ಬುಧವಾರ, ಜೂನ್ 16, 2021
22 °C
ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ರಘುನಾಥ್‌ ಕಳವಳ

ಮಾನವ ಕಳ್ಳ ಸಾಗಾಣಿಕೆ ಸಾಮಾಜಿಕ ಪಿಡುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮಕ್ಕಳು ಮತ್ತು ಮಹಿಳೆಯರನ್ನು ಅಪಹರಿಸಿ ಕಾನೂನುಬಾಹಿರ ಹಾಗೂ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸುತ್ತಿರುವುದು ಬೇಸರದ ಸಂಗತಿ’ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್‌ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ವಕೀಲರ ಸಂಘ, ಬಚಪನ್ ಬಚಾವೋ ಆಂದೋಲನ, ಬುದ್ಧ ರೂರಲ್ ಡೆವಲಪ್‌ಮೆಂಟ್‌ ಸೊಸೈಟಿ ಸಹಯೋಗದಲ್ಲಿ ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು.

‘ಮಾನವ ಕಳ್ಳ ಸಾಗಾಣಿಕೆಯು ದೊಡ್ಡ ಸಾಮಾಜಿಕ ಪಿಡುಗು. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪಿಡುಗಿಗೆ ಬಲಿಪಶುವಾಗುತ್ತಿದ್ದಾರೆ. ಅಪಹೃತ ಮಕ್ಕಳನ್ನು ಅಪರಾಧ ಚಟುವಟಿಕೆಗಳಲ್ಲಿ ಹಾಗೂ ಭಿಕ್ಷಾಟನೆಯಲ್ಲಿ ತೊಡಗಿಸಲಾಗುತ್ತಿದೆ. ಇಂತಹ ಹೀನ ಕೃತ್ಯ ತಪ್ಪಿಸುವುದು ನಾಗರಿಕ ಸಮಾಜದ ಜವಾಬ್ದಾರಿ. ಅಪರಿಚಿತ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಪೊಲೀಸರ ಗಮನಕ್ಕೆ ತರಬೇಕು’ ಎಂದು ಸಲಹೆ ನೀಡಿದರು.

ದೊಡ್ಡ ದುರಂತ: ‘ಮನುಷ್ಯನ ಮಾನವೀಯ ಗುಣಗಳಿಗೆ ಚ್ಯುತಿ ಬಂದರೆ ಅದೇ ಮಾನವ ಕಳ್ಳ ಸಾಗಾಣಿಕೆ. ಮನುಷ್ಯನನ್ನು ಮನುಷ್ಯನಾಗಿ ಕಾಣದೆ ಮಾರಾಟದ ವಸ್ತುವಾಗಿ ಕಾಣುತ್ತಿರುವುದು ದೊಡ್ಡ ದುರಂತ. ಜಗತ್ತಿನಲ್ಲಿ ಇಂದು ಮಾನವ ಮತ್ತು ಮಾನವನ ಅಂಗಾಂಗಗಳನ್ನು ಮಾರಾಟ ಮಾಡಲಾಗುತ್ತಿದೆ’ ಎಂದು ಬಚಪನ್ ಬಜಾವೋ ಆಂದೋಲನದ ರಾಜ್ಯ ಸಂಯೋಜಕ ಬಿನು ವರ್ಗೀಸ್ ವಿಷಾದಿಸಿದರು.

‘ಮಕ್ಕಳು ಮತ್ತು ಮಹಿಳೆಯರನ್ನು ವಿದೇಶಕ್ಕೆ ಮಾರಾಟ ಮಾಡಲಾಗುತ್ತಿದೆ. ಸಮಾಜಘಾತುಕ ಶಕ್ತಿಗಳು ಮಹಿಳೆಯರನ್ನು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿ ಹಣ ಸಂಪಾದಿಸುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದ ಆಸ್ತಿ: ‘ಮಕ್ಕಳು ದೇಶದ ಆಸ್ತಿ. ಆದ ಕಾರಣ ದುಶ್ಚಟಗಳಿಂದ ದೂರ ಉಳಿದು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು. ಸಾರ್ವಜನಿಕರು ಸಮಾಜದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ ಸಂಗತಿಯನ್ನು ಪೊಲೀಸರ ಗಮನಕ್ಕೆ ತಂದು ಅಪರಾಧ ಚಟುವಟಿಕೆ ತಡೆಯಲು ಸಹಕರಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ್ ಗಜಾನನಭಟ್ ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಪವನೇಶ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್‌.ಗಂಗಾಧರ್‌, ಕ್ಯಾನ್ ನೆಟ್‌ವರ್ಕ್‌ ಅಧ್ಯಕ್ಷ ಟಿ.ನಾರಾಯಣಸ್ವಾಮಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪಿ.ಶ್ರೀಧರ್, ಪ್ರಧಾನ ಕಾರ್ಯದರ್ಶಿ ರಘುಪತಿಗೌಡ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್.ಚೌಡಪ್ಪ, ವಕೀಲ ಕೆ.ಧನರಾಜ್ ಪಾಲ್ಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು