ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಮಾಫಿಯಾ ಗೋಮಾಳ ಮೇಯುತ್ತಿದೆ

ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಶಾಸಕ ಶ್ರೀನಿವಾಸಗೌಡ ಕಿಡಿ
Last Updated 8 ಸೆಪ್ಟೆಂಬರ್ 2020, 16:24 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಸಾಕಷ್ಟು ಸರ್ಕಾರಿ ಗೋಮಾಳಗಳು ಒತ್ತುವರಿಯಾಗಿವೆ. ಗೋವುಗಳು ಮೇಯಲು ಮೀಸಲಾಗಿದ್ದ ಜಾಗವನ್ನು ಭೂ ಮಾಫಿಯಾದವರು ಮೇಯುತ್ತಿದ್ದಾರೆ. ಕಂದಾಯ ಅಧಿಕಾರಿಗಳೇ ಈ ಮಾಫಿಯಾ ಜತೆ ಕೈಜೋಡಿಸಿದ್ದಾರೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಿಡಿಕಾರಿದರು.

ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿ ಈಗ ಗೋಮಾಳಗಳೇ ಇಲ್ಲ. ಗುಂಡು ತೋಪುಗಳು ಮಾಯವಾಗಿವೆ. ಈ ಸಂಬಂಧ ಸಾಕಷ್ಟು ದೂರು ಬರುತ್ತಿವೆ. ಜಿಲ್ಲಾಡಳಿತ ಭೂ ಮಾಫಿಯಾಕ್ಕೆ ಕಡಿವಾಣ ಹಾಕಬೇಕು’ ಎಂದರು.

‘ಈ ಹಿಂದೆ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಅಕ್ರಮ ಸಕ್ರಮ ಕಾಯ್ದೆ ಜಾರಿಗೆ ತಂದರು. ಇದರಿಂದ ಶೇ 80ರಷ್ಟು ಬಡ ಜನರಿಗೆ ಭೂಮಿ ಸಿಗುವಂತಾಯಿತು. ಆಗ ದನಕರು ಮೇಯಿಸಲು ಪ್ರತಿ ಹಳ್ಳಿಯಲ್ಲಿ ನೂರಾರು ಎಕರೆ ಭೂಮಿ ಇತ್ತು. ಅರಸು ಅವರು ಕಂಡಿದ್ದ ಕನಸು ನನಸಾಗಿತ್ತು’ ಎಂದು ಅಭಿಪ್ರಾಯಪಟ್ಟರು.

‘ಗ್ರಾಮೀಣ ಭಾಗದ ರೈತರಿಗೆ ತಾಲ್ಲೂಕು ಕಚೇರಿಯಲ್ಲಿ ಬಹಳಷ್ಟು ಕೆಲಸ ಕಾರ್ಯ ಇರುತ್ತದೆ. ಅಧಿಕಾರಿಗಳು ರೈತರನ್ನು ಕಚೇರಿಗೆ ಆಲೆದಾಡಿಸದೆ ನಿಗಧಿತ ಅವಧಿಯೊಳಗೆ ಅವರ ಕೆಲಸ ಮಾಡಿಕೊಡಬೇಕು. ಈ ಉದ್ದೇಶಕ್ಕಾಗಿ ಪ್ರತಿ ಮಂಗಳವಾರ ಕುಂದು ಕೊರತೆ ಸಭೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ಕೋಲಾರ ತಾಲ್ಲೂಕಿನ 7 ಹೋಬಳಿಗಳ ರೈತರ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಕಾಳಜಿ ವಹಿಸಬೇಕು. ದರಖಾಸ್ತು ಸಮಿತಿ ಸೇರಿದಂತೆ ಹಲವು ಸಮಿತಿ ರಚಿಸಲಾಗಿದೆ. ಸಮಿತಿ ಸಭೆಗಳು ಕೋವಿಡ್‌–19 ಆತಂಕದ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಸ್ಥಗಿತಗೊಂಡಿದ್ದು, ಮುಂದಿನ ದಿನಗಳಲ್ಲಿ ಸಭೆ ನಡೆಸಲಾಗುವುದು’ ಎಂದು ವಿವರಿಸಿದರು.

ಕಡತ ವಿಲೇವಾರಿ: ‘ಪಿ ನಂಬರ್‌ಗಳಿಂದ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ ಎಂದು ನೋವಿನಿಂದ ಹೇಳುತ್ತಿದ್ದೇನೆ. ನಾನೂ ರೈತನಾಗಿ ಈ ಕಷ್ಟ ಅನುಭವಿಸಿದ್ದೇನೆ. ಮುಂದಿನ 6 ತಿಂಗಳಲ್ಲಿ ಯಾವುದೇ ಪಿ ನಂಬರ್ ಕಡತಗಳು ಬಾಕಿ ಉಳಿಯದಂತೆ ಎಲ್ಲವನ್ನೂ ವಿಲೇವಾರಿ ಮಾಡಬೇಕು’ ಎಂದು ತಹಶೀಲ್ದಾರ್‌ ಮತ್ತು ಕಂದಾಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

‘ಪಿ ನಂಬರ್‌ ಸಮಸ್ಯೆ ಸಂಬಂಧ ತಾಲ್ಲೂಕಿನ 7 ಹೋಬಳಿ ಅಧಿಕಾರಿಗಳ ಸಭೆ ಸಾಧಕ ಬಾಧಕಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಸಲಹೆ ಸೂಚನೆ ನೀಡುತ್ತೇನೆ. ಸರ್ವೆ ಕಾರ್ಯ ವಿಳಂಬವಾಗುತ್ತಿದೆ. ತಾಲ್ಲೂಕಿಗೆ ಒಬ್ಬರೇ ಸರ್ವೆಯರ್ ಇರುವುದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಸಿಬ್ಬಂದಿ ಕೊರತೆ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ’ ಎಂದು ಹೇಳಿದರು.

ತಹಶೀಲ್ದಾರ್‌ ಶೋಭಿತಾ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT