ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಹಣ: ಐ.ಟಿ ತನಿಖೆಗೆ ಪತ್ರ

ತೆರಿಗೆ ವಂಚನೆ– ಡಬ್ಲಿಂಗ್‌ ದಂಧೆಯ ಶಂಕೆ
Last Updated 2 ಸೆಪ್ಟೆಂಬರ್ 2020, 14:15 IST
ಅಕ್ಷರ ಗಾತ್ರ

ಕೋಲಾರ: ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿ ₹ 2.95 ಕೋಟಿ ವಶಪಡಿಸಿಕೊಂಡಿರುವ ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸುವಂತೆ ಕೋರಿ ಜಿಲ್ಲೆಯ ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದಿದ್ದಾರೆ.

ಜಿಲ್ಲೆಯ ಶ್ರೀನಿವಾಸಪುರ ಠಾಣೆ ಪೊಲೀಸರು ದಾಖಲೆಪತ್ರಗಳಿಲ್ಲದೆ ಹಣ ಸಾಗಿಸುತ್ತಿದ್ದ ಆರೋಪದ ಮೇಲೆ ಅಮರನಾಥ್‌ ಮತ್ತು ಚಂದ್ರಶೇಖರ್‌ ಎಂಬುವರನ್ನು ಮಂಗಳವಾರ ರಾತ್ರಿ ಬಂಧಿಸಿ ಹಣ ವಶಪಡಿಸಿಕೊಂಡಿದ್ದರು. ಪ್ರಕರಣದ ಮತ್ತೊಬ್ಬ ಆರೋಪಿ ಮುಳಬಾಗಿಲು ತಾಲ್ಲೂಕಿನ ರಾಮಪ್ಪ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರಿದಿದೆ.

ಈ ಮೂವರು ಮಂಗಳವಾರ ರಾತ್ರಿ ಕಾರಿನಲ್ಲಿ ಹಣ ತೆಗೆದುಕೊಂಡು ವ್ಯಕ್ತಿಯೊಬ್ಬರಿಗೆ ಕೊಡಲು ಶ್ರೀನಿವಾಸಪುರ ರಸ್ತೆಯ ರೋಜರನಹಳ್ಳಿ ಗೇಟ್‌ ಬಳಿಗೆ ಹೋಗಿದ್ದರು. ಹಣ ತೆಗೆದುಕೊಳ್ಳಬೇಕಿದ್ದ ವ್ಯಕ್ತಿ ಸ್ಥಳಕ್ಕೆ ಬಾರದ ಕಾರಣ ಆರೋಪಿಗಳು ರಾತ್ರಿ 11 ಗಂಟೆವರೆಗೂ ಅಲ್ಲಿಯೇ ಕಾಯುತ್ತಾ ನಿಂತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ರಮ ಹಣ ಸಾಗಣೆ ಸಂಬಂಧ ಬಾತ್ಮಿದಾರರು ನೀಡಿದ ಖಚಿತ ಮಾಹಿತಿ ಆಧರಿಸಿ ರೋಜರನಹಳ್ಳಿ ಗೇಟ್‌ ಬಳಿಗೆ ಹೋಗುತ್ತಿದ್ದಂತೆ ಆರೋಪಿ ರಾಮಪ್ಪ ಕಾರಿನಿಂದ ಕೆಳಗಿಳಿದು ಪರಾರಿಯಾದ. ನಂತರ ಅಮರನಾಥ್‌ ಮತ್ತು ಚಂದ್ರಶೇಖರ್‌ ಅವರನ್ನು ಬಂಧಿಸಿ ಹಣ ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

‘ಬಂಧಿತರು ಹಣ ದ್ವಿಗುಣಗೊಳಿಸುವ (ಡಬ್ಲಿಂಗ್‌) ದಂಧೆಯ ವ್ಯಕ್ತಿಗೆ ಹಣ ಕೊಡಲು ಹೋಗಿದ್ದರು ಎಂಬ ಶಂಕೆಯಿದೆ. ಮತ್ತೊಂದೆಡೆ ತೆರಿಗೆ ವಂಚಿಸಿ ಸಂಪಾದಿಸಿದ ಕಪ್ಪು ಹಣವೆಂಬ ಅನುಮಾನವಿದೆ. ಪರಾರಿಯಾಗಿರುವ ಆರೋಪಿ ರಾಮಪ್ಪನ ಬಂಧನ ನಂತರ ಪ್ರಕರಣದ ಬಗ್ಗೆ ಸಮಗ್ರ ಮಾಹಿತಿ ಸಿಗಲಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಂಧಿತರಿಂದ ₹ 500 ಹಾಗೂ ₹ 2 ಸಾವಿರ ಮುಖಬೆಲೆಯ ನೋಟುಗಳು, ಕೃತ್ಯಕ್ಕೆ ಬಳಸಿದ ಕಾರು ಜಪ್ತಿ ಮಾಡಲಾಗಿದೆ. ಬಂಧಿತರ ವಿರುದ್ಧ ಅಕ್ರಮ ಹಣ ಸಾಗಣೆ ಮತ್ತು ಕಳವಿನ ಅನುಮಾನ ಆರೋಪದಡಿ ಸಿಆರ್‌ಪಿಸಿ ಸೆಕ್ಷನ್‌ 41ಡಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಗೆ ನ್ಯಾಯಾಲಯದ ಅನುಮತಿ ಪಡೆದು ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ಭಿನ್ನಾಭಿಪ್ರಾಯ: ಅಮರನಾಥ್‌ ಅವರು ಕೋಲಾರದ ಎಂ.ಜಿ ರಸ್ತೆಯಲ್ಲಿ ಸ್ಟುಡಿಯೋ ಇಟ್ಟುಕೊಂಡಿದ್ದಾರೆ. ಚಂದ್ರಶೇಖರ್‌ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುತ್ತಾರೆ. ಆರೋಪಿ ರಾಮಪ್ಪನ ಪೂರ್ವಾಪರದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

‘ಬಂಧಿತರು ತಮ್ಮ ಸ್ನೇಹಿತರ ಜತೆ ಸೇರಿ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದರು. ವ್ಯವಹಾರದಲ್ಲಿ ಸಂಪಾದಿಸಿದ ಹಣ ಹಂಚಿಕೊಳ್ಳುವ ವಿಷಯವಾಗಿ ಬಂಧಿತರು ಮತ್ತು ಅವರ ಸ್ನೇಹಿತರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT