ಶನಿವಾರ, ಜನವರಿ 18, 2020
21 °C
ವಿದ್ಯಾರ್ಥಿನಿಲಯಗಳ ಪರಿಸ್ಥಿತಿ ಶೋಚನೀಯ: ದಸಂಸ ಸದಸ್ಯರ ಅಸಮಾಧಾನ

ಸರ್ಕಾರಿ ಹಾಸ್ಟೆಲ್‌: ಮೂಲಸೌಕರ್ಯಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯ ಸರ್ಕಾರಿ ವಿದ್ಯಾರ್ಥಿನಿಲಯಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಇಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಅವರಿಗೆ ಮನವಿ ಸಲ್ಲಿಸಿದರು.

‘ಸರ್ಕಾರಿ ವಿದ್ಯಾರ್ಥಿನಿಲಯಗಳ ಪರಿಸ್ಥಿತಿ ಶೋಚನೀಯವಾಗಿದೆ. ಹಾಸ್ಟೆಲ್‌ಗಳಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ. ಜತೆಗೆ ನೀರಿನ ಸಮಸ್ಯೆ ಗಂಭೀರವಾಗಿದೆ. ಶೌಚಾಲಯಗಳು ಶಿಥಿಲಗೊಂಡಿದ್ದು, ಸ್ವಚ್ಛತೆ ಇಲ್ಲವಾಗಿದೆ’ ಎಂದು ಸಮಿತಿ ಸದಸ್ಯರು ದೂರಿದರು.

‘ಬಹುತೇಕ ಹಾಸ್ಟೆಲ್‌ಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ವಿದ್ಯಾರ್ಥಿಗಳು ಜೀವ ಭಯದಲ್ಲಿ ದಿನ ದೂಡುವಂತಾಗಿದೆ. ಹಾಸ್ಟೆಲ್‌ಗಳಲ್ಲಿ ವಾರ್ಡನ್‌, ಅಡುಗೆ ಸಿಬ್ಬಂದಿ ಹುದ್ದೆಗಳು ಖಾಲಿಯಿವೆ. ಹುಳು ಬಿದ್ದ ತರಕಾರಿ ಮತ್ತು ಕಳಪೆ ಆಹಾರ ಪದಾರ್ಥಗಳನ್ನು ಬಳಸಿ ಅಡುಗೆ ಮಾಡಲಾಗುತ್ತಿದೆ’ ಎಂದು ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಸಿ.ನಾಗೇಶ್ ಆರೋಪಿಸಿದರು.

‘ಹಾಸ್ಟೆಲ್‌ಗೆ ಮಂಜೂರಾದ ಆಹಾರ ಪದಾರ್ಥಗಳನ್ನು ವಾರ್ಡನ್‌ ಹಾಗೂ ಅಡುಗೆ ಸಿಬ್ಬಂದಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ ಸಾಕಷ್ಟು ಹಾಸ್ಟೆಲ್‌ಗಳಲ್ಲಿ ಕೊಠಡಿಗಳ ಸಂಖ್ಯೆ ತುಂಬಾ ಕಡಿಮೆಯಿದೆ. ಹೀಗಾಗಿ ಒಂದೊಂದು ಕೊಠಡಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ಇರಿಸಲಾಗಿದೆ. ಹಲವು ಹಾಸ್ಟೆಲ್‌ಗಳು ಮಳೆಗೆ ಸೋರುತ್ತಿವೆ’ ಎಂದು ಹೇಳಿದರು.

ವಿದ್ಯಾಭ್ಯಾಸಕ್ಕೆ ಸಮಸ್ಯೆ: ‘ಹಾಸ್ಟೆಲ್‌ ಗ್ರಂಥಾಲಯದಲ್ಲಿನ ದಿನಪತ್ರಿಕೆ ಮತ್ತು ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಕೊಡುತ್ತಿಲ್ಲ. ಮೂಲಸೌಕರ್ಯ ಸಮಸ್ಯೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತಿದೆ. ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಮಕ್ಕಳು ಪ್ರಶ್ನೆ ಮಾಡಿದರೆ ಹಾಸ್ಟೆಲ್‌ ಮೇಲ್ವಿಚಾರಕರು ಬೆದರಿಕೆ ಹಾಕುತ್ತಾರೆ’ ಎಂದು ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ಮೂಲಸೌಕರ್ಯ ಸಮಸ್ಯೆಯಿಂದ ಮಕ್ಕಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹಾಸ್ಟೆಲ್‌ ದುರಸ್ತಿಗೆ ಬಿಡುಗಡೆಯಾದ ಹಣವನ್ನು ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಅಕ್ರಮ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು’ ಎಂದು ಒತ್ತಾಯಿಸಿದರು.

‘ವಿದ್ಯಾರ್ಥಿನಿಲಯಗಳ ಉನ್ನತಿಗೆ ಸಹಕರಿಸಬೇಕು. ಹಾಸ್ಟೆಲ್‌ಗಳಲ್ಲಿನ ಮೂಲಸೌಕರ್ಯ ಸಮಸ್ಯೆ ಪರಿಹರಿಸಬೇಕು. ವಾರ್ಡನ್‌ ಮತ್ತು ಅಡುಗೆ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಆಹಾರದ ಗುಣಮಟ್ಟ ಸುಧಾರಿಸಬೇಕು. ಮಹಿಳಾ ವಿದ್ಯಾರ್ಥಿನಿಲಯಗಳಿಗೆ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು’ ಎಂದು ಮನವಿ ಮಾಡಿದರು.

ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಎನ್.ಮೂರ್ತಿ, ಸದಸ್ಯರಾದ ಹನುಮಪ್ಪ, ಮುನಿಆಂಜಿನಪ್ಪ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು