಅವರೆ, ತೊಗರಿ ಬಿತ್ತನೆ ಆಗಬೇಕಿತ್ತು, ಪ್ರತಿ ವರ್ಷವೂ ಇದೇ ಪರಿಸ್ಥಿತಿಯಾದರೆ ಜನರ ಗತಿ ಏನು’ ಎಂದು ಆತಂಕ ವ್ಯಕ್ತಪಡಿಸಿದರು.

‘ಉತ್ತರ ಕರ್ನಾಟಕ ಮತ್ತು ಮಲೆ ನಾಡಿನಲ್ಲಿ ನಿರಂತರವಾಗಿ ಮಳೆ ಅಗುತ್ತಿದೆ. ಆದರೆ ನಮ್ಮ ಕೋಲಾರದಂತಹ ಬಯಲು ಸೀಮೆ ಪ್ರದೇಶದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಕೊಳವೆ ಬಾವಿಗಳಲ್ಲಿಯೂ ನೀರಿನ ಪ್ರಮಾಣ ಇಳಿಕೆಯಾಗಿದೆ, ಸಮಸ್ಯೆ ತೀವ್ರಗೊಳ್ಳುವ ಮೊದಲೇ ಎಂಜನಿಯರ್‌ಗಳು ಪರ್ಯಾಯವ್ಯಸ್ಥೆ ಕಲ್ಪಿಸಬೇಕು’ ಎಂದು ಸೂಚಿಸಿದರು.

‘ಕೆ.ಸಿ.ವ್ಯಾಲಿ ಯೋಜನೆ ಮೂಲಕ 30 ಕೆರೆಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಜಿಲ್ಲೆಗೆ ಅನುಕೂಲಕರವಾಗಿದ್ದು ಬರಗಾಲದಲ್ಲಿ ರೈತರಲ್ಲಿ ನಿರೀಕ್ಷೆ ಮೂಡಿಸಿದೆ. ನೀರು ತುಂಬಿರುವ ಕೆರೆಗಳ ಭಾಗದಲ್ಲಿ ಹಸಿರು ಮೇವು ಬೆಳೆಸಲು ಪಶು ಇಲಾಖೆಯಿಂದ ರೈತರಿಗೆ ಮಿನಿ ಕಿಟ್ ಕಲ್ಪಿಸಬೇಕು’ ಎಂದು ಹೇಳಿದರು.

‘ತಾಲೂಕಿನಲ್ಲಿ 7 ಇಂಗ್ಲಿಷ್ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗಿದೆ ಮುಂದೆ ಇದರ ಪ್ರಮಾಣ ಇನ್ನಷ್ಟು ಜಾಸ್ತಿಯಾಗಬೇಕು. ಅಲ್ಲದೆ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು. ಉರ್ದು ಶಾಲೆಗಳಲ್ಲಿ ಮಕ್ಕಳು ಕನ್ನಡ ಕಲಿಕೆಯಲ್ಲಿ ಹಿಂದೆ ಇದ್ದಾರೆ. ಇದು ಸುಧಾರಣೆಯಾಗಬೇಕು’ ಎಂದರು.

‘ತಾಲೂಕಿನಲ್ಲಿ ರೋಟಾ ಲಸಿಕೆ ಅಭಿಯಾನ ಶೇ.100ರಷ್ಟು ಸಾಧನೆಯಾಗಬೇಕು. ಕಾರ್ಯಕ್ರಮಕ್ಕೂ ಮುನ್ನ ಅಧಿಕಾರಿಗಳು ಪೋಷಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದು, ವದಂತಿಗಳಿಗೆ ಅವಕಾಶ ಕೊಡದೆ ಮಕ್ಕಳು ಅನಾರೋಗ್ಯದ ಮುನ್ಸೂಚನೆ ಬರುತ್ತಿದ್ದಂತೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಬೇಕು’ ಎಂದು ಆರೋಗ್ಯಾಧಿಕಾರಿ ಡಾ.ಪ್ರೇಮಾ ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮೀ, ಕಾರ್ಯನಿರ್ವಹಣಾಧಿಕಾರಿ ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT