ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆ ಸ್ಪರ್ಧೆಗೆ ಹೆಚ್ಚಿದ ಒತ್ತಡ

ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಬೇಡಿಕೆ: ನಿಖಿಲ್
Published 6 ಮಾರ್ಚ್ 2024, 19:51 IST
Last Updated 6 ಮಾರ್ಚ್ 2024, 19:51 IST
ಅಕ್ಷರ ಗಾತ್ರ

ಕೋಲಾರ: ಮಂಡ್ಯ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಎಚ್‌.ಡಿ. ಕುಮಾರಸ್ವಾಮಿ ಸ್ಪರ್ಧೆಗೆ ಕಾರ್ಯಕರ್ತರು ಮತ್ತು ಮುಖಂಡರಿಂದ ಭಾರಿ ಒತ್ತಾಯ ಬರುತ್ತಿದೆ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ. 

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ, ಕೋಲಾರ, ಹಾಸನ, ತುಮಕೂರು ಸೇರಿದಂತೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್‌ ಅತಿ ಹೆಚ್ಚು ಮತ ಪಡೆದಿದೆ. ಹೀಗಾಗಿ, ಪಕ್ಷದ ವರಿಷ್ಠರು ಈ ಕ್ಷೇತ್ರ ಬಿಟ್ಟು ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೈತ್ರಿಕೂಟದಲ್ಲಿ ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ’ ಎಂದರು.

‘ಕುಮಾರಸ್ವಾಮಿ ಅವರ ಸ್ಪರ್ಧೆಗೆ ಒತ್ತಡ ಹೆಚ್ಚಿದೆ. ಆದರೆ, ರಾಜ್ಯ ರಾಜಕಾರಣ ಬಿಟ್ಟು ದೆಹಲಿಗೆ ಹೋಗಬೇಕೆ ಅಥವಾ ಬೇಡವೆ ಎಂದು ಅವರು ಇನ್ನೂ ಯೋಚಿಸುತ್ತಿದ್ದಾರೆ. ರಾಷ್ಟ್ರೀಯ ನಾಯಕರ ಸಲಹೆ, ನಿರ್ದೇಶನ ಹಾಗೂ ಪಕ್ಷದ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದರು.

‘ಜೆಡಿಎಸ್‌ ಚಿಹ್ನೆ ಅಡಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಸ್ಪರ್ಧಿಸಲಿದ್ದಾರೆ. ಹಾಗೆಯೇ ಬಿಜೆಪಿ ಚಿಹ್ನೆ ಅಡಿ ಅವರ ಪಕ್ಷದ ಅಭ್ಯರ್ಥಿಗಳೇ ಸ್ಪರ್ಧೆ ಮಾಡಲಿದ್ದಾರೆ. ಇದರಲ್ಲಿ ಗೊಂದಲ ಬೇಡ’ ಎಂದು ಹೇಳಿದರು.

‘ಕೋಲಾರ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದ ಇದ್ದಾರೆ. ಹೀಗಾಗಿ, ಅಧಿಕೃತ ಪಟ್ಟಿ ಬಿಡುಗಡೆ ಆಗುವವರೆಗೆ ಕಾಯಬೇಕು. ಕೆಲವೇ ದಿನಗಳಲ್ಲಿ ದೆಹಲಿಗೆ ತೆರಳಲಿದ್ದೇವೆ. ಜೆಡಿಎಸ್‌ ಹಾಗೂ ಬಿಜೆಪಿಯ ಜಂಟಿ ಸಭೆಗಳು ನಡೆಯಲಿವೆ’ ಎಂದರು.

‘ನಾನು ಪಕ್ಷದ ಬೆಳವಣಿಗೆ ಹಾಗೂ ಸಂಘಟನೆಯಲ್ಲಿ ತೊಡಗಿರುವುದರಿಂದ ಈ ಬಾರಿ ಸ್ಪರ್ಧಿಸುವುದಿಲ್ಲ. ಮಂಡ್ಯದಲ್ಲಿ ಸ್ಥಳೀಯ ಹಿರಿಯ ನಾಯಕರಿಗೆ ಅವಕಾಶ ಕಲ್ಪಿಸಲಾಗುವುದು. ನನಗಿನ್ನೂ ವಯಸ್ಸಿದೆ, ಪಕ್ಷ ಕಟ್ಟಬೇಕಿದೆ. ಕಾರ್ಯಕರ್ತರ ಜೊತೆಗೂಡಿ ಕೆಲಸ ಮಾಡುವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT