ಬುಧವಾರ, ಜುಲೈ 28, 2021
23 °C
ಕೊರೊನಾ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಮನವಿ

ಪ್ಲಾಸ್ಟಿಕ್‌ ಮುಕ್ತ ಜಿಲ್ಲೆಗೆ ಕೈಜೋಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋವಿಡ್‌–19 ಮಹಾಮಾರಿ ನಿಯಂತ್ರಣಕ್ಕೆ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮದ ಜತೆಗೆ ಸ್ವಚ್ಛ ಮತ್ತು ಪ್ಲಾಸ್ಟಿಕ್‌ ಮುಕ್ತ ಜಿಲ್ಲೆ ನಿರ್ಮಾಣಕ್ಕೆ ಜನರು ಜಿಲ್ಲಾಡಳಿತದ ಜತೆ ಕೈಜೋಡಿಸಬೇಕು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮನವಿ ಮಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಜನ ಜಾಗೃತಿ ವೇದಿಕೆ ಸಹಯೋಗದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೊರೊನಾ ಸೋಂಕಿನ ಜಾಗೃತಿ ಮಾಹಿತಿಯುಳ್ಳ ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, ‘ಜಿಲ್ಲೆಯಲ್ಲಿ ಇಂದಿನಿಂದ ಧಾರ್ಮಿಕ ಕೇಂದ್ರಗಳು ಪುನರಾರಂಭವಾಗಿದ್ದು, ಜನರು ಆರೋಗ್ಯ ಸುರಕ್ಷತಾ ಕ್ರಮ ಪಾಲಿಸಬೇಕು’ ಎಂದರು.

‘ಲಾಕ್‌ಡೌನ್‌ ಸಡಿಲಿಕೆಗೂ ಮುನ್ನ ಕೋಲಾರ ಜಿಲ್ಲೆ ಹಸಿರು ವಲಯದಲ್ಲಿತ್ತು. ಲಾಕ್‌ಡೌನ್‌ ಸಡಿಲಿಕೆ ಬಳಿಕ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಆತಂಕಕಾರಿ ಸಂಗತಿ. ಜನರು ಮುನ್ನೆಚ್ಚರಿಕೆ ಕ್ರಮ ಸರಿಯಾಗಿ ಪಾಲಿಸದಿದ್ದರೆ ಮುಂದೆ ಬಹಳ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕೊರೊನಾ ಸೋಂಕು ಮನುಷ್ಯನಿಂದ ಮನುಷ್ಯನಿಗೆ ಬಹಳ ಬೇಗ ಹರಡುತ್ತದೆ. ಸೋಂಕು ನೇರವಾಗಿ ಶ್ವಾಸಕೋಶ ಆವರಿಸಿ ಉಸಿರಾಟ ಸಮಸ್ಯೆ ಉಂಟು ಮಾಡುತ್ತದೆ. 2019ರ ನವೆಂಬರ್‌ನಲ್ಲಿ ಚೀನಾದಲ್ಲಿ ಪತ್ತೆಯಾಗಿದ್ದ ಈ ಸೋಂಕು ಇಂದು ಜಗತ್ತಿನಾದ್ಯಂತ ಸುಮಾರು 70 ಲಕ್ಷ ಮಂದಿಗೆ ಹರಡಿದೆ’ ಎಂದು ವಿವರಿಸಿದರು.

2.50 ಲಕ್ಷ ಸೋಂಕಿತರು: ‘ದೇಶದಲ್ಲಿ ಸುಮಾರು 2.50 ಲಕ್ಷ ಮಂದಿ ಕೊರೊನಾ ಸೋಂಕಿತರಿದ್ದು, ಈವರೆಗೆ 7 ಸಾವಿರ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ 5,500 ಮಂದಿ ಮಂದಿ ಸೋಂಕಿತರಿದ್ದು, 61 ಮಂದಿ ಮೃತಪಟ್ಟಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಸೇರಿದಂತೆ ನಮ್ಮ ದೇಹದಿಂದ ಹೊರ ಬರುವ ದ್ರವದಿಂದ, ಸೋಂಕಿತರ ಜತೆಗಿನ ಸಂಪರ್ಕದಿಂದ, ಸೋಂಕಿತರು ಬಳಸಿದ ವಸ್ತುಗಳನ್ನು ಉಪಯೋಗಿಸುವುದರಿಂದ ಸೋಂಕು ಹರಡುತ್ತದೆ. ಸೋಂಕಿನಿಂದ ಗುಣಮುಖರಾದರೂ ದುಷ್ಟರಿಣಾಮ ಬೀರುವ ಸಾಧ್ಯತೆಯಿದೆ. ದೈಹಿಕವಾಗಿ ಶಕ್ತಿ ಕ್ಷೀಣಿಸಿರುವವರಿಗೆ ಮತ್ತು ಮಕ್ಕಳಿಗೆ ಈ ಸೋಂಕು ಹೆಚ್ಚು ಅಪಾಯಕಾರಿ’ ಎಂದು ಹೇಳಿದರು.

ಮಾಸ್ಕ್‌ ಧರಿಸಿ: ‘ಕೊರೊನಾ ಸೋಂಕು ತಡೆಗೆ ಜನರು ಮಾರುಕಟ್ಟೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಹೊರಗಿನಿಂದ ಮನೆಗೆ ಹೋದಾಗ ಸ್ಯಾನಿಟೈಸರ್‌ನಿಂದ ಕೈ ತೊಳೆಯಬೇಕು’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಚಂದ್ರಶೇಖರ್‌ ಸಲಹೆ ನೀಡಿದರು,

ಯೋಜನೆಯ ಜಿಲ್ಲಾ ಯೋಜನಾಧಿಕಾರಿ ರಾಮ್ ಪೂಜಾರಿ, ತಾಲ್ಲೂಕು ಯೋಜನಾಧಿಕಾರಿ ಚಂದ್ರಶೇಖರ್, ಕಸಬಾ ಮೇಲ್ವಿಚಾರಕ ಹರೀಶ್‌ಕುಮಾರ್, ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಶಶಿಕುಮಾರ್, ಸದಸ್ಯರಾದ ಅರುಣಾ, ಸುಮಾ, ಮಂಜುಳಾ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು