ಶುಕ್ರವಾರ, ಅಕ್ಟೋಬರ್ 7, 2022
24 °C
ಜೆಡಿಎಸ್‌ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಕುಮಾರಸ್ವಾಮಿ ಭಾಗಿ–ಒಮ್ಮೆ ಅಧಿಕಾರ ನೀಡಲು ಮನವಿ

ಪಂಚರತ್ನ ಜಾರಿಯಾಗದಿದ್ದರೆ ಪಕ್ಷ ವಿಸರ್ಜನೆ: ಎಚ್.ಡಿ.ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಪಂಚರತ್ನ ಯೋಜನೆ ರೂಪಿಸಿದ್ದು, 2023ರಲ್ಲಿ ಜೆಡಿಎಸ್‌ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಅದನ್ನು ಜಾರಿ ಮಾಡುತ್ತೇನೆ. ಅದು ಸಾಧ್ಯವಾಗದಿದ್ದರೆ ಜೆಡಿಎಸ್‌ ಪಕ್ಷವನ್ನೇ ವಿಸರ್ಜಿಸುತ್ತೇನೆ. ಮತ ಕೇಳಲು ಮತ್ತೆಂದೂ ತಮ್ಮ ಬಳಿಗೆ ಬರುವುದಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಭಾನುವಾರ ಜೆಡಿಎಸ್‌ ಆಯೋಜಿಸಿದ್ದ ಅಲ್ಪಸಂಖ್ಯಾತರ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.

‘ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮದಲ್ಲಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡಲಾಗುವುದು. ಪ್ರತಿ ಕುಟುಂಬಕ್ಕೆ ಆರೋಗ್ಯ ಸೇವೆ ಕಲ್ಪಿಸಲಾಗುವುದು. ರೈತರಿಗೆ ಶಾಶ್ವತ ನೆರವು, ಉದ್ಯೋಗ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾ
ಗುವುದು’ ಎಂದು ಭರವಸೆ ನೀಡಿದರು.

‘ಮುಖ್ಯಮಂತ್ರಿ ಆಗಬೇಕೆಂದಿರುವುದು ಮೆರೆಯಲು ಅಲ್ಲ; ಜನರ ಬದುಕು ಉತ್ತಮಪಡಿಸುವ ಗುರಿ ಹೊಂದಿದ್ದೇನೆ. ಕಾಂಗ್ರೆಸ್ ಹಾಗೂ ಬಿಜೆಪಿ‌ ಒಂದೇ ನಾಣ್ಯದ ಎರಡು‌ ಮುಖಗಳು’ ಎಂದು ವಾಗ್ದಾಳಿ ನಡೆಸಿದರು.

‘ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಏಳು ಬಾರಿ ಗೆದ್ದಿದ್ದ ದಲಿತ ಮುಖಂಡನ ರಾಜಕೀಯದ ಭವಿಷ್ಯವನ್ನು ನಿರ್ನಾಮ ಮಾಡಿದ್ದು ಕಾಂಗ್ರೆಸ್’ ಎಂದು ಟೀಕಿಸಿದರು.

ಅಂಜುಮಾನ್ ಸಂಸ್ಥೆ ಮುಖ್ಯಸ್ಥ ಜಮೀರ್ ಅಹಮದ್ ಮಾತನಾಡಿ, ‘ಕ್ಲಾಕ್‌ ಟವರ್‌ ಯಾರಪ್ಪನದು ಎಂಬುದಾಗಿ ಸಂಸದ ಮುನಿಸ್ವಾಮಿ ಪ್ರಶ್ನಿಸಿದ್ದರು. ಟವರ್ ನಮ್ಮ ಅಪ್ಪನದು. ವೋಟ್‌ಗಾಗಿ ಜನರ ನಡುವೆ ವಿಷ ಹಾಕಬೇಡಿ. ನಾವು ಅಣ್ಣತಮ್ಮಂದಿರ ರೀತಿ ಬಾಳುತ್ತಿದ್ದೇವೆ’ ಎಂದರು.

‘ಕೋಲಾರದಲ್ಲಿ ಮುಸ್ಲಿಮರಿಗೆ ಹಾಸ್ಟೆಲ್ ಇಲ್ಲ. ಸರ್ಕಾರಿ ಕಚೇರಿಗಳಿಗೆ ಹೋದರೆ ಕೆಲಸ ಮಾಡಿಕೊಡುವುದಿಲ್ಲ’ ಎಂದು ದೂರಿದರು.

ಜೆಡಿಎಸ್ ಜಿಲ್ಲಾ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ‌‘ಮುಸ್ಲಿಮರು ಯಾರ ಅಪ್ಪನ ಆಸ್ತಿಯೂ ಅಲ್ಲ. 60 ವರ್ಷಗಳಿಂದ ಕಾಂಗ್ರೆಸ್‌ನವರು ವೋಟ್‌ಗಾಗಿ ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ಈಗಲೂ ಮುಸ್ಲಿಮರು ಆತಂಕದಲ್ಲಿ ಬದುಕು ಸಾಗಿಸುತ್ತಿದ್ದಾರೆ’ ಎಂದರು.

‘ದೇಶದಲ್ಲಿ ಈಗ ಎಲ್ಲೂ ಕಾಂಗ್ರೆಸ್ ಇಲ್ಲ. ರಮೇಶ್‌ ಕುಮಾರ್‌ ಹಾಗೂ ಅವರ ತಂಡದವರು ಬಿಜೆಪಿಯ ‘ಬಿ’ ಟೀಮ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮಸಲತ್ತು ನಡೆಸಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದರು’ ಎಂದು ಆರೋಪಿಸಿದರು.

‘ಸ್ತ್ರೀಶಕ್ತಿ ಸಂಘಗಳ ಸಾಲ‌ಮನ್ನಾ ಮಾಡುವ ಭರವಸೆಯನ್ನು ಕುಮಾರಸ್ವಾಮಿ ನೀಡಬೇಕು’ ಎಂದು ಮನವಿ‌ ಮಾಡಿದರು.

ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ‘ಉತ್ತರ ಪ್ರದೇಶದಲ್ಲಿ ಆಗುತ್ತಿರುವ ಬೆಳವಣಿ ಗಮನಿಸಿದರೆ ಕಣ್ಣಲ್ಲಿ ರಕ್ತ ಬರುತ್ತಿದ್ದು, ಮುಸ್ಲಿಮರು ಟೋಪಿ ಧರಿಸಲೂ ಹೆದರಬೇಕಾದ ಪರಿಸ್ಥಿತಿಯಿದೆ. ಕರ್ನಾಟಕದಲ್ಲಿ ಅಂತಹ ಪರಿಸ್ಥಿತಿ ಬರುವುದು ಬೇಡ. ಹಿಂದೂ-ಮುಸ್ಲಿಮರು ಸಹಬಾಳ್ವೆಯಿಂದ ಬದುಕಬೇಕು’ ಎಂದು ಸಲಹೆ ನೀಡಿದರು.

‘ಸಿದ್ದರಾಮಯ್ಯರಿಗೆ ರಾಜಕೀಯ ಬದುಕು ನೀಡಿದ್ದೇ ನಾನು. ಚಾಮುಂಡೇಶ್ವರಿಯಲ್ಲಿ ಸೋಲುತ್ತಾರೆ ಎಂಬುದು ತಿಳಿದ ಕೂಡಲೇ ಬಾದಾಮಿಗೆ ಕರೆದುಕೊಂಡು ಹೋಗಿ ಗೆಲ್ಲಿಸಿದೆ’ ಎಂದರು.

ಸಮಾವೇಶದಲ್ಲಿ ಸುಮಾರು 20 ಸಾವಿರ ಜನ ಸೇರಿದ್ದಾರೆ. ಸಂಘಟಕರು ಸುಮಾರು 2 ಸಾವಿರ ಕೆ.ಜಿ.ಚಿಕನ್ ತರಿಸಿ, ಭರ್ಜರಿ ಬಾಡೂಟ ಸಿದ್ಧಪಡಿಸಿದ್ದರು. ಬಾಡೂಟಕ್ಕೆ ನೂಕುನುಗ್ಗಲು ಸಂಭವಿಸಿತು.

ಕೋಲಾರಕ್ಕೆ ಸಿಎಂಆರ್‌ ಅಭ್ಯರ್ಥಿ: ಕೋಲಾರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಎಂಬುದಾಗಿ ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿಎಂಆರ್‌ ಶ್ರೀನಾಥ್‌ ಮಾತನಾಡಿ, ‘ಎಚ್‌.ಡಿ.ದೇವೇಗೌಡರ ಅಧಿಕಾರಾವಧಿಯಲ್ಲಿ ಮುಸ್ಲಿಮರಿಗೆ ಶೇ 4 ಮೀಸಲಾತಿ ಲಭಿಸಿತು. ಕುಮಾರಸ್ವಾಮಿ ₹ 25 ಸಾವಿರ ಕೋಟಿ ಸಾಲಮನ್ನಾ ಮಾಡಿದರು. ಮುಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಮತ್ತಷ್ಟು ಕೊಡುಗೆ ಸಿಗಲಿದೆ. ಮುಸ್ಲಿಮರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಒಂದು ಕುಟುಂಬದವರಂತೆ ಜೊತೆಯಾಗಿ ಮುನ್ನಡೆಯೋಣ’ ಎಂದರು.

ಕುರ್ಕಿ ರಾಜೇಶ್ವರಿ ಕಣ್ಣೀರು: ಸಮಾವೇಶದಲ್ಲಿ ಕೋಲಾರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಜೆಡಿಎಸ್‌ ಸಂಭವನೀಯ ಅಭ್ಯರ್ಥಿಗಳು ಮಾತನಾಡಿದರು. ಆದರೆ, ತಾಲ್ಲೂಕು ಜೆಡಿಎಸ್‌ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ತಮಗೆ ಟಿಕೆಟ್‌ ಸಿಗದು ಎಂಬ ಬೇಸರದಿಂದ ವೇದಿಕೆ ಮೇಲೆ ಕಣ್ಣೀರಿಟ್ಟರು.

ಸಿ.ಎಂ.ಇಬ್ರಾಹಿಂ ಮನವೊಲಿಸಿದರು. ‘ನೀನು ನನ್ನ ಮಗಳಿದ್ದಂತೆ. ನಿನಗೂ ಅವಕಾಶಗಳು ಸಿಗಲಿವೆ’ ಎಂದರು.

ಮೈತ್ರಿ ಸರ್ಕಾರ ತೆಗೆದಿದ್ದು ರಮೇಶ್‌, ಸಿದ್ದರಾಮಯ್ಯ: ‘ಐದು ವರ್ಷ ಮುಖ್ಯಮಂತ್ರಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿ ಒಂದೂವರೆ ಗಂಟೆ ಉಪದೇಶ ಮಾಡಿದ್ದರು. ಆದರೂ ಕಾಂಗ್ರೆಸ್ ಜೊತೆಗೇ ಹೋದೆವು. ಒಂದು ದಿನವೂ ನೆಮ್ಮದಿಯಿಂದ ಆಡಳಿತ ನಡೆಸಲು ಸಾಧ್ಯವಾಗಲಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.

‘ರಮೇಶ್‌ ಕುಮಾರ್ ಎಂಬ ಗೋಸಂಬೆ ರಾಜಕಾರಣಿ ಹಾಗೂ ಸಿದ್ದರಾಮಯ್ಯ ಅವರ ಕಾರಣದಿಂದ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾಯಿತು’ ಎಂದರು.

ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ತಾಲ್ಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ನಗರಸಭೆ ಅಧ್ಯಕ್ಷೆ ಶ್ವೇತಾ, ಮುಖಂಡರಾದ ಸಿಎಂಆರ್‌ ಶ್ರೀನಾಥ್‌, ರಾಮೇಗೌಡ, ಸಮೃದ್ಧಿ‌ ಮಂಜುನಾಥ್, ಸಿ.ಮಲ್ಲೇಶ್ ಬಾಬು, ನಜ್ಮಾ ನಸೀರ್, ನಬಿ, ಬಣಕನಹಳ್ಳಿ ನಟರಾಜ್, ಶಫಿಯುಲ್ಲಾ, ಜಯದೇವ ಪ್ರಸನ್ನ, ನೂರ್ ಅಹ್ಮದ್, ಕೆ.ಪಿ.ಬಚ್ಚೇಗೌಡ, ನರಸಿಂಹಮೂರ್ತಿ, ಮುನೇಗೌಡ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು