ಶನಿವಾರ, ಡಿಸೆಂಬರ್ 3, 2022
28 °C
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದೇವರಾಜ್‌ ಮೆಚ್ಚುಗೆ

ಅಪರಾಧ ತಡೆಗೆ ಆಟೊ ಚಾಲಕರ ಸಹಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸಮಾಜದಲ್ಲಿನ ಕಾನೂನು, ಸುವ್ಯವಸ್ಥೆ ನಿರ್ವಹಣೆಯಲ್ಲಿ, ಅಪರಾಧ ತಡೆಯುವಲ್ಲಿ ಪೊಲೀಸ್‌ ಇಲಾಖೆಯೊಂದಿಗೆ ಆಟೊ ಚಾಲಕರ ಪಾತ್ರವೂ ಅನನ್ಯವಾಗಿದೆ. ಹಲವಾರು ಪ್ರಕರಣಗಳಲ್ಲಿ ಪೊಲೀಸರಿಗೆ ಸಹಾಯ ಮಾಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಜಯಚಾಮರಾಜೇಂದ್ರ ಒಡೆಯರ್ ಕನ್ನಡಿಗರ ಸಂಘದಿಂದ ಕೆ. ಜಯದೇವ್ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಟೊ ಚಾಲಕರಿಗೆ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.

‘ರಾಮನಗರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವಾಗ ಆಟೊ ಚಾಲಕರಿಗೆ ನನ್ನ ಮೊಬೈಲ್‌ ಸಂಖ್ಯೆ ನೀಡಿದ್ದೆ. ಅಲ್ಲಿನ ಬಸ್‌ ನಿಲ್ದಾಣ ಸುತ್ತ ರಾತ್ರಿ ನಡೆಯುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಅಪರಾಧ ಪತ್ತೆ ಹಚ್ಚುವಲ್ಲಿ ಅವರಿಂದ ಹಲವು ಸುಳಿವು ಸಿಗುತ್ತವೆ’ ಎಂದು ನುಡಿದರು.

‘ಹೊರಗಿನಿಂದ‌ ಬರುವ ಪ್ರವಾಸಿಗರು ಹಾಗೂ ಇತರ ಜನರು ಮೊದಲು ಭೇಟಿ‌‌ ಮಾಡುವುದೇ ಆಟೊ ಚಾಲಕರನ್ನು. ಹೀಗಾಗಿ, ಆಟೊ‌ ಚಾಲಕರು ನೀಟಾಗಿರಬೇಕು. ಸಾರ್ವಜನಿಕರ ಜೊತೆ ‌ಪ್ರೀತಿಯಿಂದ‌‌ ವರ್ತಿಸಬೇಕು. ಖುಷಿಯಿಂದ‌ ಮಾತನಾಡಿಸಬೇಕು.‌ ಕೆಟ್ಟ ವರ್ತನೆ ಇಡೀ ಜಿಲ್ಲೆಗೆ ಅಗೌರವ ಉಂಟು ಮಾಡಿಬಿಡುತ್ತದೆ' ಎಂದು ಎಚ್ಚರಿಕೆ ನೀಡಿದರು.

‘ಖಾಕಿ ಸಮವಸ್ತ್ರವು ಜಾತಿ, ಧರ್ಮ, ಭೇದ, ಬಡವ, ಶ್ರೀಮಂತ ಎನ್ನದೇ ಎಲ್ಲರನ್ನೂ ಸಮಾನ ಎಂಬುದನ್ನು ಸೂಚಿಸುತ್ತದೆ. ಶೇ 80ರಷ್ಟು ಆಟೊ ಚಾಲಕರು ಬದುಕಿಗಾಗಿ ವೃತ್ತಿ ಮಾಡಿದರೆ ಒಂದಿಷ್ಟು ಜನ ಶೋಕಿಗಾಗಿ ಈ ವೃತ್ತಿಗೆ ಬಂದಿರುತ್ತಾರೆ. ಅಂಥವರು ಹೊಟ್ಟೆ ತುಂಬಿದವರು. ಟೈಮ್ ಪಾಸ್ ಮಾಡುವವರು. ಅವರಿಂದ ಒಳ್ಳೆಯವರಿಗೂ ಕೆಟ್ಟ ಹೆಸರು ಬರುತ್ತದೆ. ಅಂಥವರನ್ನು ಆಟೊ ನಿಲ್ದಾಣಕ್ಕೆ ಸೇರಿಸಬೇಡಿ’ ಎಂದರು.

‘ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಆಟೊಗೆ ‌ಸಂಬಂಧಿಸಿದ ಎಲ್ಲಾ ದಾಖಲೆ‌ ಹೊಂದಿರಬೇಕು. ಅಪಘಾತವಾದಲ್ಲಿ‌ ನೆರವಿಗೆ ಬರುತ್ತದೆ. ಮತ್ತೆ ಕಾರ್ಯಾಚರಣೆ ನಡೆಸಲಿದ್ದು, ಕಾನೂನು ಉಲ್ಲಂಘನೆ ಆಗಿದ್ದರೆ ಆಟೊ ಬಿಡಲ್ಲ. ಅದಕ್ಕೂ ಮುನ್ನ ಎಲ್ಲಾ ದಾಖಲೆ ಸರಿಪಡಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಕೆ.ಎಸ್‌. ಗಣೇಶ್‌ ಮಾತನಾಡಿ, ‘ಆಟೊ ಚಾಲಕರಿಗೂ ಕನ್ನಡ ಭಾಷೆಗೆ ಅವಿನಾಭಾವ ಸಂಬಂಧವಿದೆ. ತಮ್ಮ ಆಟೊಗಳ ಮೇಲೆ ಕನ್ನಡ ಪ್ರೇಮದ ವಾಕ್ಯ ಬರೆದಿರುತ್ತಾರೆ. ಊರಿನ ಗೌರವ, ಘನತೆ, ಭಾಷೆ ಕಾಪಾಡುತ್ತಾರೆ. ಪ್ರವಾಸಿಗರ ಜೊತೆ ಸ್ನೇಹ ಸಂಬಂಧ ಬೆಳೆಸಬೇಕು. ಸೌಹಾರ್ದದಿಂದ ವರ್ತಿಸಬೇಕು. ಆಗ ಇಡೀ ನಗರಕ್ಕೆ ಗೌರವ ಸಿಗುತ್ತದೆ’ ಎಂದರು.

ಸಂಘದ ಅಧ್ಯಕ್ಷ ಕೆ. ಜಯದೇವ್, ‘25 ವರ್ಷಗಳಿಂದ ವರ್ಷಕ್ಕೆ ಎರಡು ಬಾರಿ ಆಟೊ ಚಾಲಕರಿಗೆ ಸಮವಸ್ತ್ರ ವಿತರಿಸುತ್ತಿದ್ದೇನೆ. ಈ ಕಾರ್ಯಕ್ರಮ ಮುಂದೆಯೂ ನಡೆಯಲಿದೆ. ಸಮವಸ್ತ್ರ ಇಲ್ಲವೆಂದು ಆಟೊ ಚಾಲಕರು ದಂಡ ಪಾವತಿಸುವಂತಾಗಬಾರದು’ ಎಂದು ಹೇಳಿದರು.

‌ಪತ್ರಕರ್ತ ರಾಜೇಂದ್ರ ಸಿಂಹ ಮಾತನಾಡಿ, ‘ಹಲವಾರು ಆಟೊ ಚಾಲಕರು ಪರವಾನಗಿ ಹೊಂದಿಲ್ಲ. ಚಾಲಕರಿಗೆ ತೊಂದರೆ ಆಗದಂತೆ ಅದಾಲತ್ ನಡೆಸಿ ದಾಖಲೆ ಒದಗಿಸುವ ಕೆಲಸ ನಡೆಯಬೇಕು. ಇದಕ್ಕೆ ಪೊಲೀಸ್‌ ಇಲಾಖೆ ನೆರವಾಗಬೇಕು. ಮಾದರಿ ಆಟೊ ನಿಲ್ದಾಣ ನಿರ್ಮಿಸುವ ಕಡೆ ಗಮನಹರಿಸಬೇಕು’ ಎಂದು ಸಲಹೆ ನೀಡಿದರು.

ಪತ್ರಕರ್ತ ಎ.ಜಿ. ಸುರೇಶ್‌ ಕುಮಾರ್‌ ಮಾತನಾಡಿದರು. 150ಕ್ಕೂ ಅಧಿಕ ಆಟೊ ಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು