ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌: ಹೈಟೆಕ್‌ ಎಪಿಎಂಸಿ ಮಾರುಕಟ್ಟೆ ನಿರ್ಮಾಣ

₹150 ಕೋಟಿ ವೆಚ್ಚದಲ್ಲಿ ಸ್ಥಾಪನೆಗೆ ಯೋಜನೆ
Published 7 ಫೆಬ್ರುವರಿ 2024, 14:26 IST
Last Updated 7 ಫೆಬ್ರುವರಿ 2024, 14:26 IST
ಅಕ್ಷರ ಗಾತ್ರ

ಕೆಜಿಎಫ್‌: ತಾಲ್ಲೂಕಿನ ಕದರಿಗಾನಕುಪ್ಪ ಗ್ರಾಮದ ಬಳಿ ಬುಧವಾರ ಹೈಟೆಕ್‌ ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆ ಪೂಜೆ ನೆರವೇರಿತು.

ಈ ವೇಳೆ ಶಾಸಕಿ ಎಂ.ರೂಪಕಲಾ ಮಾತನಾಡಿ, ’ದೇಶದಲ್ಲಿಯೇ ಮಾದರಿ ಎನ್ನಿಸುವ ಹೈಟೈಕ್ ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆ ₹150 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಈ ಮಾರುಕಟ್ಟೆ ಇಡೀ ಜಿಲ್ಲೆಗೆ ಒಂದು ಆಸ್ತಿಯಾಗಲಿದೆ’ ಎಂದು ಹೇಳಿದರು.

ಎಪಿಎಂಸಿಗಾಗಿ ಸುಮಾರು 25 ಎಕರೆ ಜಾಗವನ್ನು ಈಗಾಗಲೇ ಮೀಸಲಿಡಲಾಗಿದೆ. ಇನ್ನೂ ಹತ್ತು ಎಕರೆ ಜಾಗ ಸಿಗುವ ಸಂಭವ ಇದೆ. ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು. ಮಂಜೂರಾದ ಜಾಗವನ್ನು ಸ್ವಚ್ಛಗೊಳಿಸಲು ಎರಡು ಕೋಟಿಯನ್ನು ಸರ್ಕಾರ ಮಂಜೂರು ಮಾಡಿದೆ. ಬೇರೆ ರಾಜ್ಯ ಮತ್ತು ನಮ್ಮ ರಾಜ್ಯದ ಉತ್ತಮ ಎಪಿಎಂಸಿ ವ್ಯವಸ್ಥೆಯನ್ನು ಅಧ್ಯಯನ ಮಾಡಿ, ಅದಕ್ಕಿಂತ ಉತ್ತಮ ರೀತಿಯಲ್ಲಿ ಮಾರುಕಟ್ಟೆ ನಿರ್ಮಾಣ ಮಾಡುವುದಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.

ಕೋಲಾರ ಜಿಲ್ಲೆ ಕೃಷಿ ಆಧಾರಿತ ಜಿಲ್ಲೆಯಾಗಿದ್ದರೂ, ರೈತರ ಪರವಾಗಿ ಏನೂ ಮಾಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಜನಪ್ರತಿನಿಧಿಗಳು ರೈತರ ಸ್ವಾಭಿಮಾನ ಬದುಕಿಗೆ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ ಎಂಬ ಚುಚ್ಚು ಮಾತುಗಳು ಕೇಳಿ ಬರುತ್ತಿದ್ದವು. ಇಂತಹ ಸಂದರ್ಭದಲ್ಲಿ ಒಂದೂವರೆ ವರ್ಷದ ಹಿಂದೆಯೇ ಎಪಿಎಂಸಿ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಈ ಜಾಗ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಎಪಿಎಂಸಿಗೆ ಡಿಪಿಆರ್ ಮಾಡಬೇಕಾಗಿದೆ. ಈಗಾಗಲೇ ಎಪಿಎಂಸಿ ಬೋರ್ಡ್‌ ನಿರ್ಣಯ ಅಂಗೀಕರಿಸಿದೆ. ಈಗ ಜಾಗ ಹದ್ದುಬಸ್ತು ಮಾಡಿ ಕಾಂಪೌಂಡ್‌ ನಿರ್ಮಾಣವಾಗಲಿದೆ. ಶಾಸಕರ ಅನುದಾನದಲ್ಲಿ ಎಪಿಎಂಸಿ ಕಚೇರಿ ನಿರ್ಮಾಣ ಮಾಡಲಾಗುವುದು. ಎರಡು ಕೊಳವೆ ಬಾವಿಗಳನ್ನು ಕೊರೆಯಲಾಗುವುದು’ ಎಂದು ಮಾಹಿತಿ ನೀಡಿದರು.

ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ ಮಾತನಾಡಿ, ನಮ್ಮ ತಾಲ್ಲೂಕಿನ ರೈತರು ಬೆಳೆ ಮಾರಾಟಕ್ಕೆ ನೆರೆಯ ಆಂಧ್ರಕ್ಕೆ ಹೋಗುವ ಪರಿಸ್ಥಿತಿ ಇತ್ತು. ಇನ್ನು ಮುಂದೆ ನಮ್ಮಲ್ಲಿಯೇ ಬೆಳೆ ಮಾರಾಟಕ್ಕೆ ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂದರು.

ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ, ಎಪಿಎಂಸಿ ಉಪಾಧ್ಯಕ್ಷ ಆನಂದಮೂರ್ತಿ, ಮುಖಂಡರಾದ ಅ.ಮು.ಲಕ್ಷ್ಮಿನಾರಾಯಣ, ನಂಜುಂಡಗೌಡ, ಕೃಷ್ಣಮೂರ್ತಿ, ಸುರೇಂದ್ರ ಗೌಡ, ಶ್ರೀನಿವಾಸ ರೆಡ್ಡಿ, ಪದ್ಮನಾಭರೆಡ್ಡಿ, ನಾರಾಯಣಸ್ವಾಮಿ, ಪ್ರಕಾಶ್ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT