ಸೋಮವಾರ, ಜನವರಿ 27, 2020
23 °C

ಅಂತರ್ಜಾತಿ ವಿವಾಹ– ಪ್ರೋತ್ಸಾಹಧನದ ಬಗ್ಗೆ ಮಾಹಿತಿ ಕೊಡಿ: ಶಾಸಕ ಕೆ.ಶ್ರೀನಿವಾಸಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಅಂತರ್ಜಾತಿ ವಿವಾಹವಾಗುವ ದಂಪತಿಗೆ ಸರ್ಕಾರದಿಂದ ಸಿಗುವ ಪ್ರೋತ್ಸಾಹಧನದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊಡಿ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಸಮಾಜದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಬೇಕು. ಈ ಉದ್ದೇಶಕ್ಕಾಗಿ ಸರ್ಕಾರ ಪ್ರೋತ್ಸಾಹಧನ ನೀಡುತ್ತಿದೆ. ಆದರೆ, ಈ ಬಗ್ಗೆ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿಯಿಲ್ಲ’ ಎಂದು ಹೇಳಿದರು.

‘ರಕ್ತಚಂದನ, ಶ್ರೀಗಂಧದಂತಹ ಬೆಲೆ ಬಾಳುವ ಮರಗಳ ಕಳವು ಹೆಚ್ಚುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಿ. ಪಶು ವೈದ್ಯಕೀಯ ಕೇಂದ್ರಗಳಿಗೆ ಸರ್ಕಾರದಿಂದ ಬರುವ ಔಷಧಗಳನ್ನು ಹಾಗೂ ಪಶುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕು’ ಎಂದು ತಿಳಿಸಿದರು.

‘ರೇಷ್ಮೆ ಬೆಳೆಗಾರರಿಗೆ ನರೇಗಾ ಯೋಜನೆ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು. ಲೋಕೋಪಯೋಗಿ ಇಲಾಖೆ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದ್ದು, ಈ ಹಣ ಸಮರ್ಪಕವಾಗಿ ಬಳಸಿಕೊಂಡು ರಸ್ತೆ ಕಾಮಗಾರಿ ಆರಂಭಿಸಿ. ಎಪಿಎಂಸಿಯಲ್ಲಿ ರೈತರ ಅನುಕೂಲಕ್ಕೆ ಶೌಚಾಲಯ ವ್ಯವಸ್ಥೆ ಮಾಡಿ. ಮಾರುಕಟ್ಟೆಯಲ್ಲಿ ಉತ್ಪಾದನೆಯಾಗುವ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು’ ಎಂದರು.

ಪಿಂಚಣಿ ಸೌಲಭ್ಯ: ‘ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳು, ಮನೆಗೆಲಸದವರು, ಅಗಸರು, ಆಟೊ ಚಾಲಕರು, ಚರ್ಮೋದ್ಯಮದ ಕಾರ್ಮಿಕರು, ಧ್ವನಿ ಮತ್ತು ದೃಶ್ಯ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ಅಸಂಘಟಿತ ವಲಯದ ಕಾರ್ಮಿಕರು ಈ ಯೋಜನೆಗೆ ಹೆಸರು ನೋಂದಾಯಿಸಬೇಕು. ಕೇಂದ್ರ ಸರ್ಕಾರ 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ ₹ 3 ಸಾವಿರ ಪಿಂಚಣಿ ನೀಡುತ್ತದೆ’ ಎಂದು ವಿವರಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಉಪಾಧ್ಯಕ್ಷೆ ಲಕ್ಷ್ಮೀ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಸದಸ್ಯರು, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಇ.ವಿ.ಬಾಬು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು