ಬುಧವಾರ, ಆಗಸ್ಟ್ 17, 2022
25 °C
ಜೆಡಿಎಸ್‌ ಕಾರ್ಯಕರ್ತರ ಸಭೆ

ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್‌ ಕೊಡುಗೆ ಶೂನ್ಯ: ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕಾಂಗ್ರೆಸ್‌ ರಾಜಕೀಯ ಲಾಭಕ್ಕಾಗಿ ಮುಸ್ಲಿಮರ ದಾರಿ ತಪ್ಪಿಸುತ್ತಿದೆ. ಮುಸ್ಲಿಂ ಸಮುದಾಯಕ್ಕೆ ಆ ಪಕ್ಷದ ಕೊಡುಗೆ ಶೂನ್ಯ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು.

ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿ ಬುಧವಾರ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ದೇವೇಗೌಡರು ರಾಜ್ಯದಲ್ಲಿ ಮುಸ್ಲಿಮರಿಗೆ ಮೀಸಲಾತಿ ಮತ್ತು ರಾಜಕೀಯ ಶಕ್ತಿ ಕೊಟ್ಟರು. ಅಲ್ಲದೇ, ಹಲವು ಯೋಜನೆ ಜಾರಿಗೊಳಿಸಿದರು. ಮುಸ್ಲಿಮರು ಜೆಡಿಎಸ್‌ ಬಗ್ಗೆ ಅನುಮಾನ ಪಡಬಾರದು’ ಎಂದರು.

‘ರಾಜಕಾರಣಕ್ಕಾಗಿ ಜಾತಿ, ಧರ್ಮ ಹೊಡೆಯುವುದರಲ್ಲಿ ಬಿಜೆಪಿ- ಮತ್ತು ಕಾಂಗ್ರೆಸ್ ಒಂದೇ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಮ್ ಎಂದು ಕಾಂಗ್ರೆಸ್ ಬಿಂಬಿಸಿತು. ಓಟಿಗಾಗಿ ಜೆಡಿಎಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿತು. ಕೊನೆಗೆ ಪಕ್ಷ ಕಾಂಗ್ರೆಸ್‌ ಜತೆ ಸೇರಿ ಸರ್ಕಾರ ರಚಿಸಿತು. ಇದನ್ನು ಮುಸ್ಲಿಂ ಸಮುದಾಯ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ನಾನು ಬಿಜೆಪಿ ಅಥವಾ ಕಾಂಗ್ರೆಸ್‌ ಪಕ್ಷದ ಗುಲಾಮನಲ್ಲ. ನಮಗೂ ಸ್ವಾಭಿಮಾನವಿದೆ. ಪಕ್ಷವನ್ನು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತಂದು ಕರ್ನಾಟಕವನ್ನು ರಾಮ ರಾಜ್ಯ ಮಾಡುತ್ತೇನೆ. ಈ ನಿಟ್ಟಿನಲ್ಲಿ ಮುಂದಿನ ಚುನಾವಣೆಗೆ ಟಿಕೆಟ್‌ ಹಂಚಿಕೆಯಲ್ಲಿ ಶೇ 25ರಷ್ಟು ಸ್ಥಾನ ಯುವಕರಿಗೆ ನೀಡುತ್ತೇವೆ’ ಎಂದು ಘೋಷಿಸಿದರು.

‘14 ತಿಂಗಳು ನಾನು ಹೆಸರಿಗಷ್ಟೇ ಮುಖ್ಯಮಂತ್ರಿಯಾಗಿದ್ದೆ. ಆದರೆ, ಸ್ವತಂತ್ರವಾಗಿ ಆಡಳಿತ ನಡೆಸುವ ಅಧಿಕಾರವಿರಲಿಲ್ಲ. ಕಾಂಗ್ರೆಸ್‌ನವರು ಸೂಚಿಸಿದ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕಿತ್ತು. ಸಿದ್ದರಾಮಯ್ಯ ಸರ್ಕಾರ ಬಂದ ಹೊಸದರಲ್ಲಿ ಬಜೆಟ್ ಮಂಡನೆಗೂ ಅವಕಾಶ ಕೊಡಲಿಲ್ಲ. ರೈತರ ಸಾಲ ಮನ್ನಾ ವಿಚಾರವಾಗಿ ಯಡಿಯೂರಪ್ಪ ನನ್ನನ್ನು ಟೀಕಿಸಿದ್ದರು. ಟೀಕೆ, ಇತಿಮಿತಿ ನಡುವೆಯೂ ಜನಪರ ಆಡಳಿತ ನೀಡಿದೆ’ ಎಂದರು.

ಪಾಪದ ಕೆಲಸ: ‘ರೈತರ ₹ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು ದೇಶದ ಇತಿಹಾಸದಲ್ಲೇ ಮೊದಲು. ಆದರೆ, ಪಕ್ಷದ ಕಾರ್ಯಕರ್ತರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಕೊಡಲು ಸಹ ಆಗಲಿಲ್ಲ. ಬಿಜೆಪಿ ಶಾಸಕರನ್ನು ಸೆಳೆದು ಸರ್ಕಾರ ಉಳಿಸಿಕೊಳ್ಳುವ ಶಕ್ತಿಯಿತ್ತು. ಆದರೆ, ಶಾಸಕರ ಖರೀದಿಗೆ ಜನರ ತೆರಿಗೆ ಹಣ ಬಳಸುವ ಪಾಪದ ಕೆಲಸ ಮಾಡಬೇಕೆಂಬ ಕೊರಗಿನಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ’ ಎಂದು ಸ್ಪಷ್ಟಪಡಿಸಿದರು.

‘ಗ್ರಾ.ಪಂ ಚುನಾವಣೆ ನಡೆಯುತ್ತಿದೆ. ಸದ್ಯದಲ್ಲೇ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಎದುರಾಗಲಿವೆ. ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗಿಟ್ಟು ಪಕ್ಷಕ್ಕಾಗಿ ಕೆಲಸ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಹಿಟ್ ಅಂಡ್ ರನ್: ‘ನನ್ನ ತಂದೆ ಕುಮಾರಸ್ವಾಮಿ ಅವರು ಹಿಟ್ ಅಂಡ್ ರನ್ ರಾಜಕಾರಣಿಯಲ್ಲ. ಕಾಟಾಚಾರಕ್ಕೆ ಮಾತನಾಡಿ ಫಲಾಯನ ಮಾಡುವ ಸ್ವಭಾವ ಅವರದಲ್ಲ. ಆದರೆ, ರೈತ ಮುಖಂಡರು ಜೆಡಿಎಸ್‌ ಪಕ್ಷ ಮತ್ತು ಅವರನ್ನು ರೈತ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಇದು ಸರಿಯಲ್ಲ. ರಾಜ್ಯದ ರೈತರಿಗೆ ಕುಮಾರಸ್ವಾಮಿ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಸಭೆಗೂ ಮುನ್ನ ಜಿಲ್ಲಾ ಕೇಂದ್ರದ ಆರ್‌ಟಿಒ ಕಚೇರಿ ಬಳಿಯ ನಿವೇಶನದಲ್ಲಿ ಜೆಡಿಎಸ್ ಪಕ್ಷದ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು, ಮಾಜಿ ಸದಸ್ಯ ಆರ್‌.ಚೌಡರೆಡ್ಡಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಮುಖಂಡರಾದ ಕೆ.ಬಿ.ಗೋಪಾಲಕೃಷ್ಣ, ಸಮೃದ್ಧಿ ಮಂಜುನಾಥ್, ಉಪಾಧ್ಯಕ್ಷ ಗೋಪಾಲ್, ಜಿ.ಪಂ ಸದಸ್ಯ ಕೆ.ಎಸ್.ನಂಜುಂಡಪ್ಪ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು