ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪೇಟೆ: ಗ್ರಾಮ ಪಂಚಾಯಿತಿ ಅವ್ಯವಹಾರ; ತನಿಖೆಗೆ ಆಗ್ರಹ

ದಲಿತ ರೈತ ಸೇನೆಯಿಂದ ಮನವಿ ಸಲ್ಲಿಕೆ
Last Updated 10 ಸೆಪ್ಟೆಂಬರ್ 2021, 5:24 IST
ಅಕ್ಷರ ಗಾತ್ರ

ಬಂಗಾರಪೇಟೆ: ಬಡವರ ಕಲ್ಯಾಣ ಹಾಗೂ ಗ್ರಾಮಗಳ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಆದರೆ ಅನುಷ್ಠಾನಗೊಳಿಸುವಲ್ಲಿ ಪಂಚಾಯಿತಿಗಳು ವಿಫಲವಾಗಿದ್ದು, ಸಂವಿಧಾನ ಆಶಯಗಳನ್ನು ಗಾಳಿಗೆ ತೂರಲಾಗಿದೆ ಎಂದು ಕರ್ನಾಟಕ ದಲಿತ ರೈತ ಸೇನೆ ಸದಸ್ಯರು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ವೆಂಕಟೇಶಪ್ಪ ಅವರಿಗೆ ಮನವಿ ಸಲ್ಲಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಸ್ವಚ್ಛತೆ ನಿರ್ವಹಣೆಗಾಗಿ ಗ್ರಾಮ ಪಂಚಾಯಿತಿಯಿಂದ ಪ್ರತಿ ಕುಟುಂಬಕ್ಕೆ ಕಸದ ಬುಟ್ಟಿಗಳನ್ನು ನೀಡಲಾಗಿದೆ. ಆದರೆ, ಯಾವುದೇ ರೀತಿ ಕೊಟೇಷನ್ ಅಥವಾ ಟೆಂಡರ್ ಕರೆದಿಲ್ಲ. ಸಾರ್ವಜನಿಕವಾಗಿ ಪ್ರಚಾರ ಮಾಡಿಲ್ಲ. ಕೊಟೇಷನ್ ಕರೆದಂತೆ ದಾಖಲೆ ಸೃಷ್ಟಿಸಿ, ಹಣ ದುರ್ಬಳಕೆ ಮಾಡಲಾಗಿದೆ ಎಂದು ದೂರಿದರು.

₹ 1 ಲಕ್ಷಕ್ಕೆ ಮೇಲ್ಪಟ್ಟ ಖರೀದಿಗೆ ಕೆಟಿಟಿಪಿ ಕಾಯ್ದೆ ಅನ್ವಯ ಟೆಂಡರ್ ಕರೆಯುಬೇಕು ಎನ್ನುವ ನಿಯಮವಿದೆ. ಆದರೆ, ಬಂಗಾರಪೇಟೆ ಮತ್ತು ಕೆಜಿಎಫ್‌ಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ ನಿಯಮ ಉಲ್ಲಂಘಿಸಲಾಗಿದೆ. ಟೆಂಡರ್ ಇಲ್ಲದೆ ಲಕ್ಷಗಟ್ಟಲೆ ಮೌಲ್ಯದ ಕಸದ ಬುಟ್ಟಿಗಳನ್ನು ಖರೀದಿ ಮಾಡಲಾಗಿದೆ ಎಂದು ದೂರಿದರು.

ಅಲ್ಲದೇ, 15ನೇ ಹಣಕಾಸಿನ ಅನುದಾನದ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಹಿಂದಿನ ವರ್ಷದ ವಾರ್ಷಿಕ ಜಮಾಬಂದಿ ನಡೆಸದೆ ಮುಂದಿನ ವರ್ಷದ ಅನುದಾನವನ್ನು ಖರ್ಚು ಮಾಡುವಂತಿಲ್ಲ. ಆದರೆ, ಇದು ಪಾಲನೆಯಾಗುತ್ತಿಲ್ಲ ಎಂದರು.

2019ರಿಂದ 2021ರವರೆಗೆ 15ನೇ ಹಣಕಾಸು, 14ನೇ ಹಣಕಾಸಿನಡಿ ವರ್ಗ 1 ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿರಿಸುವ ಅನುದಾನದಲ್ಲಿ ಅವ್ಯವಹಾರ ನಡೆದಿದೆ. ತನಿಖೆ ನಡೆಸಿ ತಪ್ಪಿದಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕಾರ್ಯ ನಿರ್ವಹಣಾಧಿಕಾರಿ ವೆಂಕಟೇಶಪ್ಪ ಅವರ ಮೂಲಕ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು.

15 ದಿನದೊಳಗೆ ಇತ್ಯರ್ಥ ಆಗದಿದ್ದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ರಾಜ್ಯ ಘಟಕದ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್ ಎಚ್ಚರಿಕೆ ನೀಡಿದರು.

ಸಮಿತಿಯ ನಗರಾಧ್ಯಕ್ಷ ಸೇಟ್ ಕಾಂಪೌಂಡ್ ಮಾರಿ, ಜಿಲ್ಲಾ ಸಮಿತಿ ಸದಸ್ಯ ಕಾರಮಾನಹಳ್ಳಿ ಅಶೋಕ್, ಅರವಿಂದ್ ಮಾರ, ಸಚಿನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT