ಭಾನುವಾರ, ಆಗಸ್ಟ್ 18, 2019
25 °C
ಗ್ರಾಮ ಲೆಕ್ಕಿಗರ ಸಂಘದಿಂದ ಧರಣಿ

ಕೆಲಸದ ಒತ್ತಡ ವಿಮುಕ್ತಿಗೆ ಒತ್ತಾಯ

Published:
Updated:
Prajavani

ಕೋಲಾರ: ಅನ್ಯ ಇಲಾಖೆಯ ಕೆಲಸದ ಒತ್ತಡದಿಂದ ಗ್ರಾಮ ಲೆಕ್ಕಾಧಿಕಾರಿಗಳಿಗೆ ವಿಮುಕ್ತಿ ಕೊಡಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಸದಸ್ಯರು ನಗರದ ಜಿಲ್ಲಾಡತ ಭವನದ ಎದುರು ಬುಧವಾರ ಧರಣಿ ನಡೆಸಿದರು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಮಾಯಿಸಿದ ಗ್ರಾಮ ಲೆಕ್ಕಿಗರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧರಣಿ ನಡೆಸಿದರು, ಆನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ರಾಜೇಂದ್ರ ಪ್ರಸಾದ್ ಮಾತನಾಡಿ, ‘ಗ್ರಾಮ ಲೆಕ್ಕಿಗರಿಗೆ ರಕ್ಷಣೆಯಿಲ್ಲದಂತಾಗಿದೆ, ಬೇರೆ ಇಲಾಖೆಗಳ ಕೆಲಸದ ಒತ್ತಡ ಹೇರುತ್ತಿರುವುದರಿಂದ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಎದುರಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಗ್ರಾಮ ಸಹಾಯಕರ ಹುದ್ದೆಯನ್ನು ಖಾಯಂಗೊಳಿಸಬೇಕು, ಗ್ರಾಮ ಲೆಕ್ಕಾಧಿಕಾರಿಗಳ ಪ್ರಯಾಣ ಭತ್ಯೆ ದರವನ್ನು ₨ 1,000ಕ್ಕೆ ಹೆಚ್ಚಿಸಬೇಕು, ಬೆಳೆ ಸಮೀಕ್ಷೆಗೆ ಮೊಬೈಲ್ ಆ್ಯಪ್ ಬಳಸಬಾರದು, ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು, ಗ್ರಾಮ ಸಹಾಯಕ ಹುದ್ದೆಯನ್ನು ಖಾಯಂಗೊಳಿಸಬೇಕು ಎಂದು ಕೋರಿದರು.

‘ಗ್ರಾಮ ಲೆಕ್ಕಾಧಿಕಾರಿಗಳಿಗೆ ಜಾಬ್ ಕಾರ್ಡ್ ನೀಡಬೇಕು, ಕಾಲ ಕಾಲಕ್ಕೆ ಬಡ್ತಿ ನೀಡಬೇಕು, ಸಮಾನ ಹುದ್ದೆಗೆ ವೇತನ ನೀಡಬೇಕು, ತಾಂತ್ರಿಕ ಕೆಲಗಳಿಂದ ಮುತ್ತಿ ನೀಡಬೇಕು, ಗ್ರಾಮ ಲೆಕ್ಕಾಧಿಕಾರಿಗಳಿಗೆ ವಸತಿ ಗೃಹ ವ್ಯವಸ್ಥೆ ಮಾಡಬೇಕು, ಸಕಾಲ ವ್ಯವಸ್ಥೆಯಲ್ಲಿರುವ ರ್‌್ಯಾಂಕಿಂಗ್ ಪದ್ದತಿ ಕೈ ಬಿಡಬೇಕು’ ಎಂದು ಆಗ್ರಹಿಸಿದರು.

‘ಆರ್ಥಿಕ ಗಣತಿ, ಜೀತ ಪದ್ದತಿ ಸಮೀಕ್ಷೆ, ಬೆಳೆ ಹಾನಿ ಸಮೀಕ್ಷೆ, ಪಡಿತರ ಚೀಟಿ ಸಮೀಕ್ಷೆಗೆ ಗ್ರಾಮ ಲೆಕ್ಕಾಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಪ್ರಗತಿ ನಿಟ್ಟಿನಲ್ಲಿ ಗ್ರಾಮ ಲೆಕ್ಕಿಗರಿಗೆ ಅತಿಯಾದ ಒತ್ತಡ ಹೇರಲಾಗುತ್ತಿದೆ. ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಪಶು ಸಂಗೋಪನೆ, ತೋಟಗಾರಿಕೆ ರೇಷ್ಮೆ, ಇನ್ನಿತರ ಇಲಾಖೆಗಳ ಕೆಲಸಗಳಿಂದ ಗ್ರಾಮ ಲೆಕ್ಕಿಗರನ್ನು ವಿಮುಕ್ತಿ ಗೊಳಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ್, ಕಂದಾಯ ನೌಕರರ ಸಂಘದ ಅಧ್ಯಕ್ಷ ಬಿ.ಆರ್. ಮುನಿವೆಂಕಟಪ್ಪ, ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಲೋಕೇಶ್, ಖಜಾಂಚಿ ಜನಾರ್ಧನ್, ನವೀನ್ ಪಾಲ್ಗೊಂಡಿದ್ದರು.

Post Comments (+)