ಗುರುವಾರ , ಫೆಬ್ರವರಿ 25, 2021
20 °C

ಅಧಿಕಾರಿಗಳ ಅಕ್ರಮ: ತನಿಖೆಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ನೀಡಲಾಗುತ್ತಿರುವ ಸಹಾಯಧನದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದ್ದು, ಈ ಸಂಬಂಧ ತನಿಖೆ ಮಾಡಬೇಕೆಂದು ಒತ್ತಾಯಿತಿ ಕರ್ನಾಟಕ ರೈತ ಸೇನೆ ಸದಸ್ಯರು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಇಲ್ಲಿ ಶನಿವಾರ ಮನವಿ ಸಲ್ಲಿಸಿದರು.

‘ಪಾಲಿಹೌಸ್ ಮತ್ತು ನೆಟ್‌ಹೌಸ್‌ ಸಹಾಯಧನ ನೀಡಿಕೆಯಲ್ಲಿ ಜಿಲ್ಲೆಯಾದ್ಯಂತ ಅವ್ಯವಹಾರ ನಡೆದಿದೆ. ಇಲಾಖೆ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಅರ್ಹ ಫಲಾನುಭವಿಗಳ ಬದಲಿಗೆ ಅನರ್ಹರಿಗೆ ಪಾಲಿಹೌಸ್‌ ಮತ್ತು ನೆಟ್‌ಹೌಸ್‌ ಮಂಜೂರು ಮಾಡಲಾಗಿದೆ’ ಎಂದು ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್‌ಗೌಡ ಆರೋಪಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಸಮುದಾಯದ ಅರ್ಹ ಫಲಾನುಭವಿ ರೈತರ ಹೆಸರಿನಲ್ಲಿ ಸಹಾಯಧನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳು ನಕಲಿ ದಾಖಲೆಪತ್ರ ಸೃಷ್ಟಿಸಿ ಅಕ್ರಮವಾಗಿ ಬೇರೆಯವರ ಹೆಸರಿಗೆ ಸಹಾಯಧನ ವರ್ಗಾವಣೆ ಮಾಡಿದ್ದಾರೆ’ ಎಂದು ದೂರಿದರು.

‘ನೈಜ ಫಲಾನುಭವಿಗಳು ಸರ್ಕಾರದ ಸಹಾಯಧನ ಸವಲತ್ತಿನಿಂದ ವಂಚಿತರಾಗಿದ್ದಾರೆ. ಕೃಷಿ ಹೊಂಡ ನಿರ್ಮಾಣದಲ್ಲೂ ಭಾರಿ ಭ್ರಷ್ಟಾಚಾರ ನಡೆದಿದೆ. ಫಲಾನುಭವಿಗಳು ಬಿಲ್ ಮಂಜೂರಾಗುವ ತನಕ ಕೃಷಿ ಹೊಂಡ ನಿರ್ಮಿಸಿಕೊಂಡು ಬಳಿಕ ಕೃಷಿ ಹೊಂಡಗಳನ್ನು ಮುಚ್ಚಿ ಅದೇ ಜಾಗದಲ್ಲಿ ಮತ್ತೆ ಕೃಷಿ ಹೊಂಡಗಳನ್ನು ನಿರ್ಮಿಸಿ ಹಣ ದೋಚಿದ್ದಾರೆ’ ಎಂದು ಆರೋಪಿಸಿದರು.

‘ಇಲಾಖೆಯ ಎಲ್ಲಾ ಅಕ್ರಮಗಳ ಸಂಬಂಧ ಸಮಗ್ರ ತನಿಖೆ ನಡೆಸಬೇಕು. ಇಲ್ಲದಿದ್ದರೆ ತೋಟಗಾರಿಕೆ ಇಲಾಖೆ ಕಚೇರಿ ಎದುರು ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ರೈತ ಸೇನೆ ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ.ವಿ ಶ್ರೀಧರ್, ಸಂಚಾಲಕ ಮಕ್ಸೂದ್ ಪಾಷಾ, ಸಂಘಟನಾ ಕಾರ್ಯದರ್ಶಿ ವೆಂಕಟಾಚಲಪತಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು