ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲದ ಗೂಡಾದ ವಚನಕಾರರ ಜಯಂತಿ

ಕಾರ್ಯಕ್ರಮಕ್ಕೆ ಪ್ರೇಕ್ಷಕರ ಕೊರತೆ– ಜನಪ್ರತಿನಿಧಿಗಳ ಸಾಮೂಹಿಕ ಗೈರು
Last Updated 27 ಫೆಬ್ರುವರಿ 2020, 13:37 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾಡಳಿತವು ಇಲ್ಲಿನ ಟಿ.ಚನ್ನಯ್ಯ ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದಲಿತ ವಚನಕಾರರ ಜಯಂತಿಯು ಪ್ರೇಕ್ಷಕರ ಕೊರತೆ ಹಾಗೂ ಜನಪ್ರತಿನಿಧಿಗಳ ಗೈರಿನಿಂದ ಗೊಂದಲದ ಗೂಡಾಯಿತು.

ಪೂರ್ವ ನಿಗದಿಯಂತೆ ರಂಗಮಂದಿರದಲ್ಲಿ ಬೆಳಿಗ್ಗೆ 11ಕ್ಕೆ ಜಯಂತಿ ಆರಂಭವಾಗಬೇಕಿತ್ತು. ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹೆಸರಿಸಲಾಗಿದ್ದ ಯಾವುದೇ ಜನಪ್ರತಿನಿಧಿಗಳು ಮಧ್ಯಾಹ್ನ 12 ಗಂಟೆಯಾದರೂ ರಂಗಮಂದಿರದತ್ತ ಸುಳಿಯಲಿಲ್ಲ.

ಕಾರ್ಯಕ್ರಮ ನಿರ್ವಹಣೆಯ ಹೊಣೆ ಹೊತ್ತಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿಯು ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಬರುವಿಕೆಗಾಗಿ ಗಂಟೆಗಟ್ಟಲೇ ಕಾದು ಬಸವಳಿದರು. ಮತ್ತೊಂದಡೆ ಕಾರ್ಯಕ್ರಮಕ್ಕೆ ಪ್ರೇಕ್ಷಕರ ಕೊರತೆ ತೀವ್ರವಾಗಿ ಕಾಡಿತು.

ಶಾಸಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ತಾ.ಪಂ ಅಧ್ಯಕ್ಷ ಎಂ.ಆಂಜಿನಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಸ್ವಾಮಿ, ಉಪ ವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್ ಶೋಭಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಅವರನ್ನು ಹೊರತುಪಡಿಸಿದರೆ ಆಹ್ವಾನ ಪತ್ರಿಕೆಯಲ್ಲಿ ಹೆಸರಿಸಲಾಗಿದ್ದ ಬಹುತೇಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಾಮೂಹಿಕವಾಗಿ ಗೈರಾದರು.

ಇಷ್ಟೆಲ್ಲಾ ಗೊಂದಲದ ನಡುವೆಯೂ ಮಧ್ಯಾಹ್ನ 12.15ಕ್ಕೆ ಕಾರ್ಯಕ್ರಮ ಆರಂಭವಾಯಿತು. ಆದರೆ, ಪ್ರೇಕ್ಷಕರಿಲ್ಲದೆ ಕಾರ್ಯಕ್ರಮ ಭಣಗುಡುತ್ತಿತ್ತು. ಸಂಘ ಸಂಸ್ಥೆಗಳ ನಾಲ್ಕೈದು ಮಂದಿ ಸದಸ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳು ಆಸಿನರಾಗಿದ್ದ ಕುರ್ಚಿಗಳನ್ನು ಹೊರತುಪಡಿಸಿದರೆ ರಂಗಮಂದಿರದ ಬಹುಪಾಲು ಕುರ್ಚಿಗಳು ಖಾಲಿಯಿದ್ದವು. ಪ್ರೇಕ್ಷಕರ ಕೊರತೆಯ ಮುಜುಗರ ತಪ್ಪಿಸಲು ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಿಬ್ಬಂದಿಯು ಐಟಿಐ ಕಾಲೇಜು ವಿದ್ಯಾರ್ಥಿಗಳನ್ನು ಬಲವಂತವಾಗಿ ಕಾರ್ಯಕ್ರಮಕ್ಕೆ ಕರೆತಂದರು.

ಸಮಾಜ ಛಿದ್ರ: ನಂತರ ಜಯಂತಿ ಉದ್ಘಾಟಿಸಿದ ಶಾಸಕ ಕೆ.ಶ್ರೀನಿವಾಸಗೌಡ, ‘ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕವಾದರೂ ಜಾತಿ ಪದ್ಧತಿ ಜೀವಂತವಾಗಿದೆ. ಸಮಾಜದಲ್ಲಿ ಜಾತಿ ಪದ್ಧತಿ ಹುಟ್ಟಿ ಹಾಕಿರುವ ವ್ಯಕ್ತಿಗಳಿಗೆ ಶಾಪ ತಟ್ಟಬೇಕು. ಹುಟ್ಟುವಾಗ ಯಾರೂ ಜಾತಿ, ಧರ್ಮದಲ್ಲಿ ಅರ್ಜಿ ಹಾಕಿಕೊಳ್ಳುವುದಿಲ್ಲ. ಮನುಷ್ಯರೇ ಸೃಷ್ಟಿಸಿಕೊಂಡಿರುವ ಜಾತಿ ಪದ್ಧತಿಯಿಂದ ಸಮಾಜ ಛಿದ್ರವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ನಾನು ಹಿಂದೆ ದಲಿತರೊಬ್ಬರ ಮನೆಯಲ್ಲಿ ಮೀನು ಸಾರು ಊಟ ಸೇವಿಸಿದ್ದೆ. ಇದರಿಂದ ನಮ್ಮ ತಂದೆ ಹೊಡೆಯುತ್ತಾರೆಂಬ ಭಯದಿಂದ ಬಚ್ಚಿಟ್ಟುಕೊಂಡಿದ್ದೆ. ನಂತರ ತಂದೆಯು ದಲಿತರ ಮನೆಯಲ್ಲಿ ಊಟ ಮಾಡಿದ್ದು ತಪ್ಪಲ್ಲ. ಸಮಾಜಕ್ಕೆ ಒಳ್ಳೆ ಸಂದೇಶ ನೀಡಿದ್ದೀಯಾ ಎಂದು ಹೇಳಿದ್ದರು. ಅಂದಿನಿಂದ ಜಾತೀಯತೆ ನಿರ್ಮೂಲನೆಗೆ ಪ್ರಯತ್ನಿಸುತ್ತಿದ್ದೇನೆ. ಆದರೆ, ಜನರಿಂದ ಸ್ಪಂದನೆ ಸಿಗುತ್ತಿಲ್ಲ’ ಎಂದು ವಿಷಾದಿಸಿದರು.

‘ಜಿಲ್ಲೆಯಲ್ಲಿ ಸಾಕಷ್ಟು ದಲಿತ ಸಂಘಟನೆಗಳಿದ್ದರೂ ಜಯಂತಿಗೆ ಪ್ರೇಕ್ಷಕರೇ ಕೊರೆತ ಕಾಡುತ್ತಿರುವುದು ದುರದೃಷ್ಟಕರ. ಸಮ ಸಮಾಜದ ನಿರ್ಮಾಣಕ್ಕೆ ಹಾಗೂ ಶೋಷಿತರ ಏಳಿಗೆಗೆ ಶ್ರಮಿಸಿದ ಮಹನೀಯರ ಜಯಂತಿ ನಡೆಯುತ್ತಿದ್ದರೂ ಜನ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಎಂದರೆ ಹೇಗೆ?’ ಎಂದು ಪ್ರಶ್ನಿಸಿದರು.

ತಾರತಮ್ಯ ಬಿಡಿ: ‘ಶೋಷಿತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದವರ ತತ್ವಾದರ್ಶ ಮೈಗೂಡಿಸಿಕೊಳ್ಳಬೇಕು. ಅಂಬೇಡ್ಕರ್ ಆಶಯ ಈಡೇರಿಸಬೇಕಾದ ನಾವು ಇಂದು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜಾತಿ, ಧರ್ಮದ ತಾರತಮ್ಯ ಬಿಟ್ಟು ಜೀವನ ರೂಪಿಸಿಕೊಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಅಭಿಪ್ರಾಯಪಟ್ಟರು.

ನಿವೃತ್ತ ಉಪನ್ಯಾಸಕ ರಂಗಾರೆಡ್ಡಿ ಅವರು ದಲಿತ ವಚನಕಾರರ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್, ದಲಿತ ಸಂಯುಕ್ತ ರಂಗ ಸಂಘಟನೆ ಅಧ್ಯಕ್ಷ ಚಂದ್ರಶೇಖರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT