ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟ ನಡೆಸದಿದ್ದರೆ ನೆಲೆಯಿರಲ್ಲ: ವಕೀಲ ವಿನಯ್ ಶ್ರೀನಿವಾಸನ್

Last Updated 15 ಮಾರ್ಚ್ 2020, 13:54 IST
ಅಕ್ಷರ ಗಾತ್ರ

ಕೋಲಾರ: ‘ಜನ ಸಿಎಎ ವಿರುದ್ಧ ಹೋರಾಟ ನಡೆಸದಿದ್ದರೆ ಮುಂದಿನ ದಿನಗಳಲ್ಲಿ ನೆಲೆ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಹೈಕೋರ್ಟ್ ವಕೀಲ ವಿನಯ್ ಶ್ರೀನಿವಾಸನ್ ತಿಳಿಸಿದರು.

ದಲಿತ ಸಂಘರ್ಷ ಸಮಿತಿಯಿಂದಭಾನುವಾರ ಹಮ್ಮಿಕೊಂಡಿದ್ದ ಸಂವಿಧಾನ ವಿರೋಧಿ ಎನ್‌ಪಿಆರ್, ಎಸ್‍ಆರ್‌ಸಿ, ಸಿಎಎ ಕಾರ್ಯಗಾರದಲ್ಲಿ ಮಾತನಾಡಿ, ‘ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನೇಕ ಪಕ್ಷಗಳು ಅಧಿಕಾರ ನಡೆಸಿವೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಜನವಿರೋಧಿ ನೀತಿಗಳನ್ನು ಅನುಸರಿಸಿಕೊಂಡು ಬರುತ್ತಿದ್ದು, ಇದರಿಂದ ಜನಕ್ಕೆ ನೆಮ್ಮದಿಯಿಲ್ಲದಂತಾಗಿದೆ’ ಎಂದು ವಿಷಾದಿಸಿದರು.

‘ಬಿ.ಆರ್.ಅಂಬೇಡ್ಕರ್ ರಚನೆ ಮಾಡಿರುವ ಸಂವಿಧಾನದ ಅಡಿಯಲ್ಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿದೆ. ಆಡಳಿತರೂಢ ಪಕ್ಷ ಬಿಜೆಪಿ ಏಕ ಪಕ್ಷೀಯ ತೀರ್ಮಾನ ಕೈಗೊಂಡು ಶೋಷಿತ, ಬಡವರ, ಅಲ್ಪ ಸಂಖ್ಯಾತರನ್ನು ದೇಶದಿಂದ ಹೊರ ಹಾಕಲು ಸಂಚು ರೂಪಿಸುತ್ತಿದೆ’ ಎಂದು ದೂರಿದರು.

‘ಏ.15ರಿಂದ ಎನ್‌ಪಿಆರ್ ಸಮೀಕ್ಷೆ ಆರಂಭವಾಗುತ್ತದೆ. ಇದಕ್ಕೆ ಜನನ ಪ್ರಮಾಣ ಪತ್ರ, ಹೆತ್ತವರ ಜನನ ಸ್ಥಳ ಮತ್ತು ದಿನಾಂಕಗಳ ಬಗ್ಗೆ ಮಾಹಿತಿ ಕೇಳುತ್ತಾರೆ ಎಂದು ವರದಿಯಾಗಿದೆ. ಜನಗಣತಿ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದರೂ, ಎನ್‌ಪಿಆರ್ ವೇಳಾ ಪಟ್ಟಿ ಬಿಡುಗಡೆ ಮಾಡಿಲ್ಲ, ಈ ಸಮೀಕ್ಷೆಯಲ್ಲಿ ಏನು ಮಾಹಿತಿ ಕೇಳುತ್ತೀರಿ ಎಂದು ಸರ್ಕಾರಕ್ಕೆ ಮಾಹಿತಿ ಕೇಳಿದ್ದರೂ ಕೊಡುವಲ್ಲಿ ವಿಫಲವಾಗಿದೆ’ ಎಂದು ಆರೋಪಿಸಿದರು.

‘ದೇಶದಲ್ಲಿ ಪ್ರತಿಯೊಬ್ಬರೂ ಸಮಾನತೆಯಿಂದ ಬದುಕು ಕಟ್ಟಿಕೊಳ್ಳಬೇಕು ಎಂಬುದು ಸಂವಿಧಾನ ಮೂಲ ಉದ್ದೇಶ. ಅಂಬೇಡ್ಕರ್ ಅವರು ಒಂದೇ ದಿನದಲ್ಲಿ ಸಂವಿಧಾನವನ್ನು ರಚಿಸಿಲ್ಲ. ತಜ್ಞರೊಂದಿಗೆ ಚರ್ಚಿಸಿ ಮುಂದಿನ ಪಿಳೀಗೆಯ ಹಿತದೃಷ್ಟಿಯಿಂದ ಹಾಗೂ ಮುಂದಾಲೋಚನೆ ಇಟ್ಟುಕೊಂಡು ರಚನೆ ಮಾಡಿದ್ದಾರೆ. ಇದರ ಜ್ಞಾನ ಇಲ್ಲದವರು ಕಾಯ್ದೆಗಳನ್ನು ತಿದ್ದುಪಡಿ ಮಾಡುತ್ತಿದ್ದಾರೆ, ಹೋರಾಟದ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಿದ್ದರಾಗಬೇಕು’ ಎಂದು ಎಚ್ಚರಿಸಿದರು.

ಸಮಿತಿಯ ಸಂಸ್ಥಾಪಕ ನಾಗರಾಜ್ ಮಾತನಾಡಿ, ‘ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಿಎಎ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಜನರನ್ನು ಬುರ್ದಲಗೊಳಿಸಲು ಮುಂದಾಗಿದೆ’ ಎಂದು ಆರೋಪಿಸಿದರು.

‘ಸಂವಿಧಾನದಡಿ ಜನ ಜೀವನ ರೂಪಿಸಿಕೊಳ್ಳುತ್ತಿದ್ದಾರೆ, ಮತ ಪಡೆದು ಅಧಿಕಾರಕ್ಕೆ ಬಂದಿರುವ ವ್ಯಕ್ತಿಗಳು ಪೌರತ್ವ ಕುರಿತು ದಾಖಲೆ ಕೇಳುತ್ತಿದ್ದಾರೆ. ಅವರಿಗೆ ಮತ ಹಾಕಿರುವುದು ದಾಖಲೆಯಲ್ಲವೆ’ ಎಂದು ಪ್ರಶ್ನಿಸಿದರು.

‘ಜೀವನ ರೂಪಿಸಿಕೊಳ್ಳಲು ದೇಶಕ್ಕೆ ಅನಧಿಕೃತವಾಗಿ ಎಷ್ಟು ಮಂದಿ ಆಗಮಿಸಿದ್ದಾರೆ ಎಂಬುದರ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ. ಆದರೆ ಅವರ ವಿರುದ್ಧ ಯಾಕೆ ಕ್ರಮಕೈಗೊಳ್ಳಲು ಮುಂದಾಗುತ್ತಿಲ್ಲ’ ಎಂದು ಪ್ರಶ್ನಿಸಿದರು.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆ ವಿ.ಗೀತಾ, ದಲಿತ ಸಂಘರ್ಷ ಸಮಿತಿ ಮುಖಂಡರಾದ ಹ.ಮಾ.ರಾಮಚಂದ್ರಪ್ಪ, ನಯೂಮ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT