ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಜೀವನರಾಮ್‌ ಹಸಿರು ಕ್ರಾಂತಿ ಹರಿಕಾರ: ವೆಂಕಟ್‌ರಾಜಾ ಬಣ್ಣನೆ

ಸಮಾಜಕ್ಕೆ ಆದರ್ಶಪ್ರಾಯ ವ್ಯಕ್ತಿ: ಜಿಲ್ಲಾಧಿಕಾರಿ ವೆಂಕಟ್‌ರಾಜಾ ಬಣ್ಣನೆ
Last Updated 5 ಏಪ್ರಿಲ್ 2022, 14:10 IST
ಅಕ್ಷರ ಗಾತ್ರ

ಕೋಲಾರ: ‘ಬಾಬು ಜಗಜೀವನರಾಮ್‌ ಅವರು ಸೃಷ್ಟಿಸಿದ ಹಸಿರು ಕ್ರಾಂತಿಯಿಂದ ದೇಶದಲ್ಲಿ ಬಡವರಿಗೆ ಆಹಾರದ ಕೊರತೆ ದೂರವಾಯಿತು. ಹಸಿರು ಕ್ರಾಂತಿಯ ಹರಿಕಾರ ಬಾಬೂಜಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನಕ್ಕೂ ಆದ್ಯತೆ ಕೊಟ್ಟಿದ್ದರಿಂದ ಇಂದು ಸಮಾಜದಲ್ಲಿ ಆಹಾರ ಪದಾರ್ಥಗಳ ಕೊರತೆಯಿಲ್ಲ’ ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಸ್ಮರಿಸಿದರು.

ಜಿಲ್ಲಾಡಳಿತವು ‌ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಾಬು ಜಗಜೀವನರಾಮ್‌ ಜಯಂತಿ ಉದ್ಘಾಟಿಸಿ ಮಾತನಾಡಿ, ‘ಅಧಿಕಾರ ಮತ್ತು ಆಸ್ತಿಯಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ ಹಾಗೂ ತ್ಯಾಗದಿಂದ ಗಳಿಸಬಹುದೆಂದು ಬಾಬು ಜಗಜೀವನರಾಮ್‌ರ ಬದುಕು ತಿಳಿಸಿ ಕೊಡುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಬಾಬೂಜಿ ಎಂದೇ ಹೆಸರಾಗಿದ್ದ ಬಾಬು ಜಗಜೀವನರಾಮ್‌ ನಿಸ್ವಾರ್ಥ ಸೇವೆ, ಸ್ವಾತಂತ್ರ್ಯ ಚಳವಳಿ ಮತ್ತು ಸಮರ್ಪಣಾ ಮನೋಭಾವದ ಹೋರಾಟದಿಂದ ಸಮಾಜಕ್ಕೆ ಆದರ್ಶಪ್ರಾಯ ವ್ಯಕ್ತಿಯಾಗಿದ್ದಾರೆ. ಅವರು 3 ದಶಕಗಳ ಕಾಲ ಕೇಂದ್ರ ಮಂತ್ರಿಮಂಡಲದ ಸದಸ್ಯರಾಗಿ ಅಪಾರ ಆಡಳಿತ ಅನುಭವ ಗಳಿಸಿದರು. ಸಾರಿಗೆ, ಆಹಾರ, ರೈಲ್ವೆ, ಕೃಷಿ ಮತ್ತು ಸಮುದಾಯ ಅಭಿವೃದ್ಧಿ, ಕಾರ್ಮಿಕ ಮತ್ತು ಉದ್ಯೋಗ ಪುನರ್ವಸತಿ ಕೆಲಸವನ್ನು ಮಾಡಿದ ಹಿರಿಮೆ ಅವರದು’ ಎಂದರು.

‘ಬಿಹಾರದ ಬಡ ಕುಟುಂಬದಲ್ಲಿ ಜನಿಸಿದ ಜಗಜೀವನರಾಮ್‌ 1935ರಲ್ಲಿ ಮೊದಲ ಚುನಾವಣೆ ನಡೆದಾಗ ನಿರ್ಣಾಯಕ ಪಾತ್ರ ವಹಿಸಿದರು. ಕೋಲ್ಕತ್ತಾ ಮತ್ತು ಬನಾರಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿ ದೇಶದ ಹಸಿರು ಕ್ರಾಂತಿಗೆ ಬುನಾದಿ ಹಾಕಿದರು. ಶಿಕ್ಷಣದಿಂದಲೇ ಸಮಾಜದ ಬದಲಾವಣೆ ಸಾಧ್ಯವೆಂದು ಅವರು ಬಲವಾಗಿ ನಂಬಿದ್ದರು’ ಎಂದು ಹೇಳಿದರು.

ಎರಡು ಕಣ್ಣು: ‘ದೇಶದಲ್ಲಿನ ಶೋಷಿತ ಸಮುದಾಯಗಳಿಗೆ ಅಂಬೇಡ್ಕರ್‌ ಹಾಗೂ ಬಾಬು ಜನಜೀವನರಾಮ್‌ ಎರಡು ಕಣ್ಣುಗಳಿದ್ದಂತೆ. ಈ ಮಹನೀಯರು ನೀತಿ ನಿರ್ಣಾಯಕ ಸ್ಥಾನಗಳನ್ನು ಅಲಂಕರಿಸಿ ದೇಶಕ್ಕೆ ಅನನ್ಯ ಸೇವೆ ಸಲ್ಲಿಸಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಅಭಿ‍ಪ್ರಾಯಪಟ್ಟರು.

‘ಜಗಜೀವನರಾಮ್ ಜೀವನದಲ್ಲಿ ತುಂಬಾ ಕಷ್ಟಪಟ್ಟು ಮೇಲೆ ಬಂದವರು. ಬಡತನವಿದ್ದರೂ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸದೆ ಸುಶಿಕ್ಷಿತರಾದರು. ಬಿಹಾರ ಹಿಂದೆ ತೀರಾ ಬಡತನದಿಂದ ಕೂಡಿದ ರಾಜ್ಯವಾಗಿತ್ತು. ಅಲ್ಲಿ ಹುಟ್ಟಿ ಸಾಧನೆ ಮಾಡಿದ ಅವರು ಮಹನೀಯರು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಬೆಂಬಲಿಸಿ, ಶಿಕ್ಷಣದಷ್ಟು ಒಳ್ಳೆಯ ಮದ್ದು ಬೇರೊಂದಿಲ್ಲ, ಶೈಕ್ಷಣಿಕವಾಗಿ ಮುಂದೆ ಬನ್ನಿ ಅವರು ಕರೆ ನೀಡಿದರು’ ಎಂದರು.

ಹಸಿವಿನ ಸಮಸ್ಯೆಯಿಲ್ಲ: ‘1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಜನಸಂಖ್ಯೆ 35 ಕೋಟಿಯಿತ್ತು. ಆಗ ಜನರಿಗೆ ಆಹಾರ ಸಮಸ್ಯೆ ತೀವ್ರವಾಗಿತ್ತು. ಈಗ 138 ಕೋಟಿ ಜನಸಂಖ್ಯೆಯಿದ್ದರೂ ಜನಜೀವನರಾಮ್‌ರ ಶ್ರಮದ ಫಲವಾಗಿ ಹಸಿವಿನ ಸಮಸ್ಯೆ ನೀಗಿದೆ. ಜನಜೀವನರಾಮ್‌ ಕೃಷಿ ಸಚಿವರಾಗಿ ವಿದೇಶದಲ್ಲಿನ ಕೃಷಿಯ ಹೊಸ ತಂತ್ರಜ್ಞಾನವನ್ನು ದೇಶದಲ್ಲಿ ತಂದು ಹಸಿರು ಕ್ರಾಂತಿ ಸೃಷ್ಟಿಸಿದರು’ ಎಂದು ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯುಕೇಶ್‌ಕುಮಾರ್‌ ವಿವರಿಸಿದರು.

ಜಿ.ಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನರೇಂದ್ರಬಾಬು, ನಗರಸಭೆ ಆಯುಕ್ತ ಪ್ರಸಾದ್, ದಲಿತ ಮುಖಂಡರಾದ ವಿಜಯ್‍ಕುಮಾರ್, ಚಂದ್ರಶೇಖರ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT