ಸೋಮವಾರ, ಜೂನ್ 14, 2021
24 °C
ಮಾಲೂರಿನಲ್ಲಿ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಭರವಸೆ

ಮೆಗಾ ಡೇರಿಗೆ ಮತ್ತೆ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಲೂರು: ರಾಜಕೀಯ ಕಾರಣಗಳಿಂದಾಗಿ ಕೋಚಿಮುಲ್‌ನಿಂದ ನೂತನವಾಗಿ ನಿರ್ಮಾಣ ಮಾಡುತ್ತಿರುವ ₹ 140 ಕೋಟಿ ವೆಚ್ಚದ ಮೆಗಾ ಡೇರಿ ಕಾಮಗಾರಿಯ ಅನುದಾನ ತಡೆ ಹಿಡಿಯಲಾಗಿತ್ತು. ಈಗ ಕೋಚಿಮುಲ್ ಅಧ್ಯಕ್ಷ ನಂಜೇಗೌಡ ಅವರ ಒತ್ತಾಯದ ಮೇರೆಗೆ ಅನುದಾನ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.

ಪಟ್ಟಣದ ಜೆಎಸ್‌ಎಸ್‌ ಪಬ್ಲಿಕ್ ಶಾಲೆ ಆವರಣದಲ್ಲಿ ಬುಧವಾರ ಕೋಚಿಮುಲ್ ಮತ್ತು ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಕಾರದೊಂದಿಗೆ ತಾಲ್ಲೂಕಿನ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಟೊಮೆಟೊ ಬೆಳೆಯುವ ರೈತರು ಹೆಚ್ಚಾಗಿದ್ದು, ಮಾರ್ಕೆಟ್ ಫೆಡರೇಷನ್ ಬಳಿ ಇರುವ 4 ಎಕರೆ ಭೂಮಿಯಲ್ಲಿ 3 ಎಕರೆ ಜಮೀನನ್ನು ಎಪಿಎಂಸಿಗೆ ನೀಡಬೇಕೆಂದು ಸಂಸದರು, ಉಸ್ತುವಾರಿ ಸಚಿವರು ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದ 25 ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತರಿಗೆ ಆಯಾ ಜಿಲ್ಲೆಯ ಸಹಕಾರ ಸಂಘಗಳಿಂದ ಪ್ರೋತ್ಸಾಹ ಧನ ವಿತರಿಸಲಾಗಿದೆ. ಎಪಿಎಂಸಿ ಮತ್ತು ಸಹಕಾರ ಸಂಘಗಳಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 54 ಕೋಟಿ ನೀಡಲಾಗಿದೆ. ರಾಜ್ಯದ 42,376 ಆಶಾ ಕಾರ್ಯಕರ್ತೆಯರಿಗೆ ಸಹಕಾರ ಸಂಘಗಳಿಂದ ₹ 3,000 ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.

ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ವೈದ್ಯರು, ನರ್ಸ್, ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಿಸುವ ಬಗ್ಗೆ ಪ್ರಸ್ತಾಪವಾಗಿದೆ. ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

ಪ್ರಸಕ್ತ ಸಾಲಿನಲ್ಲಿ ಸಹಕಾರ ಇಲಾಖೆಯಿಂದ 24 ಲಕ್ಷ ರೈತರಿಗೆ ₹ 14.50 ಕೋಟಿ  ಸಾಲ ನೀಡಲು ತೀರ್ಮಾನಿಸಲಾಗಿದೆ ಎಂದರು.

ಶಾಸಕ ಕೆ.ವೈ. ನಂಜೇಗೌಡ ಮಾತನಾಡಿ, ‘ಮೆಗಾ ಡೇರಿ ಕಾಮಗಾರಿಗೆ ಹಣ ಬಿಡುಗಡೆ ಮಾಡಿಸುವುದಾಗಿ ಸಚಿವರು ತಿಳಿಸಿದ್ದಾರೆ. ಇದರಿಂದ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ’ ಎಂದರು.

ಹಿಂದಿನ ಸರ್ಕಾರ ತಾಲ್ಲೂಕು ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದ ಹಲವು ಅನುದಾನಗಳನ್ನು ಈ ಸರ್ಕಾರ ತಡೆ ಹಿಡಿದಿತ್ತು. ಮುಖ್ಯಮಂತ್ರಿಗೆ ಮನವಿ ಮಾಡಿದ ಬಳಿಕ ಹಣ ಬಿಡುಗಡೆ ಮಾಡಿದ್ದಾರೆ ಎಂದರು.

ಉಸ್ತುವಾರಿ ಸಚಿವ ನಾಗೇಶ್, ಸಂಸದ ಎಸ್.ಮುನಿಸ್ವಾಮಿ, ಎಂಎಲ್‌ಸಿ ಇಂಚರ ಗೋವಿಂದರಾಜು, ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಚ್.ಚೆನ್ನರಾಯಪ್ಪ, ಕೃಷ್ಣಾರೆಡ್ಡಿ, ಆಡಳಿತ ಅಧಿಕಾರಿ ರವಿ ಭಾಗವಹಿಸಿದ್ದರು.

ನಷ್ಟದಲ್ಲಿ ಕೋಚಿಮುಲ್‌

ಪ್ರಸ್ತುತ ಕೋಲಾರ ಹಾಲು ಒಕ್ಕೂಟ ನಷ್ಟದಲ್ಲಿ ನಡೆಯುತ್ತಿದೆ. ₹ 50 ಕೋಟಿಯಷ್ಟು ಹಾಲಿನ ಪೌಡರ್ ದಾಸ್ತಾನಿದೆ. ಕೊರೊನಾದಿಂದಾಗಿ ಶಾಲೆಗಳು ಮುಚ್ಚಿರುವುದರಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮನೆಗೆ ನೀಡುತ್ತಿರುವ ಆಹಾರ ಧಾನ್ಯದ ಜತೆಗೆ ಹಾಲಿನ ಪೌಡರ್‌ ನೀಡಬೇಕು. ಪಡಿತರದೊಂದಿಗೆ ಹಾಲಿನ ಪುಡಿ ವಿತರಿಸಬೇಕು ಎಂದು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು