ವಿ.ರಾಜಗೋಪಾಲ್
ಮಾಲೂರು: ಪಟ್ಟಣದಲ್ಲಿ ಗುರುಭವನಕ್ಕೆ ಸರ್ಕಾರ ನಿವೇಶನ ನೀಡಿ 25ವರ್ಷ ಕಳೆದರೂ ಗುರುಭವನ ನಿರ್ಮಾಣ ಕಾರ್ಯ ಪೂರ್ಣಗೊಳ್ಳದೆ ಇರುವುದು ಶಿಕ್ಷಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಪಟ್ಟಣದ ಹೃದಯ ಭಾಗದಲ್ಲಿರುವ ಮಾರುತಿ ಬಡಾವಣೆಯಲ್ಲಿರುವ ಗುರುಭವನ ಕಟ್ಟಡದಲ್ಲಿ ಗಿಡಗಳು ಬೆಳೆದಿದೆ.
ಶಿಕ್ಷಕರು ಇಲ್ಲದೆ ಸಾಮಾಜಿಕವಾಗಿ ಹಾಗೂ ಭೌತಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸುವ ಇಲ್ಲಿನ ಶಿಕ್ಷಕರು ಮತ್ತು ಸಂಘದ ಪದಾಧಿಕಾರಿಗಳು ಶಿಕ್ಷಕರ ದಿನಾಚರಣೆಯ ದಿನದಂದು ಮಾತ್ರ ಗುರುಭವನ ನಿರ್ಮಾಣದ ಬಗ್ಗೆ ಮಾತನಾಡುವುದು ಹೊರತುಪಡಿಸಿದರೆ ಯಾವುದೇ ಪ್ರಗತಿ ಕಂಡಿಲ್ಲ.
ಪಟ್ಟಣದ ಮಾರುತಿ ಬಡಾವಣೆಯಲ್ಲಿರುವ ಭೋವಿ ಸಂಘದ ಹಾಸ್ಟೆಲ್ ಪಕ್ಕದಲ್ಲಿ ಸುಮಾರು 45 ವರ್ಷಗಳ ಹಿಂದೆ ಬಿಇಒ ವಸತಿ ನಿಲಯಕ್ಕೆ 20 ಗುಂಟೆ ಜಾಗವನ್ನು ಸರ್ಕಾರ ಮಂಜೂರು ಮಾಡಿದೆ. ನಂತರ ವಸತಿ ನಿಲಯದ ಸ್ಥಳವನ್ನು ಅಂದು ಬಿಇಒ ಸ್ಥಾನದಲ್ಲಿದ್ದ ಕುಬೇರಪ್ಪ ಅವರ ನೇತೃತ್ವದಲ್ಲಿ ಶಿಕ್ಷಕ ದಿ. ವೆಳ್ಳಪ್ಪ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ವಸತಿ ನಿಲಯದ ಜಾಗವನ್ನು ಶಿಕ್ಷಕರ ಅನುಕೂಲಕ್ಕಾಗಿ ಗುರುಭವನ ನಿರ್ಮಾಣಕ್ಕೆ ವರ್ಗಾಯಿಸಲಾಯಿಸಲಾಗಿದೆ.
ಗುರುಭವನ ನಿರ್ಮಾಣಕ್ಕೆಂದೆ ಗುರುಭವನ ಸಮಿತಿ ರಚಿಸಲಾಗಿದೆ. ಬಿಎಒ ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಶಿಕ್ಷಕರ ಸಂಘದ ಪದಾಧಿಕಾರಿಗಳೇ ಸಮಿತಿಯಲ್ಲೂ ಪದಾಧಿಕಾರಿಗಳಾಗಿರುತ್ತಾರೆ. ಆದರೆ ಗುರುಭವನ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ.
ಈ ಹಿಂದಿನ ಶಿಕ್ಷಕರ ಸಂಘಟನೆ, ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಗುರುಭವನ ಕಟ್ಟಡ ಕಾಮಗಾರಿ ವಿಳಂಬವಾಗಿದೆ. ಸ್ಥಳೀಯ ಶಾಸಕ ಕೆ.ವೈ.ನಂಜೇಗೌಡರ ಬಳಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ನಿವೃತ್ತ ಶಿಕ್ಷಕರು ಚರ್ಚೆ ನಡೆಸಿದ್ದಾರೆ. ಸರ್ಕಾರದಿಂದ ಹೆಚ್ಚಿನ ಅನುದಾನ ತರುವ ಮೂಲಕ ಗುರುಭವನ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ನರಸಿಂಹ ಹೇಳಿದರು.
ಶಾಸಕ ಕೆ.ವೈ.ನಂಜೇಗೌಡರು ಗುರುಭವನ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ₹20 ಲಕ್ಷ ಕೊಡುವುದಾಗಿ ತಿಳಿಸಿದ್ದರು. ಈಗ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದರಿಂದ ಗುರುಭವನ ನಿರ್ಮಾಣಕ್ಕೆ ಹೆಚ್ಚು ಒತ್ತು ಸಿಗಲಿದ್ದು, ಅವರ ಬಳಿ ಚರ್ಚಿಸಿ ಭವನ ನಿರ್ಮಾಣಕ್ಕೆ ಮುಂದಾಗುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಲಾ ತಿಳಿಸಿದರು.
ಜನ ಪ್ರತಿನಿಧಿಗಳ, ಶಿಕ್ಷಕರ ಹಾಗೂ ನೌಕರರ ಸಂಘದ ಪದಾಧಿಕಾರಿಗಳಲ್ಲಿನ ಇಚ್ಛಾಶಕ್ತಿ ಕೊರತೆಯಿಂದ ಗುರುಭವನ ನಿರ್ಮಾಣ ವಿಳಂಬವಾಗುತ್ತಿದೆ. ಶಾಸಕ ಕೆ.ವೈ. ನಂಜೇಗೌಡರು ಗುರುಭವನ ಕಟ್ಟಡ ನಿರ್ಮಾಣ ಮಾಡಲು ಆಸಕ್ತಿ ಹೊಂದಿದ್ದು, ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ಅಂಜಿನಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.