ಭಾನುವಾರ, ಸೆಪ್ಟೆಂಬರ್ 19, 2021
28 °C
ಹೈಕಮಾಂಡ್‌ಗೆ ಮನವಿ ಸಲ್ಲಿಸುತ್ತೇವೆ: ಕಾಂಗ್ರೆಸ್‌ ಮುಖಂಡರ ಹೇಳಿಕೆ

ಪಕ್ಷದ್ರೋಹಿಗಳ ಉಚ್ಛಾಟನೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್.ಮುನಿಯಪ್ಪರ ವಿರುದ್ಧ ಕೆಲಸ ಮಾಡಿದ ನಾಯಕರನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಹೈಕಮಾಂಡ್‌ಗೆ ಮನವಿ ಸಲ್ಲಿಸುತ್ತೇವೆ’ ಎಂದು ನಗರಾಭಿವೃದ್ಧಿ ಪ್ರಾಧಿಕಾರದ (ಕೆಯುಡಿಎ) ಮಾಜಿ ಅಧ್ಯಕ್ಷ ಅತಾವುಲ್ಲಾ ಖಾನ್‌ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹ ಬಗೆದು ವಿರೋಧ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡದ ನಾಯಕರ ಬಗ್ಗೆ ಕಾಂಗ್ರೆಸ್‌ನ ಸತ್ಯಶೋಧನಾ ಸಮಿತಿಗೆ ದೂರು ನೀಡಿದ್ದೆವು. ಆದರೆ, ಪಕ್ಷದ್ರೋಹಿಗಳ ವಿರುದ್ಧ ಈವರೆಗೆ ಶಿಸ್ತುಕ್ರಮ ಜರುಗಿಸದಿರುವುದರಿಂದ ನಿಷ್ಠಾವಂತ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ನೋವಾಗಿದೆ’ ಎಂದರು.

‘ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರಿಗೆ ದೂರು ನೀಡಿ ಪಕ್ಷದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇವೆ. ಆದರೆ, ಅವರು ಸತ್ಯಶೋಧನಾ ಸಮಿತಿಯ ವರದಿ ಕೈಸೇರಿಲ್ಲ. ಈ ಬಗ್ಗೆ ಕೇಂದ್ರ ಮಟ್ಟದ ಉಸ್ತುವಾರಿ ಸಮಿತಿಯು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ’ ಎಂದು ನಗರ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಪ್ರಸಾದ್‌ಬಾಬು ವಿವರಿಸಿದರು.

‘ಕಾಂಗ್ರೆಸ್ ಶಾಸಕರಾದ ಕೆ.ಆರ್.ರಮೇಶ್‌ಕುಮಾರ್, ಎಸ್.ಎನ್.ನಾರಾಯಣಸ್ವಾಮಿ, ವಿ.ಮುನಿಯಪ್ಪ, ಮಾಜಿ ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್‌ ಸದಸ್ಯ ನಸೀರ್‌ ಅಹಮ್ಮದ್‌ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದಾರೆ. ಹೀಗಾಗಿ ವರಿಷ್ಠರು ಅವರೆಲ್ಲರನ್ನೂ ಉಚ್ಛಾಟಿಸಿ ಶಿಸ್ತು ಸಂದೇಶ ರವಾನಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ಎಲ್.ಖಲೀಲ್ ಹೇಳಿದರು.

ಪ್ರಮುಖ ಪಾತ್ರ: ‘ಮುನಿಯಪ್ಪ ಅವರು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ 4ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಎಂದಿಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಕೆ.ಜಯದೇವ್ ಅಭಿಪ್ರಾಯಪಟ್ಟರು.

‘ಕೆ.ಸಿ.ವೇಣುಗೋಪಾಲ್ ಪಕ್ಷದ್ರೋಹಿಗಳ ಪರವಾಗಿಯೇ ವರಿಷ್ಠರಿಗೆ ವರದಿ ಕೊಟ್ಟಿದ್ದಾರೆ. ವಾಸ್ತವ ಸಂಗತಿಯನ್ನು ವರಿಷ್ಠರ ಗಮನಕ್ಕೆ ತಂದು ಉಸ್ತುವಾರಿ ಸ್ಥಾನದಿಂದ ವೇಣುಗೋಪಾಲ್‌ ಅವರನ್ನು ಬದಲಾವಣೆ ಮಾಡುವಂತೆ ಕೋರುತ್ತೇವೆ’ ಎಂದರು.

ಪಕ್ಷದ ಮುಖಂಡರಾದ ಎಚ್.ವಿ.ಕುಮಾರ್, ಪ್ಯಾರೇಜಾನ್, ಶ್ರೀನಿವಾಸ್, ನಾಗರಾಜ್, ರಾಮಣ್ಣ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು