ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಜಾ ಆದೇಶ ಹಿಂಪಡೆಯಲು ಒತ್ತಾಯ

ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ಸದಸ್ಯರ ಪ್ರತಿಭಟನೆ
Last Updated 20 ಮೇ 2022, 15:40 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಬೇತಮಂಗಲ ಹೋಬಳಿ ವ್ಯಾಪ್ತಿಯ ಐಸಂದ್ರ ಮಿಟ್ಟೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಸರೋಜಮ್ಮ ಹಾಗೂ ಸಹಾಯಕಿ ಮಂಜುಳಾ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ಸದಸ್ಯರು ಇಲ್ಲಿ ಶುಕ್ರವಾರ ಪ್ರತಿಭಟನೆ ಮಾಡಿದರು.

‘ಸರೋಜಮ್ಮ ಮತ್ತು ಮಂಜುಳಾ ಅವರು 28 ವರ್ಷ ಸೇವೆ ಸಲ್ಲಿಸಿದ್ದು, ಯಾವುದೋ ವೈಯುಕ್ತಿಕ ವಿಚಾರಕ್ಕೆ ಜಗಳವಾಡಿದ ಸಂಗತಿ ಆಧರಿಸಿ ಬೇತಮಂಗಲ ಸಿಡಿಪಿಒ ನಾಗರತ್ನ ಅವರಿಬ್ಬರ ವಿರುದ್ಧ ಶಿಸ್ತುಕ್ರಮ ಜರುಗಿಸಿದ್ದಾರೆ. ಇದು ಕಾನೂನಾತ್ಮಕವಾಗಿ ಸರಿಯಲ್ಲ' ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ ಇಲಾಖೆಯಲ್ಲಿ ಸಾಕಷ್ಟು ಅಕ್ರಮ ನಡೆಸಿದ್ದಾರೆ. ಆದರೆ, ಅವರ ವಿರುದ್ಧ ಶಿಸ್ತುಕ್ರಮವಿಲ್ಲ. ಪಾಲಿ ಮತ್ತು ಅವರ ಆಪ್ತ ಅಧಿಕಾರಿಗಳ ತಂಡಕ್ಕೆ ಅಂಗನವಾಡಿ ಕಾರ್ಯಕರ್ತೆ ಹುದ್ದೆ ನೇಮಕಕ್ಕೆ ₹ 2 ಲಕ್ಷ ಲಂಚ ಕೊಡಬೇಕಿದೆ’ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ಅಧ್ಯಕ್ಷ ಜಿ.ಆರ್‌.ಶಿವಶಂಕರ್ ಆರೋಪಿಸಿದರು.

‘ಸಿಡಿಪಿಒ ನಾಗರತ್ನಮ್ಮ ಅವರು ಪಾಲಿ ಅವರೊಂದಿಗೆ ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ಆದರೂ ನಾಗರತ್ನಮ್ಮರ ವಿರುದ್ಧ ಶಿಸ್ತುಕ್ರಮ ಜರುಗಿಸಿಲ್ಲ. ಆದರೆ, ಕೆಳ ಹಂತದ ಸಿಬ್ಬಂದಿ ಶಿಸ್ತುಕ್ರಮ ಕೈಗೊಂಡಿದ್ದು, ಹಿರಿಯ ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ದೂರಿದರು.

ಅನುಮಾನಕ್ಕೆ ಎಡೆ: ‘ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕಿ ವಿರುದ್ಧ ಆರೋಪ ಕೇಳಿಬಂದರೆ ತನಿಖೆ ಮಾಡಿ ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಿ ನಂತರ ಕಾನೂನು ಕ್ರಮ ಕೈಗೊಳ್ಳಬೇಕು. ಆದರೆ, ಸರೋಜಮ್ಮ ಮತ್ತು ಮಂಜುಳಾ ಅವರ ವಿರುದ್ಧ ಆರೋಪ ಕೇಳಬಂದ ತಕ್ಷಣ ತನಿಖೆ ನಡೆಸದೆ ಕೆಲಸದಿಂದ ವಜಾಗೊಳಿಸಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ’ ಎಂದು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ.ಪ್ರಭಾವತಿ ಹೇಳಿದರು.

‘ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಶೇ 40ರ ಪರ್ಸೆಂಟೇಜ್‌ ಮೀರಿ ಕಮಿಷನ್‌ ದಂದೆ ನಡೆಯುತ್ತಿದೆ. ಭ್ರಷ್ಟ ಅಧಿಕಾರಿಗಳಾದ ಪಾಲಿ ಮತ್ತು ಸಿಡಿಪಿಒ ನಾಗರತ್ನ ಅವರನ್ನು ವರ್ಗಾವಣೆ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆ ಸರೋಜಮ್ಮ ಹಾಗೂ ಸಹಾಯಕಿ ಮಂಜುಳಾ ಅವರನ್ನು ‍ಪುನಃ ಕೆಲಸಕ್ಕೆ ತೆಗೆದುಕೊಳ್ಳಬೇಕು. ಇಲ್ಲವಾದರೆ ಬೆಂಗಳೂರಿನಲ್ಲಿ ಹೋರಾಟ ನಡೆಸುತ್ತೇವೆ’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಎಂ.ಸರಸ್ವತಮ್ಮ, ಕಾರ್ಯದರ್ಶಿ ಚಿನ್ನಮ್ಮ, ಉಪಾಧ್ಯಕ್ಷೆ ಗೀತಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT