ಭಾನುವಾರ, ಜೂಲೈ 5, 2020
28 °C

ಮಹಿಳೆ ವಿರುದ್ಧ ಅವಾಚ್ಯ ಶಬ್ದ ಬಳಸಿದ ಸಚಿವ ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ ತಾಲ್ಲೂಕಿನ ಎಸ್‌.ಅಗ್ರಹಾರದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮಹಿಳಾ ಸದಸ್ಯರು ಬುಧವಾರ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಘೇರಾವ್‌ ಹಾಕಿ ವಾಗ್ವಾದ ನಡೆಸಿದರು

ಕೋಲಾರ: ತಾಲ್ಲೂಕಿನ ಎಸ್‌.ಅಗ್ರಹಾರದಲ್ಲಿ ಬುಧವಾರ ಕೆರೆಗಳ ಒತ್ತುವರಿ ತೆರವಿಗೆ ಮನವಿ ಮಾಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮಹಿಳಾ ಸದಸ್ಯರ ವಿರುದ್ಧ ಅವಾಚ್ಯ ಶಬ್ದ ಬಳಸಿದ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಸದಸ್ಯರು ಘೇರಾವ್‌ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕೆ.ಸಿ ವ್ಯಾಲಿ ಯೋಜನೆ ವ್ಯಾಪ್ತಿಯ ಎಸ್‌.ಅಗ್ರಹಾರ ಗ್ರಾಮದ ಕೆರೆ ಪರಿಶೀಲಿಸಲು ಬಂದಿದ್ದ ಸಚಿವ ಮಾಧುಸ್ವಾಮಿ ಅವರಿಗೆ ಸಂಘಟನೆಯ ಮಹಿಳಾ ಸದಸ್ಯರು ಕೆರೆಗಳ ಒತ್ತುವರಿ ತೆರವು ಮಾಡುವಂತೆ ಮನವಿ ಸಲ್ಲಿಸಿ ಚರ್ಚೆಗೆ ಮುಂದಾದರು. ಈ ವೇಳೆ ಸಚಿವರು, ‘ಹೇ ರಾಸ್ಕಲ್‌, ಮುಚ್ಚು ಬಾಯಿ’ ಎಂದು ಗದರಿದರು.

ಇದರಿಂದ ಕೆರಳಿದ ಮಹಿಳಾ ಸದಸ್ಯರು, ‘ಏಕೆ ಆ ರೀತಿ ಮಾತನಾಡುತ್ತೀರಿ’ಎಂದು ಸಚಿವರ ವಿರುದ್ಧ ತಿರುಗಿಬಿದ್ದರು. ಇದರಿಂದ ಮತ್ತಷ್ಟು ಕೆಂಡಾಮಂಡಲರಾದ ಸಚಿವರು, ಸದಸ್ಯರನ್ನು ದೂರ ಕಳುಹಿಸುವಂತೆ ಪೊಲೀಸರಿಗೆ ಆದೇಶಿಸಿದರು.

ಸಚಿವರ ಆದೇಶ ಪಾಲನೆಗೆ ಮುಂದಾದ ಪೊಲೀಸರ ಜತೆ ಸದಸ್ಯರು ವಾಗ್ವಾದಕ್ಕಿಳಿದರು. ಇದರಿಂದ ಸ್ಥಳದಲ್ಲಿ ಗೊಂದಲ ಸೃಷ್ಟಿಯಾಯಿತು. ಬಳಿಕ ಪೊಲೀಸರು ಸದಸ್ಯರನ್ನು ಎಳೆದೊಯ್ದು ಪರಿಸ್ಥಿತಿ ತಿಳಿಗೊಳಿಸಿದರು.

ಘಟನೆಯ ಕುರಿತು ವಿರೋಧ ‍ಪ‍ಕ್ಷದ ನಾಯಕ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, ಮಾಧುಸ್ವಾಮಿ ಅವರನ್ನು ತಕ್ಷಣ ಮಹಿಳೆಯ ಕ್ಷಮೆಯಾಚಿಸುವಂತೆ ಮಾಡಿ ಎಂದು ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ. 

ಮಾಧುಸ್ವಾಮಿ ಅವರ ವಿರುದ್ಧ ಪ್ರಕರಣ ದಾಖಲಿಸಿರುವಂತೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಒತ್ತಾಯಿಸಿ ಫೇಸ್‌ಬುಕ್‌ ಪ್ರಕಟಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು