ಬಂಗಾರಪೇಟೆ: ಸರ್ಕಾರಿ ಇಲಾಖೆಗಳಲ್ಲಿ ಆರ್‌ಟಿಐ ಅರ್ಜಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅರ್ಜಿಗಳಿಗೆ ಉತ್ತರಿಸುವುದೇ ದೊಡ್ಡ ಕೆಲಸವಾಗಿ ಪರಿಣಮಿಸಿದೆ ಎನ್ನುವುದು ಅಧಿಕಾರಿಗಳ ಅಳಲಾಗಿದೆ. ತಾಲ್ಲೂಕಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರ್‌ಟಿಐ ಅರ್ಜಿಗಳನ್ನು ಹಾಕಿ ಬೇಕೆಂತಲೇ ಅಧಿಕಾರಿಗಳಿಗೆ ಕಿರುಕುಳ ಕೊಡುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲ ಸಂಘಟನೆಗಳ ಮುಖಂಡರು ಅದೇ ಕೆಲಸದಲ್ಲಿ ತೊಡಗಿದ್ದಾರೆ. ನಿತ್ಯ ಸರ್ಕಾರಿ ಕಚೇರಿಗಳ ಸುತ್ತ ಅಲೆದಾಡುವುದೇ ಅವರ ಕೆಲಸ. ಅವರನ್ನು ಎದುರಿಸುವುದೇ ಅಧಿಕಾರಿಗಳಿಗೆ ತಲೆನೋವಾಗಿದೆ ಎಂದರು.
ತಹಶೀಲ್ದಾರ್ ಆಗಿದ್ದ ಬಿ.ಕೆ. ಚಂದ್ರಮೌಳೇಶ್ವರ ಅವರು ಅತ್ಯಂತ ಸ್ನೇಹ ಜೀವಿಯಾಗಿದ್ದು, ಎಲ್ಲರಿಗೂ ಸ್ಪಂದಿಸುತ್ತಿದ್ದರು. ದಂಡಾಧಿಕಾರಿಯಾಗಿದ್ದರೂ ತಮ್ಮ ಸರಳ ವ್ಯಕ್ತಿತ್ವದಿಂದ ಎಲ್ಲರ ಮೆಚ್ಚುಗೆ ಪಡೆದಿದ್ದರು. ಅಂತವರನ್ನು ಕಳೆದುಕೊಂಡಿದ್ದು ಇಲ್ಲಿನ ಜನರ ದುರ್ದೈವ ಎಂದರು.
‘ಇಲಾಖೆ ಬೇರೆ ಬೇರೆಯಾದರೂ ನೌಕರರಲ್ಲಿ ಒಗ್ಗಟ್ಟಿರಬೇಕು. ಯಾವುದೇ ನೌಕರನಿಗೆ ಸಮಸ್ಯೆಯಾದರೂ ಎಲ್ಲ ಇಲಾಖೆಯವರು ಪರಸ್ಪರ ಸ್ಪಂದಿಸಬೇಕು. ಸರ್ಕಾರಿ ನೌಕರರ ಸಮಸ್ಯೆ ಬಗೆಹರಿಸುವಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದರು.
ಎಸ್ಸೆಸ್ಸೆಲ್ಸಿಯಲ್ಲಿ ತಾಲ್ಲೂಕಿನಲ್ಲಿ ಹೆಚ್ಚು ಅಂಕ ಪಡೆದ ಸರ್ಕಾರಿ ನೌಕರರ ಮಕ್ಕಳಾದ ಚಂದನಗೌಡ, ಲೀಲಾವತಿ, ಭರತ್, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಮಮತಾ, ಪೂಜಾ, ನಿಶಂತ್ ಗೌಡ ಅವರನ್ನು ಪುರಸ್ಕರಿಸಲಾಯಿತು. ಬಳಿಕ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿ, ವಿವೇಕಾನಂದ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು.
ತಹಶೀಲ್ದಾರ್ ಎಂ. ದಯಾನಂದ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಪಿ. ಕೆಂಪಯ್ಯ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ. ಅಪ್ಪಯ್ಯಗೌಡ, ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ನಾಗಾನಂದ ಕೆಂಪರಾಜು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಶಶಿಕಲಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಪಿ. ನಾರಾಯಣಪ್ಪ, ಇಒ ವೆಂಕಟೇಶಪ್ಪ, ಶಿಕ್ಷಕರ ಸಂಘದ ವೆಂಕಟೇಶಗೌಡ, ಆಂಜನೇಯಗೌಡ, ಕೆಜಿಎಫ್ ವಿನೋದ್ ಕುಮಾರ್, ಪ್ರೇಮಲತಾ, ಸುಜಾತಾ, ಆರೋಗ್ಯ ಅಧಿಕಾರಿ ರವಿಕುಮಾರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.