ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರವಧನ ಹೆಚ್ಚಳಕ್ಕೆ ಒತ್ತಾಯ: ಧರಣಿ

ಕೇಂದ್ರ– ರಾಜ್ಯ ಸರ್ಕಾರ ವಿಫಲ: ಅಂಗನವಾಡಿ ನೌಕರರ ಆಕ್ರೋಶ
Last Updated 9 ನವೆಂಬರ್ 2020, 15:20 IST
ಅಕ್ಷರ ಗಾತ್ರ

ಕೋಲಾರ: ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ಇಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

‘ಕೋವಿಡ್–19 ಭೀತಿ ನಡುವೆಯೂ ಅಂಗನವಾಡಿ ನೌಕರರು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಹಲವೆಡೆ ಕರ್ತವ್ಯ ನಿರ್ವಹಣೆ ವೇಳೆ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದಿದೆ. ನೌಕರರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಇದಕ್ಕೆ ಅನುಗುಣವಾಗಿ ಜೀವನ ನಿರ್ವಹಣಾ ವೆಚ್ಚ ಹೆಚ್ಚಿದೆ. ಈ ಕಾರಣಕ್ಕಾಗಿ ಗೌರವಧನ ಹೆಚ್ಚಿಸುವಂತೆ ಹಲವು ಬಾರಿ ಹೋರಾಟ ಮಾಡಿದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅಂಗನವಾಡಿ ನೌಕರರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಕಲ್ಪನಾ ದೂರಿದರು.

‘ಬಾಡಿಗೆ ಕಟ್ಟಡಗಳಲ್ಲಿರುವ ಅಂಗನವಾಡಿ ಕೇಂದ್ರಗಳ ಬಾಡಿಗೆ ಮತ್ತು ವಿದ್ಯುತ್‌ ಶುಲ್ಕ ಪಾವತಿಸಿಲ್ಲ. ಅಂಗನವಾಡಿ ನಿರ್ವಹಣಾ ವೆಚ್ಚದ ಬಿಲ್‌ ಮತ್ತು ನೌಕರರ ಗೌರವಧನ ಬಾಕಿ ಉಳಿಸಿಕೊಳ್ಳಲಾಗಿದೆ. ಇದರಿಂದ ಕಾರ್ಯಕರ್ತೆಯರ ಜೀವನ ನಿರ್ವಹಣೆಗೆ ಸಮಸ್ಯೆಯಾಗಿದೆ. ನೌಕರರು ಸ್ವಂತ ಹಣದಲ್ಲಿ ಆಹಾರ ಪದಾರ್ಥ ಖರೀದಿಸುತ್ತಿದ್ದಾರೆ’ ಎಂದು ಹೇಳಿದರು.

ಹಣದ ಕೊರತೆ: ‘ಮೊಟ್ಟೆ, ತರಕಾರಿ, ಆಹಾರ ಪದಾರ್ಥ ಖರೀದಿಸಲು ಹಣದ ಕೊರತೆಯಿದೆ. ಕಾರ್ಯಕರ್ತೆಯರು ತಮ್ಮ ಗೌರವಧನದಲ್ಲಿ ಮುಕ್ಕಾಲು ಭಾಗವನ್ನು ಆಹಾರ ಪದಾರ್ಥಗಳ ಖರೀದಿಗೆ ಮೀಸಲಿಡುವಂತಾಗಿದೆ. ಬಾಕಿ ಗೌರವಧನ ಮತ್ತು ಬಿಲ್‌ ಪಾವತಿಸುವಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಧರಣಿನಿರತರು ಅಸಮಾಧಾನ ವ್ಯಕ್ತಪಡಿಸಿದರು.

‘ಮಕ್ಕಳಿಗೆ ‘ಬಾಲ್ಯಾರಂಭದ ಪೋಷಣೆ ಮತ್ತು ಶಿಕ್ಷಣ ನೀತಿ’ (ಇಸಿಸಿಇ) ಪದ್ಧತಿಯಲ್ಲಿ ಶಿಕ್ಷಣ ನೀಡಬೇಕು. ನೌಕರರನ್ನು ಹೆಚ್ಚುವರಿ ಅವಧಿಗೆ ದುಡಿಸಿಕೊಳ್ಳಬಾರದು. ₹ 50 ಲಕ್ಷ ವಿಮೆ ಸೌಲಭ್ಯ ಕಲ್ಪಿಸಬೇಕು. ಗೌರವಧನ ₹ 21 ಸಾವಿರಕ್ಕೆ ಹೆಚ್ಚಿಸಬೇಕು ಮತ್ತು ಸುರಕ್ಷತಾ ಸಲಕರಣೆ ನೀಡಬೇಕು. ಬಸ್‌ ಪಾಸ್‌, ಆಹಾರ ಭತ್ಯೆ, ನಿವೃತ್ತಿ ವೇತನ ಕೊಡಬೇಕು. ಸೇವಾ ಜೇಷ್ಠತೆ ಆಧಾರದಲ್ಲಿ ಗೌರವಧನ ಪರಿಷ್ಕರಿಸಬೇಕು’ ಎಂದು ಮನವಿ ಮಾಡಿದರು.

26ಕ್ಕೆ ಮುಷ್ಕರ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ವಿರೋಧಿ ಕಾನೂನುಗಳನ್ನು ಜಾರಿಗೊಳಿಸುತ್ತಾ ಅಂಗನವಾಡಿ ನೌಕರರನ್ನು ಬೀದಿಪಾಲು ಮಾಡಲು ಹೊರಟಿವೆ. ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ದೈನಂದಿನ ಕೆಲಸ ಬಹಿಷ್ಕರಿಸಿ ನ.26ರಂದು ಮುಷ್ಕರ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಂಘದ ತಾಲ್ಲೂಕು ಘಟಕದ ಖಜಾಂಚಿ ಲಕ್ಷ್ಮೀದೇವಿ, ಪದಾಧಿಕಾರಿಗಳಾದ ರಾಜಮ್ಮ, ನೇತ್ರಾ, ಸುಜಾತಾ, ವೆಂಕಟಲಕ್ಷ್ಮೀ, ಗೌರಮ್ಮ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ, ಎಸ್‌ಎಫ್‌ಐ ರಾಜ್ಯ ಘಟಕದ ಕಾರ್ಯದರ್ಶಿ ವಾಸುದೇವರೆಡ್ಡಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT