ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಚುನಾವಣೆ: ಮಂಗಳವಾರ ಮತದಾನ

ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ
Last Updated 21 ಡಿಸೆಂಬರ್ 2020, 14:47 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ 3 ತಾಲ್ಲೂಕುಗಳ ವ್ಯಾಪ್ತಿಯ 85 ಗ್ರಾಮ ಪಂಚಾಯಿತಿಗಳಿಗೆ ಮೊದಲ ಹಂತದಲ್ಲಿ ಮಂಗಳವಾರ (ಡಿ.22) ಚುನಾವಣೆ ನಡೆಯಲಿದ್ದು, ಜಿಲ್ಲಾಡಳಿತವು ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ ಮಾಡಿದೆ.

ಒಟ್ಟಾರೆ 85 ಗ್ರಾ.ಪಂಗಳಲ್ಲಿ 1,520 ಸದಸ್ಯ ಸ್ಥಾನಗಳಿದ್ದು, ಈ ಪೈಕಿ 124 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಉಳಿದ 1,402 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅಂತಿಮವಾಗಿ 3,555 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಮತದಾರರು ಮಂಗಳವಾರ ಅಭ್ಯರ್ಥಿಗಳ ಸೋಲು ಗೆಲುವು ನಿರ್ಧರಿಸಲಿದ್ದಾರೆ.

ಮನೆ ಮನೆ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆ ಬಿದ್ದಿದ್ದು, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಭ್ಯರ್ಥಿಗಳು ಮತದಾರರ ಓಲೈಕೆಗೆ ಕಸರತ್ತು ಮುಂದುವರಿಸಿದ್ದು, ಹಣ, ಬೆಳ್ಳಿ ದೀಪ, ಕುಕ್ಕರ್‌, ಕೈಗಡಿಯಾರ, ಸೀರೆ ಸೇರಿದಂತೆ ಉಡುಗೊರೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಮೂರೂ ತಾಲ್ಲೂಕುಗಳಿಂದ ಒಟ್ಟಾರೆ 845 ಮತಗಟ್ಟೆ ಸ್ಥಾಪಿಸಲಾಗಿದ್ದು, 127 ಸೂಕ್ಷ್ಮ, 85 ಅತಿ ಸೂಕ್ಷ್ಮ ಹಾಗೂ 633 ಸಾಮಾನ್ಯ ಮತಗಟ್ಟೆಗಳಾಗಿವೆ. ಮತದಾನಕ್ಕೆ ಬ್ಯಾಲೆಟ್‌ ಪೇಪರ್‌ ಮತ್ತು ಮತಪೆಟ್ಟಿಗೆ ಬಳಸಲಾಗುತ್ತಿದೆ. 3,368 ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ಶೇ 10ರಷ್ಟು ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ.

ಪ್ರತಿ ಮತಗಟ್ಟೆಗೆ ಪೊಲೀಸರು, ಗೃಹರಕ್ಷಕ ದಳ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರನ್ನು ನೇಮಿಸಲಾಗಿದೆ. ಸಿಬ್ಬಂದಿಗೆ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜತೆಗೆ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಿಸಲಾಗುತ್ತದೆ.

ಮತದಾರರೆಷ್ಟು?: ಮೂರೂ ತಾಲ್ಲೂಕುಗಳಿಂದ ಒಟ್ಟಾರೆ 4,75,310 ಮತದಾರರಿದ್ದಾರೆ. ಕೋಲಾರ ತಾಲ್ಲೂಕು ವ್ಯಾಪ್ತಿಯಲ್ಲಿ 89,188 ಮಂದಿ ಪುರುಷ, 88,631 ಮಂದಿ ಮಹಿಳೆಯರು ಹಾಗೂ 19 ಇತರೆ ಮತದಾರರು ಸೇರಿದಂತೆ 1,77,838 ಮತದಾರರಿದ್ದಾರೆ. ಮಾಲೂರು ತಾಲ್ಲೂಕು ವ್ಯಾಪ್ತಿಯಲ್ಲಿ 78,205 ಪುರುಷ, 76,839 ಮಹಿಳೆ ಮತ್ತು 5 ಇತರೆ ಮತದಾರರು ಸೇರಿದಂತೆ 1,55,049 ಮತದಾರರಿದ್ದಾರೆ. ಶ್ರೀನಿವಾಸಪುರ ತಾಲ್ಲೂಕು ವ್ಯಾಪ್ತಿಯಲ್ಲಿ 71,294 ಪುರುಷ, 71,124 ಮಹಿಳೆ ಹಾಗೂ 5 ಮಂದಿ ಇತರೆ ಮತದಾರರು ಸೇರಿದಂತೆ 1,42,423 ಮತದಾರರಿದ್ದಾರೆ.

ಮತಗಟ್ಟೆಗೆ ಸಿಬ್ಬಂದಿ: ಮತಗಟ್ಟೆ ಸಿಬ್ಬಂದಿಯು ಆಯಾ ತಾಲ್ಲೂಕು ವ್ಯಾಪ್ತಿಯ ಮಸ್ಟರಿಂಗ್‌ ಕೇಂದ್ರಗಳಲ್ಲಿ ಸೋಮವಾರ ಮತಪೆಟ್ಟಿಗೆ ಮತ್ತು ಬ್ಯಾಲೆಟ್‌ ಪೇಪರ್‌ ಪಡೆದು ಪೊಲೀಸ್‌ ಭದ್ರತೆಯಲ್ಲಿ ಮತಗಟ್ಟೆಗಳಿಗೆ ತಲುಪಿದರು. ಮತಗಟ್ಟೆ ಸಿಬ್ಬಂದಿಗೆ ಮಸ್ಟರಿಂಗ್‌ ಕೇಂದ್ರಗಳಲ್ಲಿ ಮಧ್ಯಾಹ್ನದ ಊಟಕ್ಕೆ ಅನ್ನ ಸಾಂಬರ್‌, ವಾಂಗಿ ಬಾತ್‌, ಪಲ್ಯ, ಪಾಯಸ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.

ಮತಗಟ್ಟೆ ಅಧಿಕಾರಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯಕೀಯ ಸೇವೆ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಔಷಧಗಳು, ಓಆರ್‍ಎಸ್ ಪೊಟ್ಟಣ ಮತ್ತು ಆಯಕಟ್ಟಿನ ಜಾಗದಲ್ಲಿ ಆಂಬುಲೆನ್ಸ್‌ ಸೇವೆ ಕಲ್ಪಿಸಲಾಗಿದೆ.

ಪೊಲೀಸ್‌ ಕಟ್ಟೆಚ್ಚರ: ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಚುನಾವಣಾ ನೀತಿಸಂಹಿತೆ ತಂಡದ ಅಧಿಕಾರಿಗಳು ಹಣ, ಮದ್ಯ ಹಾಗೂ ಉಡುಗೊರೆ ಹಂಚಿಕೆ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಜತೆಗೆ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಚುನಾವಣಾ ಅಕ್ರಮಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ.

630 ಪೊಲೀಸ್‌ ಸಿಬ್ಬಂದಿ, 550 ಮಂದಿ ಗೃಹರಕ್ಷಕ ದಳ ಸಿಬ್ಬಂದಿ, ರಾಜ್ಯ ಮೀಸಲು ಪೊಲೀಸ್‌ ಪಡೆಯ (ಕೆಎಸ್‌ಆರ್‌ಪಿ) 2 ತುಕಡಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್‌) 2 ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಶಸ್ತ್ರಾಸ್ತ್ರ ಸಾಗಣೆ, ಪ್ರದರ್ಶನ ಹಾಗೂ ಬಳಕೆ ನಿರ್ಬಂಧಿಸಲಾಗಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳು, ಮಾದರಿ ಚುನಾವಣಾ ನೀತಿಸಂಹಿತೆ ತಂಡದ ಅಧಿಕಾರಿಗಳು ಹಾಗೂ ಚುನಾವಣಾ ವೀಕ್ಷಕರು ನಿಯಮಿತವಾಗಿ ಗಸ್ತು ನಡೆಸಲಿದ್ದಾರೆ.

ಅಂಕಿ ಅಂಶ
-85 ಗ್ರಾ.ಪಂಗಳಿಗೆ ಚುನಾವಣೆ
-3,555 ಅಭ್ಯರ್ಥಿಗಳು ಕಣದಲ್ಲಿ
-845 ಮತಗಟ್ಟೆ ಸ್ಥಾಪನೆ
-4,75,310 ಮತದಾರರು
-3,368 ಸಿಬ್ಬಂದಿ ನಿಯೋಜನೆ
-630 ಪೊಲೀಸ್‌ ಸಿಬ್ಬಂದಿ ಬಳಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT