ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ

ಕುರಗಲ್–ವೇಮಗಲ್ ಗ್ರಾ.ಪಂ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಕೆ
Last Updated 9 ಏಪ್ರಿಲ್ 2021, 16:37 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಕುರಗಲ್ ಮತ್ತು ವೇಮಗಲ್ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೆ ಏರಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಕುರಗಲ್ ಗ್ರಾ.ಪಂ ವ್ಯಾಪ್ತಿಯ 9 ಹಳ್ಳಿಗಳ ಬಿ.ಮಲ್ಲೇಶ್, ಸತೀಶ್, ಸುರೇಂದ್ರಗೌಡ, ವೇಣುಗೋಪಾಲ್, ಸಿ.ಎಂ.ಮುನಿರಾಜ್, ಎಸ್.ಎಂ.ಮುನಿರಾಜ್, ನಾರಾಯಣಸ್ವಾಮಿ ಸೇರಿದಂತೆ ಹಲವರು ಸರ್ಕಾರದ ಆದೇಶ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಕುರಗಲ್ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳನ್ನು ವೇಮಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿರುವುದು ಅವೈಜ್ಞಾನಿಕ. ಈ ಗ್ರಾ.ಪಂಗೆ ಸೇರಿದ ಮೂರ್ನಾಲ್ಕು ಗ್ರಾಮಗಳು ಸುಮಾರು 11, 9 ಕಿ.ಮೀ ದೂರವಿದ ಎಂಬ ತಮ್ಮ ಆಕ್ಷೇಪಣೆಗಳನ್ನು ಜಿಲ್ಲಾಧಿಕಾರಿ ಪುರಸ್ಕರಿಸಿಲ್ಲ ಎಂದು ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.

ಕುರಗಲ್ ಗ್ರಾ.ಪಂ ವ್ಯಾಪ್ತಿಯ ಕೈಗಾರಿಕೆಗಳನ್ನು ಆಧರಿಸಿ ವೇಮಗಲ್ ಪಟ್ಟಣ ಪಂಚಾಯಿತಿಗೆ ಸೇರಿಸಲಾಗುತ್ತಿದೆ. ಇದು ತಪ್ಪು. ಪಟ್ಟಣ ಪಂಚಾಯಿತಿಗೆ ಒಳಪಟ್ಟರೆ ಈ ಭಾಗದ ಬಡ, ದುರ್ಬಲ ವರ್ಗದ ಮಕ್ಕಳು ಗ್ರಾಮೀಣ ಕೃಪಾಂಕ ಸೌಲಭ್ಯದಿಂದ ವಂಚಿತರಾಗುತ್ತಾರೆ ಎಂದು ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದರು.

ಭೌಗೋಳಿಕವಾಗಿ ಕುರಗಲ್ ಗ್ರಾ.ಪಂ ವೇಮಗಲ್‌ನಿಂದ ದೂರದಲ್ಲಿದೆ. ಈ ಭಾಗದ ಜನರು ಕೈಗಾರಿಕೆಗಳಿಗೆ ಜಮೀನು ಬಿಟ್ಟು ಕೊಟ್ಟು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ ಭೂಮಿ ಶೇ 80ರಷ್ಟಿದ್ದರೂ ಅಧಿಕಾರಿಗಳು ಕೇವಲ ಶೇ 50ರಷ್ಟು ಕೃಷಿ ಭೂಮಿಯಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಡಿ.31ರೊಳಗೆ ಆಕ್ಷೇಪಣೆ ನೀಡಿದ್ದ ಅವಕಾಶ ಬಳಸಿ ಸಲ್ಲಿಸಿದ ಅರ್ಜಿಗಳನ್ನು ಜಿಲ್ಲಾಧಿಕಾರಿ ಪುರಸ್ಕರಿಸದ ಕಾರಣ ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದು ಅರ್ಜಿಯಲ್ಲಿ ಹೇಳಿದ್ದರು.

ವಿರೋಧವಿಲ್ಲ: ವೇಮಗಲ್ ಪಟ್ಟಣ ಪಂಚಾಯಿತಿ ರಚನೆಗೆ ತಮ್ಮ ವಿರೋಧವಿಲ್ಲ. ಆದರೆ, ಕುರಗಲ್ ಗ್ರಾಮ ಪಂಚಾಯಿತಿಯನ್ನು ಸೇರಿಸಿಕೊಳ್ಳುವುದಕ್ಕೆ ಆಕ್ಷೇಪವಿದೆ ಎಂದು ಅರ್ಜಿದಾರರು ಅರ್ಜಿಯಲ್ಲಿ ಪ್ರಸ್ತಾಪಿಸಿದ್ದರು.

1964ರ ಕರ್ನಾಟಕ ಮುನ್ಸಿಪಲ್ ಕಾಯ್ದೆ ಸೆಕ್ಷನ್ 9ರ ಪ್ರಕಾರ ಸರ್ಕಾರ ನಿಯಮಗಳನ್ನು ಅನುಸರಿಸಿಲ್ಲ. ಪಟ್ಟಣ ಪಂಚಾಯಿತಿ ರಚನೆಗೆ ಸಂಬಂಧಿಸಿದ ಸಾರ್ವಜನಿಕರು ಸಲ್ಲಿಸಿದ ಆಕ್ಷೇಪಣೆಗಳನ್ನು ನಿಯಮದ ಪ್ರಕಾರ ರಾಜ್ಯಪಾಲರ ಪರಿಶೀಲನೆಗೆ ಕಳುಹಿಸಬೇಕಿತ್ತು. ಅದರ ಬದಲು ಜಿಲ್ಲಾಧಿಕಾರಿಯಿಂದ ಪರಿಶೀಲನೆಗೆ ಒಳಪಡಿಸಿರುವುದು ಕಾನೂನುಬಾಹಿರ ಎಂಬ ವಾದವನ್ನು ನ್ಯಾಯಾಲಯ ಪುರಸ್ಕರಿಸಿ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ ಹೈಕೋರ್ಟ್ ವಕೀಲ ವೈ.ಆರ್‌.ಸದಾಶಿವರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT