ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಸ್ವರಾಜ್ ಯೋಜನೆ: ಹೆಚ್ಚಿನ ಸಾಧನೆ ತೋರಿ

ಯೋಜನೆಯ ರಾಜ್ಯ ನೋಡಲ್‌ ಅಧಿಕಾರಿ ದೀಪಿಕಾ ಪೋಕರ್ಣ ಸೂಚನೆ
Last Updated 9 ಜುಲೈ 2018, 13:39 IST
ಅಕ್ಷರ ಗಾತ್ರ

ಕೋಲಾರ: ‘ಕೇಂದ್ರ ಸರ್ಕಾರದ ಗ್ರಾಮ ಸ್ವರಾಜ್ ಯೋಜನೆಯನ್ನು ಆಯ್ಧ ಗ್ರಾಮಗಳಲ್ಲಿ ಆ.15ರೊಳಗೆ ಸಮರ್ಪಕವಾಗಿ ಕಾರ್ಯಗತಗೊಳಿಸಿ ಹೆಚ್ಚಿನ ಸಾಧನೆ ತೋರಬೇಕು’ ಎಂದು ಯೋಜನೆಯ ರಾಜ್ಯ ನೋಡಲ್‌ ಅಧಿಕಾರಿ ದೀಪಿಕಾ ಪೋಕರ್ಣ ಸೂಚಿಸಿದರು.

ನಗರದಲ್ಲಿ ಸೋಮವಾರ ನಡೆದ ಗ್ರಾಮ ಸ್ವರಾಜ್ ಯೋಜನೆಯ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಗ್ರಾಮಗಳಲ್ಲಿ ಏಳು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರೆ ಮಾದರಿ ಗ್ರಾಮಗಳಾಗಿ ರೂಪಿಸಬಹುದು’ ಎಂದು ಅಭಿಪ್ರಾಯಪಟ್ಟರು.

‘ಯೋಜನೆಯ ಹಿರಿಯ ಅಧಿಕಾರಿಗಳು ಆಯ್ಧ ಗ್ರಾಮಗಳಿಗೆ ಭೇಟಿ ಕೊಟ್ಟು ಯೋಜನೆಯಡಿ ಸೌಕರ್ಯಗಳು ಜನರಿಗೆ ದೊರೆಯುತ್ತಿವೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ. ಫಲಾನುಭವಿಗಳಿಗೆ ಸೌಕರ್ಯ ಕಲ್ಪಿಸದೆ ನೋಡಲು ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದರೆ ಶಿಸ್ತು ಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

22 ಗ್ರಾಮ ಆಯ್ಕೆ: ‘ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ 22 ಗ್ರಾಮಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ಈಗಾಗಲೇ ಆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್.ಲತಾಕುಮಾರಿ ವಿವರಿಸಿದರು. ‘ಆ.15ರಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಯೋಜನೆ ಪ್ರಗತಿಯ ವರದಿ ವಾಚಿಸಬೇಕು. ಪ್ರತಿಯೊಬ್ಬರು ಜುಲೈ 31ರೊಳಗೆ ಸಮರ್ಪಕ ಮಾಹಿತಿ ನೀಡಬೇಕು. ಜತೆಗೆ ವೆಬ್‌ಸೈಟ್‌ನಲ್ಲಿ ಮಾಹಿತಿ ದಾಖಲಿಸಬೇಕು’ ಎಂದು ಸೂಚಿಸಿದರು.

ಅಡುಗೆ ಅನಿಲ ಸೇವೆ: ‘ಈಗಾಗಲೇ ಫಲಾನುಭವಿಗಳನ್ನು ಗುರುತಿಸಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸೇವೆ ಕಲ್ಪಿಸಲಾಗುತ್ತಿದೆ. ಜಿಲ್ಲೆಯ 26,944 ಫಲಾನುಭವಿಗಳ ಪೈಕಿ 17,000 ಮಂದಿಗೆ ಗ್ಯಾಸ್ ಸಂಪರ್ಕ ನೀಡಲಾಗಿದೆ. ಏಜೆನ್ಸಿಯವರು ಫಲಾನುಭವಿಗಳಿಗೆ ಸಾಮಗ್ರಿ ವಿತರಿಸದೆ ವಿಳಂಬ ಮಾಡುತ್ತಿದ್ದು, ಅವರಿಗೆ ಎಚ್ಚರಿಕೆ ನೀಡಲಾಗಿದೆ’ ಎಂದರು.

‘ಪ್ರಧಾನಮಂತ್ರಿ ಉಜ್ವಲ ಯೋಜನೆ ಜಾರಿಯಾಗಿ ಹಲವು ತಿಂಗಳು ಕಳೆದಿವೆ. ಆದರೆ, ಈವರೆಗೂ 9,944 ಮಂದಿಗೆ ಗ್ಯಾಸ್‌ ಸಂಪರ್ಕ ಕಲ್ಪಿಸಿಲ್ಲ. ಈ ಬಗ್ಗೆ ನಿಮ್ಮ ಬಳಿ ಮಾಹಿತಿ ಇಲ್ಲವೆ? ನಾಳೆ, ಸಂಜೆ ವಿತರಣೆ ಮಾಡುತ್ತೇವೆ ಎಂದು ಸಬೂಬು ಹೇಳುವುದನ್ನು ಬಿಡಿ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಾಹಿತಿ ನೀಡಿ: ‘ಪ್ರಧಾನಮಂತ್ರಿ ಜನ್‌ಧನ್ ಖಾತೆ ತೆರೆಯಲು ಬರುವವರಿಂದ ವಿಮಾ ಹಣ ಪಾವತಿ ಮಾಡಿಸಿಕೊಳ್ಳುವಂತೆ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಬೇಕು. ಜತೆಗೆ ಜನರಿಗೆ ವಿಮಾ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು’ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಶ್ರೀನಿವಾಸ್‌ರಾವ್ ಅವರಿಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶ್ರೀನಿವಾಸ್‌ರಾವ್, ‘ಸಾಕಷ್ಟು ಮಂದಿ ವಿಮಾ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಯೋಜನೆಯ 2 ವಿಮಾ ಕಂತು ಪಾವತಿಸಿದರೂ ಹಣ ಬರುತ್ತದೆ. ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆಯಡಿ 18 ವರ್ಷದಿಂದ 70 ವರ್ಷದೊಳಗಿನವರು ವರ್ಷಕ್ಕೆ ₹ 12 ಪಾವತಿಸಿದರೆ ಅಪಘಾತದ ಸಂದರ್ಭದಲ್ಲಿ ₹ 2 ಲಕ್ಷದವರೆಗೆ ಪರಿಹಾರ ಸಿಗುತ್ತದೆ. ಅದೇ ರೀತಿ ಜೀವನ್‌ಜ್ಯೋತಿ ಭಿಮಾ ಯೋಜನೆಯಡಿ 18 ವರ್ಷದಿಂದ 50 ವರ್ಷದೊಳಗಿನವರು ವರ್ಷಕ್ಕೆ ₹ 350 ಪಾವತಿಸಿದರೆ ₹ 2 ಲಕ್ಷ ಪರಿಹಾರ ದೊರೆಯುತ್ತದೆ’ ಎಂದು ವಿವರಿಸಿದರು.

‘ಯೋಜನೆಗೆ ಬ್ಯಾಂಕ್ ಪಾಸ್‌ ಪುಸ್ತಕ ಬಿಟ್ಟು ಬೇರೆ ಯಾವುದೇ ದಾಖಲೆಪತ್ರ ಕೇಳುವುದಿಲ್ಲ. ವಿಮಾ ಕಂತು ಪಾವತಿಸಿರುವ ಬಗ್ಗೆ ಪಾಸ್ ಪುಸ್ತಕದಲ್ಲಿ ವಿವರ ದಾಖಲಾಗಿರುತ್ತದೆ. ವಿಮಾದಾರರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬ ಸದಸ್ಯರಿಗೆ ಬ್ಯಾಂಕ್ ಅಧಿಕಾರಿಗಳೇ ಪರಿಹಾರ ತಲುಪಿಸುತ್ತಾರೆ’ ಎಂದು ಮಾಹಿತಿ ನೀಡಿದರು.

ಅಭಿಯಾನಕ್ಕೆ ಸಿದ್ಧತೆ: ‘ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿ ಈಗಾಗಲೇ ಎರಡು ಸುತ್ತಿನಲ್ಲಿ ವಿವಿಧ ಲಸಿಕಾ ಅಭಿಯಾನ ನಡೆಸಲಾಗಿದೆ. ಜುಲೈ 18, 20 ಮತ್ತು 21ರಂದು ಅಂತಿಮ ಸುತ್ತಿನ ಅಭಿಯಾನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್‌ ಹೇಳಿದರು.

ವಿದ್ಯುತ್ ಸಂಪರ್ಕ: ‘ಸೌಭಾಗ್ಯ (ಪ್ರಧಾನಮಂತ್ರಿ ಸಹಜ್ ಬಿಜ್ಲಿ ಹರ್‌ ಘರ್ ಯೋಜನೆ) ಫಲಾನುಭವಿಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಬಾಕಿ ಫಲಾನುಭವಿಗಳ ಮನೆಗಳಿಗೆ ಈ ತಿಂಗಳ ಅಂತ್ಯದೊಳಗೆ ವಿದ್ಯುತ್‌ ಸೇವೆ ಕಲ್ಪಿಸಲಾಗುವುದು. ವಿದ್ಯುತ್ ಮೀಟರ್ ಅಳವಡಿಸಿಕೊಂಡಿರುವ ಶೇ 90ರಷ್ಟು ಮಂದಿ ಎಲ್‌ಇಡಿ ಬಲ್ಬ್‌ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಬೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ವೆಂಕಟೇಶ್‌ ತಿಳಿಸಿದರು.

ಯೋಜನೆಯ ರಾಜ್ಯ ನೋಡಲ್ ಅಧಿಕಾರಿ ರಾಜೇಶ್‌ಕುಮಾರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುನಿರಾಜು ಹಾಜರಿದ್ದರು.

ವಿಧಾನಸಭಾ ಕ್ಷೇತ್ರ ಯೋಜನೆಗೆ ಆಯ್ಕೆಯಾದ ಗ್ರಾಮಗಳು

ಬಂಗಾರಪೇಟೆ ಹುದುಕುಳ, ಬೆಂಗನೂರು, ಪೆದ್ದಲ್ಲಿ, ಕೊಪ್ಪ
ಕೆಜಿಎಫ್‌ ಎನ್‌.ಜಿ.ಹುಲ್ಕೂರು, ಮಹದೇವಪುರ, ಪಂತನಹಳ್ಳಿ
ಕೋಲಾರ ಮುಳ್ಳಹಳ್ಳಿ, ಮಾರ್ಜೇನಹಳ್ಳಿ, ಕೂಟೇರಿ
ಮಾಲೂರು ಕೂರಾಂಡಹಳ್ಳಿ, ಆಲಂಬಾಡಿ, ಚಲಗಾನಹಳ್ಳಿ
ಮುಳಬಾಗಿಲು ಕನ್ನಸಂದ್ರ, ಬೇವನಹಳ್ಳಿ, ಭಟ್ರಹಳ್ಳಿ, ಮುಡಿಗೆರೆ
ಶ್ರೀನಿವಾಸಪುರ ತುಮ್ಮಲಪಲ್ಲಿ, ಕೋಡಿಪಲ್ಲಿ, ಗೌಡತಾತನಗುಡ್ಡ, ಜೆ.ತಿಮ್ಮಸಂದ್ರ, ಚಲ್ದಿಗಾನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT